ನ್ಯಾಯಾಂಗ ನಿಂದನೆ : ಆಂಧ್ರದ 3 ಐಎಎಸ್ ಅಧಿಕಾರಿಗಳಿಗೆ 1 ತಿಂಗಳು ಜೈಲು

ನ್ಯಾಯಾಂಗ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮೂವರು ಹಿರಿಯ ಐಎಎಸ್ ಅಧಿಕಾರಿಗಳಿಗೆ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಿ ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ನ್ಯಾಯಾಂಗ ನಿಂದನೆ : ಆಂಧ್ರದ 3 ಐಎಎಸ್ ಅಧಿಕಾರಿಗಳಿಗೆ 1 ತಿಂಗಳು ಜೈಲು
ನ್ಯಾಯಾಲಯದ ಆದೇಶ
Follow us
TV9 Web
| Updated By: ನಯನಾ ರಾಜೀವ್

Updated on: May 07, 2022 | 11:12 AM

ಅಮರಾವತಿ: ನ್ಯಾಯಾಂಗ ನಿಂದನೆ( Contempt Of Court)ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ( Andhra Pradesh)ದ ವಿಶೇಷ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮೂವರು ಹಿರಿಯ ಐಎಎಸ್(IAS) ಅಧಿಕಾರಿಗಳಿಗೆ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಿ ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ನ್ಯಾಯಾಲಯ ನಿಗದಿಪಡಿಸಿದ ಸಮಯದಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ. ದೇವಾನಂದ ಹೇಳಿದ್ದಾರೆ.

2019ರ ಅಕ್ಟೋಬರ್​ನಲ್ಲಿ ಗ್ರಾಮ ಕೃಷಿ ಸಹಾಯಕರ ಹುದ್ದೆಗೆ ಅರ್ಜಿದಾರರ ಅಭ್ಯರ್ಥಿತನವನ್ನು ಪರಿಗಣಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ ಹೈಕೋರ್ಟ್ ಆದೇಶ ಜಾರಿಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ದಾವೆ ದಾಖಲಿಸಿದ್ದರು. 2020ರಲ್ಲಿ ನ್ಯಾಯಾಂಗ ನಿಂದನೆ ದಾವೆ ಸಲ್ಲಿಕೆಯಾದ ಬಳಿಕ ಅರ್ಜಿದಾರರನ್ನು ಗ್ರಾಮ ಕೃಷಿ ಸಹಾಯಕ ಹುದ್ದೆಗೆ ಪರಿಗಣಿಸಲು ಅನರ್ಹ ಎಂದು ಘೋಷಿಸಿದ್ದರು.

ಕೃಷಿ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಪೂನಮ್ ಮಲಕೊಂಡಯ್ಯ, ಕೃಷಿ ಇಲಾಖೆಯ ಹಿಂದಿನ ಆಯುಕ್ತ ಎಚ್ ಅರುಣ್ ಕುಮಾರ್ ಮತ್ತು ಹಿಂದಿನ ಕರ್ನೂಲ್ ಜಿಲ್ಲಾಧಿಕಾರಿ ಜಿ. ವೀರಪಾಂಡಯ್ಯ ಅವರು ಶಿಕ್ಷೆಗೆ ಒಳಗಾದ ಅಧಿಕಾರಿಗಳು. ಆಂಧ್ರಪ್ರದೇಶದಲ್ಲಿ (Andhra Pradesh) ಭಾರತೀಯ ಆಡಳಿಟಾತ್ಮಕ ಸೇವೆಯ ಅಧಿಕಾರಿಗಳು ಹಾಗೂ ಹೈಕೋರ್ಟ್ ಮಧ್ಯೆ ಒಂದು ರೀತಿಯ ಹಗ್ಗಜಗ್ಗಾಟದ ಸಂದರ್ಭ ಸೃಷ್ಟಿಯಾಗಿದ್ದು ನ್ಯಾಯಾಲಯ ಈಗ ಆ ಅಧಿಕಾರಿಗಳ ವಿರುದ್ಧ ಕೋರ್ಟ್ ಅವಹೇಳನಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ.

ಇದರಿಂದಾಗಿ ಐಎ‍ಎಸ್ ಅಧಿಕಾರಿಗಳು ಬೇಸರಗೊಂಡಿದ್ದು, ಮುಖ್ಯಮಂತ್ರಿಗಳ ಮೊರೆ ಹೋಗಿರುವುದಾಗಿ ವರದಿಯಾಗಿದೆ. ವಕೀಲ ವೃತ್ತಿಯೊಂದಿಗಿನ ಘರ್ಷಣೆಯಿಂದ ಉಂಟಾಗಿರುವ ಈ ಸಂಘರ್ಷ ಸದ್ಯ ಐಎಎಸ್ ಶ್ರೇಣಿಯ ಅಧ್ಕಾರಿಗಳಿಗೆ ದಿಗ್ಭ್ರಮೆ ಉಂಟಾಗುವಂತೆ ಮಾಡಿದ್ದು, ಇದು ಈಗ ಒಟ್ಟಾರೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುವ ಅಪಾಯವನ್ನುಂಟುಮಾಡುತ್ತಿದೆ ಎನ್ನಲಾಗಿದೆ.

ಆಂಧ್ರ ಪ್ರದೇಶ ಐಎಎಸ್ ಅಸೋಸಿಯೇಷನ್ ಹಿರಿಯ ಅಧಿಕಾರಿಗಳು ​​ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ತನ್ನ ವಾದವನ್ನು ಮಂಡಿಸಿ, ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಸರಿಪಡಿಸುವ ಕ್ರಮ ತೆಗೆದುಕೊಳ್ಳುವಂತೆ ಮತ್ತು ಕೇಡರ್‌ನ ಘನತೆಯನ್ನು ಕಾಪಾಡುವಂತೆ ಕೇಳಿಕೊಂಡಿದೆ.

ಮಾರ್ಚ್ 31 ರಂದು, ವಿಶೇಷ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಇಬ್ಬರು ಸೇರಿ ಎಂಟು ಐಎಎಸ್ ಅಧಿಕಾರಿಗಳು ‘ನ್ಯಾಯಾಂಗ ನಿಂದನೆ’ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಹಾಗೆಯೇ ಅವರಿಗೆ ಒಂದು ವರ್ಷದವರೆಗೆ ಕಲ್ಯಾಣ ಹಾಸ್ಟೆಲ್‌ಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. ಅಲ್ಲದೆ, ಇತ್ತೀಚೆಗೆ, ಯುವ ಐಎಎಸ್ ಅಧಿಕಾರಿಯೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಅದರಲ್ಲಿ ಅವರ ಯಾವ ಪಾತ್ರವೂ ಇರಲಿಲ್ಲ ಎನ್ನಲಾಗಿದೆ.

ಕಳೆದ ವರ್ಷವೂ ಐದು ಅಧಿಕಾರಿಗಳನ್ನು ಕೋರ್ಟ್ ಅವಹೇಳನಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ವಿಧಿಸಲಾಯಿತಾದರೂ ತದನಂತರ ಅದನ್ನು ಅಮಾನತುಗೊಳಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ