ನವದೆಹಲಿ: ಗುಜರಾತ್ ಗಲಭೆ ಪ್ರಕರಣದ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯಾವುದೇ ನಾಟಕ ಮಾಡಿಲ್ಲ. 2002ರ ಗುಜರಾತ್ ಗಲಭೆಗೆ (Gujarat Riots) ಸಂಬಂಧಿಸಿದ ಸುಳ್ಳು ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ 19 ವರ್ಷಗಳಿಂದ ಮೌನವಾಗಿ ಸಹಿಸಿಕೊಂಡಿದ್ದಾರೆ. ಅವರು ಒಳಗೊಳಗೇ ಈ ಬಗ್ಗೆ ಕೊರಗುವುದನ್ನು ನಾನು ನೋಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಗುಜರಾತ್ ಗಲಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಮೋದಿಜೀ 19 ವರ್ಷಗಳ ಕಾಲ ಮೌನವಾಗಿ ಸುಳ್ಳು ಆರೋಪಗಳನ್ನು ಸಹಿಸಿಕೊಂಡರು. 2002ರ ಗಲಭೆಯಲ್ಲಿ ಮೋದಿ ವಿರುದ್ಧ ಸುಳ್ಳು ಆರೋಪ ಮಾಡಲಾಯಿತು. ಆದರೆ, ಶಿವನು ವಿಷ ಕುಡಿದಂತೆ ಮೌನವಾಗಿ ಮೋದಿಯವರು ಆರೋಪಗಳ ನೋವನ್ನು ನುಂಗಿಕೊಂಡರು. ಅವರ ವಿರುದ್ಧದ ಆರೋಪಗಳ ಬಗ್ಗೆ ಬಿಜೆಪಿಯಿಂದ ಯಾರೂ ಧರಣಿ ಮಾಡಲಿಲ್ಲ. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಯ ವಿಚಾರಣೆಯ ಬಗ್ಗೆ ಕಾಂಗ್ರೆಸ್ ನಾಯಕರು ದಿನಗಟ್ಟಲೆ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ಅಮಿತ್ ಷಾ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
#WATCH | A tall leader fought this 18-19-yr-long fight without saying a word&braving all pain like ‘vishpaan’ of Lord Shankar…I saw him suffering through this very closely. Only a strong-willed person could’ve taken stand to not say anything as case was sub-judice: HM Amit Shah pic.twitter.com/aATkeKbKhE
— ANI (@ANI) June 25, 2022
ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿಯವರಿಗೆ ಕ್ಲೀನ್ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನಿನ್ನೆ ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಆರೋಪಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದ್ದೇನೆ. ಪ್ರಧಾನಿ ಮೋದಿ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ ಎಂಬುದು ಸಾಬೀತಾಗಿದೆ. ನನ್ನನ್ನೂ ಜೈಲಿಗೆ ಹಾಕಲಾಯಿತು. ಆದರೆ, ಇವು ರಾಜಕೀಯ ಪ್ರೇರಿತ ಎಂದು ನ್ಯಾಯಾಲಯವೇ ಹೇಳಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ, ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪ್ರಯೋಗಿಸಿದ್ದ ಅಸ್ತ್ರವೇ ರಾಹುಲ್, ಸೋನಿಯಾ ಗಾಂಧಿಗೆ ತಿರುಗುಬಾಣವಾಯಿತೇ?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಇಡಿ ಪ್ರಶ್ನಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಳೆದ ವಾರ ಜಾರಿ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಮೋದಿಯವರು ಎಸ್‌ಐಟಿ ಮುಂದೆ ಹಾಜರಾಗುವಾಗ ನಾಟಕ ಮಾಡಲಿಲ್ಲ. ಎಸ್‌ಐಟಿ ಸಿಎಂಗೆ ಪ್ರಶ್ನಿಸಲು ಬಯಸಿದರೆ ಅವರೇ ಸಹಕರಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್ನವರು ಏಕೆ ಪ್ರತಿಭಟಿಸುತ್ತಿದ್ದಾರೆ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
Interview to ANI. https://t.co/Wxib4Woz8C
— Amit Shah (@AmitShah) June 25, 2022
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ವಿಚಾರಣೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ನರೇಂದ್ರ ಮೋದಿ ಎಸ್‌ಐಟಿ ಮುಂದೆ ಹಾಜರಾಗುವಾಗ ನಾಟಕ ಮಾಡಲಿಲ್ಲ . ಯಾರಿಗೂ ತಮ್ಮ ಬೆಂಬಲಕ್ಕೆ ಬಂದು ಧರಣಿ ನಡೆಸಲು ಹೇಳಲಿಲ್ಲ. ಆದರೆ, ಕಾಂಗ್ರೆಸ್ ದೇಶಾದ್ಯಂತ ಹೈಡ್ರಾಮಾ ಮಾಡಿ ರಾಹುಲ್ ಗಾಂಧಿ ಪರ ಪ್ರತಿಭಟನೆ ನಡೆಸುತ್ತಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಶುಕ್ರವಾರ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪಿಎಂ ನರೇಂದ್ರ ಮೋದಿ ಸೇರಿದಂತೆ 63 ಜನರಿಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿದ್ದ ಆದೇಶವನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕಾಂಗ್ರೆಸ್ ನಾಯಕ ಎಹ್ಸಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆ ಅರ್ಜಿಯು ಅರ್ಹವಾಗಿಲ್ಲ ಎಂದು ಹೇಳಿದೆ. 2002ರ ಫೆಬ್ರವರಿ 28ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಎಹ್ಸಾನ್ ಜಫ್ರಿ ಕೊಲ್ಲಲ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
Published On - 11:34 am, Sat, 25 June 22