ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ; ಮುಂಗಾರು ಅಧಿವೇಶದಲ್ಲಿ ಮಣಿಪುರ ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ
ಮಣಿಪುರದ ಪರಿಸ್ಥಿತಿಯ ಬಗ್ಗೆ ಸದನವನ್ನು ಮೂರು ಬಾರಿ ಮುಂದೂಡಿದ ನಂತರ ಗೃಹ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ಮಧ್ಯಾಹ್ನ 2.30 ಕ್ಕೆ ಸದನ ಸಭೆ ಸೇರಿದಾಗ, ಎರಡೂ ಕಡೆಯ ಸಂಸದರು ಈ ವಿಷಯದ ಬಗ್ಗೆ ಚರ್ಚೆಯನ್ನು ಬಯಸುತ್ತಾರೆ ಎಂದು ಹೇಳಿದರು
ದೆಹಲಿ ಜುಲೈ 24: ಮಣಿಪುರದ (Manipur) ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ವಿಡಿಯೊ ಕುರಿತು ಪ್ರತಿಪಕ್ಷಗಳ ವಿರೋಧದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ. ಅದೇ ವೇಳೆ ಪ್ರತಿಪಕ್ಷಗಳು ಏಕೆ ಸಹಕರಿಸುತ್ತಿಲ್ಲ ಎಂದು ಕೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರದಲ್ಲಿನ ವೈರಲ್ ವಿಡಿಯೊ ಬಗ್ಗೆ ಪ್ರತಿಪಕ್ಷಗಳು ಚರ್ಚೆಗೆ ಒತ್ತಾಯಿಸುತ್ತಿವೆ. ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಕೇಂದ್ರ ಒಪ್ಪಿದೆ. ಇದಕ್ಕೂ ಮುನ್ನ ಲೋಕಸಭೆಯಲ್ಲಿ (Lok sabha) ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡಲು ಕೇಂದ್ರ ಸಿದ್ಧವಾಗಿದೆ ಎಂದಿದ್ದಾರೆ.
ಲೋಕಸಭೆಯಲ್ಲಿ ಸಂಕ್ಷಿಪ್ತ ಭಾಷಣದಲ್ಲಿ ಅಮಿತ್ ಶಾ, ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಿದ್ದು ಮಣಿಪುರ ವಿಚಾರದಲ್ಲಿ ಸತ್ಯ ಹೊರಬರುವುದು ಮುಖ್ಯ ಎಂದರು.
ಮಣಿಪುರದ ಪರಿಸ್ಥಿತಿಯ ಬಗ್ಗೆ ಸದನವನ್ನು ಮೂರು ಬಾರಿ ಮುಂದೂಡಿದ ನಂತರ ಗೃಹ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ಮಧ್ಯಾಹ್ನ 2.30 ಕ್ಕೆ ಸದನ ಸಭೆ ಸೇರಿದಾಗ, ಎರಡೂ ಕಡೆಯ ಸಂಸದರು ಈ ವಿಷಯದ ಬಗ್ಗೆ ಚರ್ಚೆಯನ್ನು ಬಯಸುತ್ತಾರೆ ಎಂದು ಹೇಳಿದರು. ಆದಾಗ್ಯೂ, ವಿರೋಧ ಪಕ್ಷದ ಸಂಸದರು ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು.
ಸಂಸತ್ತಿನ ಮುಂಗಾರು ಅಧಿವೇಶನಕ್ಕಾಗಿ ಗುರುವಾರ ಸಭೆ ಸೇರಿದಾಗ, ಕಳೆದ ಕೆಲವು ತಿಂಗಳುಗಳಲ್ಲಿ ಜನಾಂಗೀಯ ಹಿಂಸಾಚಾರವು 100 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿಯ ಕುರಿತು ಚರ್ಚೆಯನ್ನು ಕೋರಿ ಕನಿಷ್ಠ 15 ಪ್ರತಿಪಕ್ಷಗಳ ಸಂಸದರು ಮುಂದೂಡಿಕೆ ಸೂಚನೆಗಳನ್ನು ನೀಡಿದರು. ಈ ವಿಷಯದ ಬಗ್ಗೆ ಚರ್ಚಿಸಲು ಕೇಂದ್ರ ಒಪ್ಪಿಗೆ ನೀಡಿತು. ಆದರೆ ತಾಂತ್ರಿಕ ಕಾರಣದಿಂದ ಗೊಂದಲ ಉಂಟಾಯಿತು.
ವಿರೋಧ ಪಕ್ಷದ ಸಂಸದರು ಈ ವಿಷಯವನ್ನು ನಿಯಮ 267 ರ ಅಡಿಯಲ್ಲಿ ಚರ್ಚಿಸಬೇಕೆಂದು ಬಯಸಿದರು. ಈ ನಿಯಮದ ಅಡಿಯಲ್ಲಿ, ಸದನದಲ್ಲಿ ಎಲ್ಲಾ ವ್ಯವಹಾರಗಳನ್ನು ಅಮಾನತುಗೊಳಿಸಿ ನಿರ್ದಿಷ್ಟ ವಿಷಯವನ್ನು ಚರ್ಚಿಸಲಾಗಿದೆ. ರಾಜ್ಯಸಭೆಯಲ್ಲಿ 27 ಸಂಸದರು ನಿಯಮ 267 ರ ಅಡಿಯಲ್ಲಿ ಚರ್ಚೆಯನ್ನು ಎತ್ತುವಂತೆ ನೋಟಿಸ್‌ಗಳನ್ನು ಸಲ್ಲಿಸಿದ್ದರು. ಆದರೆ, ಕೇಂದ್ರವು ನಿಯಮ 176 ರ ಅಡಿಯಲ್ಲಿ ಚರ್ಚೆಗೆ ಮಾತ್ರ ಸಿದ್ಧವಾಗಿದೆ, ಇದು ಅಲ್ಪಾವಧಿಯ ಚರ್ಚೆಗೆ ಅವಕಾಶ ನೀಡುತ್ತದೆ.
ಇದನ್ನೂ ಓದಿ: 1954ರಲ್ಲಿ ಓಪನ್ಹೈಮರ್ಗೆ ಜವಾಹರಲಾಲ್ ನೆಹರು ಹೀಗೊಂದು ಆಫರ್ ಕೊಟ್ಟಿದ್ದರು: ಅಮೆರಿಕದ ಲೇಖಕ
ಮಣಿಪುರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರತಿಪಕ್ಷದ ಆಡಳಿತವಿರುವ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲಾ ರಾಜ್ಯಗಳ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Mon, 24 July 23