AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಜೆಪಿ ಪ್ರತಿಭಟನೆ ವೇಳೆ ಸಂಘರ್ಷ ಪ್ರಕರಣ: ತನಿಖೆಗಾಗಿ ಉನ್ನತ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪರೀಕ್ಷಾ ಹಗರಣಗಳ ವಿರುದ್ಧದ ಪ್ರತಿಭಟನೆ ಹಾಗೂ ಪೊಲೀಸ್ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂಕೋರ್ಟ್​​ ನಿರ್ಧರಿಸಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಸಿಬಿಐ ನಿರ್ದೇಶಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದ್ದು, ಅಂತಿಮ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸಿಜೆಪಿ ಪ್ರತಿಭಟನೆ ವೇಳೆ ಸಂಘರ್ಷ ಪ್ರಕರಣ: ತನಿಖೆಗಾಗಿ ಉನ್ನತ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ
ಸುಪ್ರೀಂ ಕೋರ್ಟ್ Image Credit source: PTI
ಪ್ರಸನ್ನ ಹೆಗಡೆ
|

Updated on:Aug 18, 2026 | 3:41 PM

Share

ನವದೆಹಲಿ, ಆಗಸ್ಟ್​​ 18: ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ತಿಂಗಳು ಕಾಕ್ರೋಚ್​​ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ನಡೆದ ಘಟನೆಗಳು ಮತ್ತು ಆರೋಪಗಳ ತನಿಖೆಗೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಸಿಬಿಐ ನಿರ್ದೇಶಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಸಮಿತಿಯಲ್ಲಿ ಯಾರು ಇರಬೇಕು ಎಂಬುದರ ಕುರಿತು ಅರ್ಜಿದಾರರು ಹಾಗೂ ಇತರ ಭಾಗಿದಾರರ ಸಲಹೆಗಳನ್ನು ಸೇರಿಸಿ ಅಂತಿಮ ಆದೇಶವನ್ನು ಬುಧವಾರ ಪ್ರಕಟಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಸಿಸಿಟಿವಿ ದೃಶ್ಯಗಳು, ಆರೋಪಗಳ ಪರಿಶೀಲನೆ

ಪ್ರತಿಭಟನೆ ಮತ್ತು ಪೊಲೀಸ್ ಕ್ರಮದ ಸಿಸಿಟಿವಿ ದೃಶ್ಯಗಳನ್ನು ಸಮಿತಿಗೆ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದಿರುವುದಾಗಿ ಆರೋಪಿಸಲಾದ ದುರ್ವರ್ತನೆ ಹಾಗೂ ಇತರ ದೂರುಗಳನ್ನೂ ಸಮಿತಿ ಪರಿಶೀಲಿಸಲಿದೆ.

ಇದನ್ನೂ ಓದಿ: ಮರಣದಂಡನೆ ಶಿಕ್ಷೆ ಜಾರಿ ಹೇಗೆ ಇರಲಿ? ಇಂಜೆಕ್ಷನ್, ಶೂಟ್, ಗ್ಯಾಸ್ ವಿಧಾನ ಬೇಡ, ಗಲ್ಲಿಗೇರಿಸುವ ಪದ್ಧತಿಯೇ ಇರಲಿ ಎಂದ ಸುಪ್ರೀಂ

ವಿದ್ಯಾರ್ಥಿಗಳ ಭವಿಷ್ಯ ಮುಖ್ಯ: ಸುಪ್ರೀಂ ಕೋರ್ಟ್

ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೋರ್ಟ್ ಸೂಚಿಸಿದೆ. ಅಗತ್ಯವಿದ್ದರೆ ಸಂವಿಧಾನದ ಅನುಚ್ಛೇದ 142ರ ವಿಶೇಷ ಅಧಿಕಾರ ಬಳಸುವ ಸಾಧ್ಯತೆಯನ್ನೂ ಕೋರ್ಟ್ ಪ್ರಸ್ತಾಪಿಸಿದೆ. ಇದು ವಿದ್ಯಾರ್ಥಿಗಳ ಬದುಕಿನ ಪ್ರಶ್ನೆ. ಅವರಿಗೆ ಭವಿಷ್ಯವಿದೆ. ಸಂವಿಧಾನದ ಅನುಚ್ಛೇದ 19ರ ಅಡಿಯಲ್ಲಿ ಅವರಿಗೆ ಪ್ರತಿಭಟಿಸುವ ಹಕ್ಕಿದೆ ಎಂದು ಕೋರ್ಟ್ ಹೇಳಿದೆ.

ಜುಲೈ 20ರಂದು ಸಂಸತ್ ಕಡೆಗೆ ನಡೆದ ಸಿಜೆಪಿ (CJP) ನೇತೃತ್ವದ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸುಮಾರು 2,800 ಸಮಾಜಘಾತುಕ ಅಂಶಗಳನ್ನು ಗುರುತಿಸಲಾಗಿದೆ ಎಂದು ತುಷಾರ್ ಮೆಹ್ತಾ ಕೋರ್ಟ್‌ಗೆ ತಿಳಿಸಿದ್ದಾರೆ. ಇವರಲ್ಲಿ ಹಲವರು ಹಿಂದಿನಿಂದಲೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಸಾದಾ ಉಡುಪಿನಲ್ಲಿದ್ದ ಪೊಲೀಸರನ್ನು ಜನಸಂದಣಿ ನಿಯಂತ್ರಣ ಹಾಗೂ ಕಿರುಕುಳಕ್ಕೆ ಒಳಗಾದವರಿಗೆ ನೆರವಾಗಲು ನಿಯೋಜಿಸಲಾಗಿತ್ತು. ಕೆಲವು ಪೊಲೀಸರ ಹೆಸರಿನ ಫಲಕಗಳು ಪ್ರತಿಭಟನಾಕಾರರೊಂದಿಗೆ ನಡೆದ ಘರ್ಷಣೆಯಲ್ಲಿ ಹಾನಿಗೊಳಗಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹೆಸರಿನ ಫಲಕವಿಲ್ಲದ ಸಮವಸ್ತ್ರಧಾರಿ ಪೊಲೀಸರು ಹಾಗೂ ಸಾದಾ ಉಡುಪಿನಲ್ಲಿದ್ದ ಪೊಲೀಸರ ದೃಶ್ಯಗಳು ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:40 pm, Tue, 18 August 26

Follow Us