ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನ ಮುಗಿಸಿಕೊಂಡು ಬರುತ್ತಿದ್ದ ಕೋಲಾರದ ಐವರು ದುರ್ಮರಣ
ಆಂಧ್ರಪ್ರದೇಶದ ಕೋಟೆಕಲ್ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕರ್ನಾಟಕದ ಕೋಲಾರ ಮೂಲದ 5 ಮಂದಿ ಮೃತಪಟ್ಟಿದ್ದಾರೆ. ಮಂತ್ರಾಲಯದಿಂದ ರಾಘವೇಂದ್ರ ಸ್ವಾಮಿ ದರ್ಶನ ಮುಗಿಸಿ ವಾಪಸ್ ಬುರತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಮೃತರ ಪೈಕಿ ಇಬ್ಬರು ಮಕ್ಕಳಿದ್ದರು ಎಂದು ಹೇಳಲಾಗಿದೆ.ಇನ್ನೊಂದು ಕಾರಿನಲ್ಲಿದ್ದವರಿಗೆ ಗಾಯಗಳಾಗಿವೆ.

ಆಂಧ್ರಪ್ರದೇಶ , ನ.29: ಆಂಧ್ರದ (Andhra Pradesh car accident) ಎಮ್ಮಿಗನೂರು ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಇಂದು ಮುಂಜಾನೆ 5 ಗಂಟೆಗೆ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಕರ್ನಾಟಕದ 5 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಒಂದೇ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೋಲಾರದ ಚಿಕ್ಕಹೊಸಳ್ಳಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ. ಇವರು ಮಂತ್ರಾಲಯದಿಂದ ರಾಘವೇಂದ್ರ ಸ್ವಾಮಿಯ ದರ್ಶನ ಮುಗಿಸಿಕೊಂಡು ಊರಿನ ಕಡೆಗೆ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನೊಂದು ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ವಿಫ್ಟ್ ಡಿಜೈರ್‌ನಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಫಾರ್ಚೂನರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮೂವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಎಂದು ಹೇಳಲಾಗಿದೆ. ಅಡೋನಿ ಕಡೆಗೆ ಪ್ರಯಾಣಿಸುತ್ತಿದ್ದ ಫಾರ್ಚೂನರ್ ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರಣ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಲಾಕ್ ಫ್ರೈಡೇ ಸೇಲ್ ಹೆಸರಿನಲ್ಲಿ ಮೋಸ ಹೋಗಬೇಡಿ, 2,000ಕ್ಕೂ ಹೆಚ್ಚು ನಕಲಿ ವೆಬ್‌ಸೈಟ್‌ಗಳು
ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ, ಅಪಘಾತ ಸಂಭವಿಸಿದಾಗ ಮೃತರು ಕರ್ನಾಟಕದವರಾಗಿದ್ದು, ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಇದೀಗ ಈ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದ್ದು, ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಹಿಂದೆಯೂ ಇಂತಹ ಅಪಘಾತಗಳು ಸಂಭವಿಸಿದೆ. ಕರ್ನೂಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬಸ್ ಅಪಘಾತದ ನಂತರ, ರಸ್ತೆ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಲೇ ಇವೆ, ಇದು ಪ್ರಯಾಣಿಕರಲ್ಲಿ ಕಳವಳವನ್ನುಂಟು ಮಾಡಿದೆ. ಜೀವಹಾನಿಯನ್ನು ತಪ್ಪಿಸಲು ವಾಹನ ಚಾಲಕರು ವೇಗದ ಶಿಸ್ತು ಕಾಯ್ದುಕೊಳ್ಳಲು, ಸಂಚಾರ ನಿಯಮಗಳನ್ನು ಪಾಲಿಸಲು ಮತ್ತು ವಿಶೇಷವಾಗಿ ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Sat, 29 November 25




