ಜಲಪಾತದಲ್ಲಿ ಮಗುವನ್ನೆತ್ತಿಕೊಂಡಿದ್ದ ವ್ಯಕ್ತಿಯ ಹೆಗಲ ಮೇಲೆಯೇ ಬಿತ್ತು ಹಾವು: ಅಂಬೋಲಿ ಫಾಲ್ಸ್‌ನಲ್ಲಿ ಮೈ ಜುಂ ಎನಿಸುವ ದೃಶ್ಯ

ಅಂಬೋಲಿ ಜಲಪಾತದಲ್ಲಿ ಮಗುವನ್ನು ಹಿಡಿದಿದ್ದ ವ್ಯಕ್ತಿಯ ಹೆಗಲಿಗೆ ಹಾವು ಬಿದ್ದ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದ ಈ ಆಘಾತಕಾರಿ ಘಟನೆಯಲ್ಲಿ, ಅದೃಷ್ಟವಶಾತ್ ಹಾವು ಕಚ್ಚದೆ ಮಾಯವಾಗಿದೆ, ಮಗು ಮತ್ತು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಜಲಪಾತಗಳ ಸುರಕ್ಷತೆ, ಪಶ್ಚಿಮ ಘಟ್ಟಗಳ ವನ್ಯಜೀವಿಗಳು ಮತ್ತು ಪ್ರವಾಸಿಗರ ಮುನ್ನೆಚ್ಚರಿಕೆ ಕುರಿತು ಎಚ್ಚರಿಕೆ ನೀಡಿದೆ.

ಜಲಪಾತದಲ್ಲಿ ಮಗುವನ್ನೆತ್ತಿಕೊಂಡಿದ್ದ ವ್ಯಕ್ತಿಯ ಹೆಗಲ ಮೇಲೆಯೇ ಬಿತ್ತು ಹಾವು: ಅಂಬೋಲಿ ಫಾಲ್ಸ್‌ನಲ್ಲಿ ಮೈ ಜುಂ ಎನಿಸುವ ದೃಶ್ಯ
ಹಾವು

Updated on: Sep 17, 2026 | 3:15 PM

ಸಿಂಧುದುರ್ಗ, ಸೆಪ್ಟೆಂಬರ್ 17: ಜಲಪಾತದ ನೀರಿನಲ್ಲಿ ಮಗುವನ್ನು ಎತ್ತಿಕೊಂಡು ಎಂಜಾಯ್ ಮಾಡುತ್ತಿದ್ದ ವ್ಯಕ್ತಿಯ ಹೆಗಲ ಮೇಲೆಯೇ ಬೃಹತ್ ಹಾವೊಂದು ಬಿದ್ದಿರುವ ಬೆಚ್ಚಿಬೀಳಿಸುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪ್ರಸಿದ್ಧ ಅಂಬೋಲಿ ಜಲಪಾತದಲ್ಲಿ ನಡೆದಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯ ಈ ಸುಂದರ ತಾಣದಲ್ಲಿ ಕುಟುಂಬ ಸಮೇತ ವಿಹಾರಕ್ಕೆ ಬಂದಿದ್ದ ಪ್ರವಾಸಿಗರು ಈ ಅನಿರೀಕ್ಷಿತ ದೃಶ್ಯ ಕಂಡು ದಿಕ್ಕೆಟ್ಟು ಓಡಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಪುಟ್ಟ ಮಗುವನ್ನು ಕೈಗಳಲ್ಲಿ ಹಿಡಿದುಕೊಂಡು ಜಾರು ಬಂಡೆಗಳ ನಡುವೆ ನೀರಿನಲ್ಲಿ ನಿಂತಿದ್ದಾಗ, ಜಲಪಾತದ ಮೇಲ್ಭಾಗದ ಬಂಡೆಗಳ ಸಂದುಗಳಿಂದ ಏಕಾಏಕಿ ದೊಡ್ಡ ಹಾವೊಂದು ಅವರ ಭುಜದ ಮೇಲೆಯೇ ಬಿದ್ದಿದೆ.

ಹಾವು ಭುಜದ ಮೇಲೆ ಬೀಳುತ್ತಿದ್ದಂತೆ ವ್ಯಕ್ತಿ ಬೆಚ್ಚಿಬಿದ್ದರೂ, ಅದೃಷ್ಟವಶಾತ್ ಹಾವು ಕಚ್ಚದೆ ಅವರ ದೇಹದ ಮೇಲಿಂದ ಜಾರಿ ಬಂಡೆಯ ಬಿರುಕಿಗೆ ನುಸುಳಿ ಮಾಯವಾಗಿದೆ. ಇದರಿಂದ ಮಗು ಮತ್ತು ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯನ್ನು ಕಂಡ ಇತರ ಪ್ರವಾಸಿಗರು ದೊಡ್ಡ ಹಾವು, ಅದು ನಾಗರಹಾವು ಎಂದು ಕೂಗುತ್ತಾ ದಿಕ್ಕಾಪಾಲಾಗಿ ಓಡಿಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದಾಗ್ಯೂ, ಅದು ಯಾವ ಪ್ರಭೇದದ ಹಾವು ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.

ಮತ್ತಷ್ಟು ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಪಶ್ಚಿಮ ಘಟ್ಟಗಳ ಭಾಗವಾಗಿರುವ ಅಂಬೋಲಿ ಪ್ರದೇಶವು ಮಳೆಗಾಲದಲ್ಲಿ ಉರಗಗಳು ಹಾಗೂ ಉಭಯವಾಸಿಗಳಿಗೆ ನೈಸರ್ಗಿಕ ತಾಣವಾಗಿದೆ. ಮಲಬಾರ್ ಪಿಟ್ ವೈಪರ್ ಸೇರಿದಂತೆ ಹಲವು ವಿಷಕಾರಿ ಹಾಗೂ ವಿಷರಹಿತ ಹಾವುಗಳು ಇಲ್ಲಿನ ಬಂಡೆಗಳು, ಮರಗಿಡಗಳು ಮತ್ತು ನೀರಿನ ತೊರೆಗಳ ಆಸುಪಾಸಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮಳೆಗಾಲದಲ್ಲಿ ಬಂಡೆಗಳ ಮೇಲಿನ ಮಣ್ಣು ಕುಸಿಯುವುದರಿಂದ ಅಥವಾ ನೀರಿನ ರಭಸಕ್ಕೆ ಗಿಡಗಂಟೆಗಳಲ್ಲಿ ಅಡಗಿರುವ ಹಾವುಗಳು, ಚೇಳುಗಳು ನೈಸರ್ಗಿಕವಾಗಿ ಜಲಪಾತದ ನೀರಿಗೆ ಜಾರಿಬೀಳುವ ಅಪಾಯವಿರುತ್ತದೆ.

ವಿಡಿಯೋ

ಜಲಪಾತಗಳ ತಳಭಾಗದಲ್ಲಿ ನಿಲ್ಲುವಾಗ ಮೇಲ್ಭಾಗದ ಬಂಡೆಗಳು, ದಟ್ಟ ಸಸ್ಯವರ್ಗ ಮತ್ತು ಕಲ್ಲಿನ ಬಿರುಕುಗಳ ಬಗ್ಗೆ ಸದಾ ನಿಗಾ ಇರಿಸಬೇಕು ಹಾಗೂ ಜಾರುವ ಬಂಡೆಗಳಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ವನ್ಯಜೀವಿ ತಜ್ಞರು ಮತ್ತು ಸ್ಥಳೀಯ ಆಡಳಿತ ಮನವಿ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us