Chandrababu Naidu: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡುಗೆ ಭರ್ಜರಿ ಜಯ; ಜೂನ್ 9ಕ್ಕೆ ಸಿಎಂ ಆಗಿ ಪ್ರಮಾಣವಚನ
Andhra Pradesh Elections 2024: ತೆಲುಗು ದೇಶಂ ಪಕ್ಷ (ಟಿಡಿಪಿ) ಈ ಬಾರಿಯ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಮುನ್ನಡೆ ಸಾಧಿಸಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಭರ್ಜರಿ ಜಯ ಸಿಕ್ಕಿದ್ದು, ಜೂನ್ 9ಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ.
ನವದೆಹಲಿ: ಆಂಧ್ರಪ್ರದೇಶದ ರಾಜಕೀಯದಲ್ಲಿ (Andhra Pradesh Elections) ಗಮನಾರ್ಹ ತಿರುವು ಉಂಟಾಗಿದ್ದು, ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ ಪಕ್ಷ 16 ಲೋಕಸಭೆ ಮತ್ತು 130 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) 2024ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಮುನ್ನಡೆ ಸಾಧಿಸಿದೆ. ಜೂನ್ 9ರಂದು ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷ ಘೋಷಿಸಿದೆ.
2019ರ ರಾಜ್ಯ ಚುನಾವಣೆಯಲ್ಲಿ, ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) 175 ಸ್ಥಾನಗಳಲ್ಲಿ 151 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿತು. ಕಡಪ, ಕರ್ನೂಲ್, ನೆಲ್ಲೂರು ಮತ್ತು ವಿಜಯನಗರಂ ಸೇರಿದಂತೆ ಪ್ರಮುಖ ಜಿಲ್ಲೆಗಳನ್ನು ವೈಎಸ್‌ಆರ್‌ಸಿಪಿ ಗೆದ್ದಿದೆ. ಪ್ರಸ್ತುತ ಟಿಡಿಪಿ ಕೇವಲ 23 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಜನಸೇನಾ ಪಕ್ಷ (ಜೆಎಸ್ಪಿ) ಮೈತ್ರಿಕೂಟವು ಒಂದೇ ಒಂದು ಸ್ಥಾನವನ್ನು ಗೆದ್ದಿದೆ.
“ಎಲ್ಲಾ ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಗೆಲುವನ್ನು ಸ್ಪಷ್ಟವಾಗಿ ಸೂಚಿಸಿವೆ. ಈ ಮೈತ್ರಿಯು ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಸರ್ಕಾರಗಳನ್ನು ರಚಿಸಲಿದೆ” ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಂದ ನಂತರ ಚಂದ್ರಬಾಬು ನಾಯ್ಡು ಹೇಳಿದ್ದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ; ಕುಮಾರಸ್ವಾಮಿ ನನ್ನನ್ನು ತಮ್ಮ ಪಕ್ಷದ ಅಭ್ಯರ್ಥಿಯಂತೆ ಭಾವಿಸಿ ಪ್ರಚಾರ ಮಾಡಿದರು: ಡಾ ಕೆ ಸುಧಾಕರ್
ಚುನಾವಣಾ ಆಯೋಗದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಟಿಡಿಪಿ 130, ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್‌ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿ 144 ವಿಧಾನಸಭೆ ಮತ್ತು 17 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 6 ಲೋಕಸಭೆ ಮತ್ತು 10 ವಿಧಾನಸಭೆ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜನಸೇನೆ 2 ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ; ನನ್ನಿಂದ ಚಿಕಿತ್ಸೆ ಪಡೆದವರ ಪ್ರೀತಿ-ಅಭಿಮಾನ ವೋಟುಗಳಲ್ಲಿ ಪರಿವರ್ತನೆಯಾಗಿದೆ: ಡಾ ಮಂಜುನಾಥ್
ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ಕ್ರಮವಾಗಿ ಕುಪ್ಪಂ ಮತ್ತು ಮಂಗಳಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ವೈಎಸ್‌ಆರ್‌ಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುಖ್ಯಮಂತ್ರಿ ಜಗನ್ ರೆಡ್ಡಿ ಪುಲಿವೆಂದುಲಾದಲ್ಲಿ ಟಿಡಿಪಿ ಪ್ರತಿಸ್ಪರ್ಧಿ ಬಿ ರವಿಗಿಂತ 21,292 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪವನ್ ಕಲ್ಯಾಣ್ ಅವರು ಪಿಠಾಪುರಂನಲ್ಲಿ ವೈಎಸ್‌ಆರ್‌ಸಿಪಿ ಪ್ರತಿಸ್ಪರ್ಧಿ ವಿ ಗೀತಾ ಅವರಿಗಿಂತ 22,818 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ