ತಂದೆ-ತಾಯಿ ಇಬ್ಬರನ್ನೂ ಕೋವಿಡ್- 19ನಿಂದ ಕಳೆದುಕೊಂಡ ಪ್ರತಿ ಮಗುವಿಗೆ ರೂ. 10 ಲಕ್ಷ ಎಫ್​ಡಿಗೆ ಜಗನ್ ಸೂಚನೆ

ಆಂಧ್ರಪ್ರದೇಶ ಸರ್ಕಾರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, ಕೋವಿಡ್- 19 ಸೋಂಕಿಗೆ ತಂದೆ- ತಾಯಿಯನ್ನು ಕಳೆದುಕೊಂಡ ಪ್ರತಿ ಮಗುವಿಗೆ 10 ಲಕ್ಷ ರೂ. ಎಫ್​.ಡಿ. ಮಾಡಲು ಸೂಚಿಸಿದ್ದಾರೆ.

ತಂದೆ-ತಾಯಿ ಇಬ್ಬರನ್ನೂ ಕೋವಿಡ್- 19ನಿಂದ ಕಳೆದುಕೊಂಡ ಪ್ರತಿ ಮಗುವಿಗೆ ರೂ. 10 ಲಕ್ಷ ಎಫ್​ಡಿಗೆ ಜಗನ್ ಸೂಚನೆ
ವೈ.ಎಸ್. ಜಗನ್ ಮೋಹನ್ ರೆಡ್ಡಿ (ಸಂಗ್ರಹ ಚಿತ್ರ)


ಅಮರಾವತಿ: ಮಧ್ಯಪ್ರದೇಶ ಹಾಗೂ ದೆಹಲಿ ಸರ್ಕಾರದ ನಂತರ ಇದೀಗ ಆಂಧ್ರಪ್ರದೇಶದ ವೈ.ಎಸ್​. ಜಗನ್​ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಅಧಿಕಾರಿಗಳಿಗೆ ಸೂಚನೆ ನೀಡಿ, ಕೋವಿಡ್-19 ಸೋಂಕಿನಿಂದ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಪ್ರತಿ ಮಗುವಿನ ಹೆಸರಲ್ಲಿ 10 ಲಕ್ಷ ರೂಪಾಯಿಯನ್ನು ಠೇವಣಿ ಮಾಡುವುದಕ್ಕೆ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. “ಕೋವಿಡ್​-19 ಎರಡನೇ ಅಲೆಯ ವಿರುದ್ಧ ಹಲವು ಮಕ್ಕಳು ಅಸುರಕ್ಷಿತರಾಗಿದ್ದಾರೆ ಹಾಗೂ ದುರ್ಬಲರಾಗಿದ್ದಾರೆ. ಅದರಲ್ಲೂ ಈ ಭೀಕರ ವೈರಸ್​ನಿಂದ ಪೋಷಕರನ್ನು ಕಳೆದುಕೊಂಡವರ ಸ್ಥಿತಿ ಕಷ್ಟವಾಗಿದೆ. ಈ ಮಕ್ಕಳ ಭವಿಷ್ಯವನ್ನು ಅರ್ಥ ಮಾಡಿಕೊಂಡು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​. ಜಗನ್ ಮೋಹನ್ ರೆಡ್ಡಿ ಅವರು ಈ ಪ್ರಮುಖ ನಿರ್ಧಾರ ಕೈಗೊಂಡು, ಪ್ರತಿ ಅನಾಧ ಮಗುವಿಗೆ ಭದ್ರತೆ ದೃಷ್ಟಿಯಿಂದ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ಸ್ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ,” ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬ್ಯಾಂಕ್​ ಜತೆ ಮಾತುಕತೆ ನಡೆಸುವಂತೆ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದು, ಆ ಮಗುವಿಗೆ 25 ವರ್ಷ ತುಂಬುವ ತನಕ ಫಿಕ್ಸೆಡ್ ಡೆಪಾಸಿಟ್ ಇರುತ್ತದೆ. ಇನ್ನು ಈ ಎಫ್​.ಡಿ. ಮೇಲೆ ಆ ಮಗುವನ್ನು ಸಾಕುವವರಿಗೆ/ಪಾಲಕರಿಗೆ ಹೆಚ್ಚಿನ ಬಡ್ಡಿ ಸಿಗುವಂತಹ ವ್ಯವಸ್ಥೆ ಆಗಬೇಕು ಮತ್ತು ಆ ಕಾರ್ಯಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮೇ ಕೊನೆಯ ತನಕ ಭಾಗಶಃ ಕರ್ಫ್ಯೂ ವಿಸ್ತರಣೆಗೆ ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ಹಬ್ಬುತ್ತಿದ್ದು, ಅಲ್ಲಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ ಜಗನ್ ಮೋಹನ್ ರೆಡ್ಡಿ.

ಆರೋಗ್ಯಶ್ರೀ ಕಲ್ಯಾಣ ಯೋಜನೆಯಡಿಯಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯಬೇಕು. ಅಂಥ ರೋಗಿಗಳಿಗೆ ಚಿಕಿತ್ಸೆ ನೀಡುವಂಥ ಆಸ್ಪತ್ರೆಗಳನ್ನು ಗುರುತಿಸಬೇಕು ಎಂದು ಅವರು ಹೇಳಿದ್ದಾರೆ. ಲಸಿಕೆ ಹಾಕುವ ವಿಚಾರಕ್ಕೆ ಬಂದರೆ, 21.74 ಲಕ್ಷ ಜನರು ಕೋವಿಡ್ ಎರಡೂ ಲಸಿಕೆ ಪಡೆದಿದ್ದಾರೆ. ಇನ್ನು 31.59 ಲಕ್ಷ ಜನರು ಮೊದಲನೇ ಡೋಸ್ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಮೇ 5 ರಿಂದ 14 ದಿನಗಳ ಕಾಲ ಪಾರ್ಶಿಯಲ್ ಕರ್ಫ್ಯೂ…

(Andhra Pradesh Chief Minister Jagan Mohan Reddy instruct officials to create Rs 10 lakh FD to each child who lost parents to Covid 19)