ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ ಹಿಜಾಬ್ ಕಡ್ಡಾಯವಲ್ಲ ಎಂದಿದ್ದು, ಶಾಲಾ ಸಮವಸ್ತ್ರ ನೀತಿಯೇ ಸರ್ವೋಚ್ಚ ಎಂದು ತೀರ್ಪು ನೀಡಿದೆ. ಹಿಜಾಬ್ 'ಅತ್ಯಗತ್ಯ ಧಾರ್ಮಿಕ ಆಚರಣೆ' ಎಂದು ಸಾಬೀತುಪಡಿಸಲು ವಿದ್ಯಾರ್ಥಿನಿ ವಿಫಲವಾಗಿದ್ದಾಳೆ. ಕರ್ನಾಟಕ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಶಿಸ್ತು ಮತ್ತು ಸಮಾನತೆಗೆ ಸಮವಸ್ತ್ರ ಅಗತ್ಯ ಎಂದು ಕೋರ್ಟ್ ಹೇಳಿದೆ. ಈ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಮುಂದಿರುವ ವಿಚಾರವನ್ನು ಮತ್ತಷ್ಟು ಮಹತ್ವದೆಡೆಗೆ ಕೊಂಡೊಯ್ಯಲಿದೆ.

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಹಿಜಾಬ್

Updated on: Aug 25, 2026 | 10:56 AM

ಪ್ರಯಾಗ್‌ರಾಜ್, ಆಗಸ್ಟ್ 25: ಶಾಲಾ-ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್(High Court) ವಜಾಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ  ಹಿಜಾಬ್  ಧರಿಸುವುದು ‘ಅತ್ಯಗತ್ಯ ಧಾರ್ಮಿಕ ಆಚರಣೆ’ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು, ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಲು ನಿಗದಿತ ಸಮವಸ್ತ್ರ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಯಾಗ್‌ರಾಜ್‌ನ ಟ್ಯಾಗೋರ್ ಪಬ್ಲಿಕ್ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಸುಕೈನಾ ರಿಜ್ವಿ, ತಾನು 6ನೇ ತರಗತಿಯಿಂದಲೂ ಹಿಜಾಬ್ ಧರಿಸುತ್ತಿದ್ದು, ಈಗ ಶಾಲಾ ಆಡಳಿತ ಮಂಡಳಿ ಇದಕ್ಕೆ ನಿರಾಕರಿಸುತ್ತಿರುವುದು ಸಂವಿಧಾನದ 14, 19(1)(ಎ) ಮತ್ತು 25ನೇ ವಿಧಿಯಡಿ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಳು.

ಧಾರ್ಮಿಕ ಪಠ್ಯಗಳ ಕೊರತೆ: ಅರ್ಜಿದಾರರು ತರಗತಿಯೊಳಗೆ ಹಿಜಾಬ್ ಧರಿಸದಿದ್ದರೆ ಧರ್ಮದ ಮೂಲಭೂತ ನಂಬಿಕೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧಿಕೃತ ಧಾರ್ಮಿಕ ಪಠ್ಯಗಳು ಅಥವಾ ಕಾನೂನಾತ್ಮಕ ಆಧಾರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿಲ್ಲ ಎಂದು ಪೀಠ ಗಮನಿಸಿತು.

ಮತ್ತಷ್ಟು ಓದಿ: ಸಿಜೆಪಿ ಪ್ರತಿಭಟನೆ ವೇಳೆ ಸಂಘರ್ಷ ಪ್ರಕರಣ: ತನಿಖೆಗಾಗಿ ಉನ್ನತ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ

ಹಿಂದಿನ ಅನುಮತಿ ಹಕ್ಕಾಗಲಾರದು: ವಿದ್ಯಾರ್ಥಿನಿ ಕೆಳ ತರಗತಿಗಳಲ್ಲಿದ್ದಾಗ ಶಾಲೆಯು ಆಕ್ಷೇಪಿಸದೇ ಇದ್ದುದು ಆಕೆಗೆ ಶಾಶ್ವತ ಕಾನೂನುಬದ್ಧ ಹಕ್ಕನ್ನು ನೀಡುವುದಿಲ್ಲ. ಶಾಲಾ ಆಡಳಿತ ಮಂಡಳಿಯು ಏಕರೂಪ ಹಾಗೂ ತಾರತಮ್ಯವಿಲ್ಲದ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ತೀರ್ಪಿನ ಮಹತ್ವದ ಉಲ್ಲೇಖ:
ಕರ್ನಾಟಕ ತೀರ್ಪಿಗೆ ಮಾನ್ಯತೆ: 2022 ರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿರ್ಬಂಧವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಬಲವಾಗಿ ಉಲ್ಲೇಖಿಸಿದೆ.

ಸಮವಸ್ತ್ರದ ಮುಖ್ಯ ಉದ್ದೇಶವೇ ವಿದ್ಯಾರ್ಥಿಗಳ ನಡುವಿನ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಭಿನ್ನತೆಗಳನ್ನು ಹೋಗಲಾಡಿಸಿ, ತರಗತಿಯಲ್ಲಿ “ಧರ್ಮ-ತಟಸ್ಥ ಮತ್ತು ಶಿಸ್ತುಬದ್ಧ ವಾತಾವರಣ” ನಿರ್ಮಿಸುವುದಾಗಿದೆ. ವೈಯಕ್ತಿಕ ವಿನಾಯಿತಿಗಳನ್ನು ನೀಡುತ್ತಾ ಹೋದರೆ ಸಮವಸ್ತ್ರ ನೀತಿಯ ಮೂಲ ಉದ್ದೇಶವೇ ಹಾಳಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಮುಂದಿರುವ ವಿಚಾರ: ಕರ್ನಾಟಕ ಹಿಜಾಬ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಮೇಲ್ಮನವಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳ ಪೀಠವು ಭಿನ್ನ ತೀರ್ಪು ನೀಡಿದ್ದು, ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದೆ. ಅಲಹಾಬಾದ್ ಹೈಕೋರ್ಟ್‌ನ ಈ ತಾಜಾ ತೀರ್ಪು ದೇಶಾದ್ಯಂತ ಶಾಲಾ ವಸ್ತ್ರ ಸಂಹಿತೆ ಹಾಗೂ ಧಾರ್ಮಿಕ ಹಕ್ಕುಗಳ ಮೇಲಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us