ರಾಜೀನಾಮೆ ಪರ್ವ: TMCಗೆ ಬೇಡವಾದ ಹಳಸಲುಗಳು ಪಕ್ಷ ತ್ಯಜಿಸಿವೆ- ಮಮತಾ ಬ್ಯಾನರ್ಜಿ

| Updated By: ganapathi bhat

Updated on: Apr 06, 2022 | 11:33 PM

ಬಿಜೆಪಿ ರ್ಯಾಲಿ ಸಂದರ್ಭ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಇನ್ನೂ ಹಲವು ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಅಮಿತ್ ಶಾ ಕೂಡ ಸೂಚನೆ ನೀಡಿದ್ದಾರೆ.

ರಾಜೀನಾಮೆ ಪರ್ವ: TMCಗೆ ಬೇಡವಾದ ಹಳಸಲುಗಳು ಪಕ್ಷ ತ್ಯಜಿಸಿವೆ- ಮಮತಾ ಬ್ಯಾನರ್ಜಿ
ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ಟಿಎಂಸಿ ಪಕ್ಷದಿಂದ ಹಿರಿಯ ನಾಯಕರ ರಾಜೀನಾಮೆ, ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ, ತೃಣಮೂಲ ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ ಇತ್ಯಾದಿ ಬೆಳವಣಿಗೆಗಳ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ನಿನ್ನೆ ಪಕ್ಷದ ನಾಯಕರ ಆಂತರಿಕ ಸಭೆ ನಡೆಸಿದ್ದಾರೆ.

ಟಿಎಂಸಿ ತೊರೆಯುತ್ತಿರುವ ನಾಯಕರ ಬಗ್ಗೆ ಮಾತನಾಡಿ, ಟಿಎಂಸಿಗೆ ಬೇಡವಾದ ಹಳಸಲುಗಳು ಪಕ್ಷ ತ್ಯಜಿಸಿ ಅವರ ದಾರಿ ಹಿಡಿದಿದ್ದಾರೆ. ಪಕ್ಷಕ್ಕೆ ಹೊರೆಯಾಗಿದ್ದವರು ಬಿಟ್ಟು ಹೋಗಿದ್ದಾರೆ. ಅದಕ್ಕಾಗಿ ಚಿಂತಿಸುವುದು ಬೇಡ ಎಂದು ಹೇಳಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ ಮಮತಾ ಬ್ಯಾನರ್ಜಿ ನಿವಾಸದಲ್ಲಿ 7 ಗಂಟೆಗೆ ಆರಂಭವಾಗಿದ್ದ ಸಭೆಯು ರಾತ್ರಿ 9.30ವರೆಗೆ ನಡೆದಿತ್ತು. ಟಿಎಂಸಿ ನಾಯಕರಾದ ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ತಿಳಿಸಿದ್ದರು. ಜೊತೆಗೆ, ಇತರ ವಿಧಾನಸಭಾ ಸದಸ್ಯರಾದ ಸಿಲ್​ಭದ್ರ ದತ್ತಾ, ಬನಸ್ರೀ ಮೈತಿ ಸಹಿತ ಕನಿಷ್ಠ 10ರಷ್ಟು ಟಿಎಂಸಿ ಸದಸ್ಯರು ಕಳೆದೆರಡು ದಿನಗಳಲ್ಲಿ ಪಕ್ಷಕ್ಕೆ ವಿದಾಯ ತಿಳಿಸಿದ್ದರು.

ಈ ನಡೆಯು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇಂದು ಮತ್ತು ನಾಳೆ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿ ನೀಡಲಿದ್ದು, ಟಿಎಂಸಿಯಿಂದ ಹೊರಬಂದಿರುವ ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕಾರಣದಿಂದ ನಿನ್ನೆ ನಡೆದ ಸಭೆ ಮಹತ್ವ ಪಡೆದುಕೊಂಡಿತ್ತು.

ಹಲವು ಟಿಎಂಸಿ ನಾಯಕರು ಬಿಜೆಪಿ ಸೇರುವ ಸಾಧ್ಯತೆ
ಬಿಜೆಪಿ ರ್ಯಾಲಿ ಸಂದರ್ಭ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಅಮಿತ್ ಶಾ ಕೂಡ ಸೂಚನೆ ನೀಡಿದ್ದಾರೆ. ಟಿಎಂಸಿ ಹಿರಿಯ ನಾಯಕ ಸುವೇಂದು ಅಧಿಕಾರಿ ಅಮಿತ್ ಶಾ ಜೊತೆ ಮಿಡ್ನಾಪುರ್​ಗೆ ಬರುವ ಸಾಧ್ಯತೆ ಇದೆ.

ಈ ಹಿಂದೆ ಪಕ್ಷದಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿ, ಟಿಎಂಸಿ ಪಕ್ಷ ತೊರೆಯುವ ಸೂಚನೆ ನೀಡಿದ್ದ ಜಿತೇಂದರ್ ತಿವಾರಿ, ನಿನ್ನೆ ರಾತ್ರಿ ಹೇಳಿಕೆ ಬದಲಿಸಿದ್ದಾರೆ. ನಾನು ತೃಣಮೂಲ ಕಾಂಗ್ರೆಸ್ ಜೊತೆಗೆ ಇರಲಿದ್ದೇನೆ. ಮಮತಾ ಬ್ಯಾನರ್ಜಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಹೇಳಿ ಯೂ ಟರ್ನ್ ಹಾಕಿದ್ದಾರೆ. ತಿವಾರಿ ಈ ನಡೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ತಿವಾರಿ ಬಿಜೆಪಿ ಸೇರ್ಪಡೆಯಾಗಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಲೋಕಸಭಾ ಸದಸ್ಯ ಬಾಬುಲ್ ಸುಪ್ರಿಯೊ, ಜಿತೇಂದರ್ ತಿವಾರಿ ಬಿಜೆಪಿಗೆ ಬರುವುದನ್ನು ವಿರೋಧಿಸಿದ್ದಾರೆ. ಹಿರಿಯ ನಾಯಕರ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ, ಬಿಜೆಪಿ ಪಕ್ಷದ ಕೆಲಸಗಾರರನ್ನು ದೈಹಿಕವಾಗಿ, ಮಾನಸಿಕವಾಗಿ ತೊಂದರೆ ನೀಡಿದ ಯಾವುದೇ ಟಿಎಂಸಿ ನಾಯಕರು ಬಿಜೆಪಿಗೆ ಬರುವುದನ್ನು ವಿರೋಧಿಸುತ್ತೇನೆ ಎಂದಿದ್ದಾರೆ.

ಜನವರಿಯಲ್ಲಿ ಮಮತಾ ಬ್ಯಾನರ್ಜಿ ಬಹುಮತ ಕಳೆದುಕೊಳ್ಳಲಿದ್ದಾರೆ?
ಮುಂದಿನ ಜನವರಿ ತಿಂಗಳೊಳಗೆ ಬಿಜೆಪಿಯ 60ರಿಂದ 65ರಷ್ಟು ಟಿಎಂಸಿ ಪಕ್ಷದ ವಿಧಾನಸಭಾ ಸದಸ್ಯರು ತಮ್ಮ ಪಕ್ಷ ತೊರೆದು, ಬಿಜೆಪಿ ಸೇರಲಿದ್ದಾರೆ ಎಂಬ ಬಗ್ಗೆ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಈ ಮೂಲಕ ತೃಣಮೂಲ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಳ್ಳಲಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಮಾತನಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ‘ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’

Published On - 2:17 pm, Sat, 19 December 20