ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಪಾಯ ಬೆನ್ನಿಗೇ ಇರುತ್ತದೆ..5 ವರ್ಷಗಳಲ್ಲಿ 166 ಮಂದಿಯ ಹತ್ಯೆ: ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಅದೆಷ್ಟೋ ಕ್ರಾಂತಿಕಾರಿಗಳ ನಾಡು. ಅಧ್ಯಾತ್ಮ ನಾಯಕರ ಹುಟ್ಟೂರು..ಸಮಾಜ ಸುಧಾಕರು ಹುಟ್ಟಿ ಬೆಳೆದ ಪ್ರದೇಶ. ಆದರೆ ಇಂದು ಇಲ್ಲಿ ಬರೀ ರಕ್ತದೋಕುಳಿಯೇ ಕಾಣಿಸುತ್ತಿದೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ದೆಹಲಿ: ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಇಲ್ಲಿಯವರೆಗೆ 37 ಬಿಜೆಪಿ ಕಾರ್ಯಕರ್ತರ ಹತ್ಯೆ ಆಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ. ಅಂದರೆ ಮೇ 2ರಿಂದ ಈಚೆಗೆ 37 ಮಂದಿ ಬಿಜೆಪಿ ಕಾರ್ಯಕರ್ತರ ಪ್ರಾಣ ಹೋಗಿದೆ. ವಿಧಾನಸಭಾ ಚುನಾವಣೆ ಮುಗಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ಉತ್ತರ ಪ್ರದೇಶ ಬಿಜೆಪಿ ನಾಯಕರೊಂದಿಗೆ ನಡೆದ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ದಿಲೀಪ್ ಘೋಷ್ ಈ ವಿಚಾರ ತಿಳಿಸಿದ್ದಾರೆ.
ಪಶ್ಚಿಮಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್, ಉತ್ತರ ಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಅವರು ಪಾಲ್ಗೊಂಡಿದ್ದರು. ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ 77 ಸೀಟ್ಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಅದೆಷ್ಟೋ ಕ್ರಾಂತಿಕಾರಿಗಳ ನಾಡು. ಅಧ್ಯಾತ್ಮ ನಾಯಕರ ಹುಟ್ಟೂರು..ಸಮಾಜ ಸುಧಾಕರು ಹುಟ್ಟಿ ಬೆಳೆದ ಪ್ರದೇಶ. ಆದರೆ ಇಂದು ಇಲ್ಲಿ ಬರೀ ರಕ್ತದೋಕುಳಿಯೇ ಕಾಣಿಸುತ್ತಿದೆ. ಬಿಜೆಪಿ ಕಾರ್ಯಕರ್ತರಂತೂ ಸದಾ ಭಯದಲ್ಲೇ ಬದುಕುವಂತಾಗಿದೆ. ಪಕ್ಷದ ಯಾವುದೇ ಕೆಲಸಕ್ಕಾದರೂ ಹೊರಗೆ ಬಂದರೆ, ಅವರು ಜೀವಸಹಿತ ಮನೆಗೆ ಹೋಗುತ್ತಾರೆ ಎಂಬ ಭರವಸೆಯೂ ಇರುವುದಿಲ್ಲ ಎಂದು ದಿಲೀಪ್ ಘೋಷ್ ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಪಶ್ಚಿಮಬಂಗಾಳದಲ್ಲಿ ಒಟ್ಟು 166 ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಇಲ್ಲಿಯವರೆಗೆ 37 ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ. ಇನ್ನು ಬೇರೆ ಕೆಲವು ರೀತಿಯಲ್ಲೂ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಳೆದ 5ವರ್ಷಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ 30,000 ಪ್ರಕರಣಗಳು ದಾಖಲಾಗಿವೆ ಎಂದೂ ತಿಳಿಸಿದ್ದಾರೆ. ಟಿಎಂಸಿ ಅಧಿಕಾರದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಲ್ಪವೂ ಸುರಕ್ಷಿತವಲ್ಲ. ಆ ಪಕ್ಷದ ಗೂಂಡಾಗಳು ಸತತವಾಗಿ ನಮ್ಮ ಮೇಲೆ ಹಲ್ಲೆ ನಡೆಸುತ್ತಲೇ ಇದ್ದಾರೆ. ಇಷ್ಟಾದರೂ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರ ಎಂದೂ ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: Covid Diary: ಕೊವಿಡ್ ಸೋಂಕಿತನೆಂಬ ಹಣೆಪಟ್ಟಿಗೆ ಹೆದರುವ ಜನ; ಹೀಗಳೆಯುವ ಸಮಾಜ, ಆಪ್ತರೂ ಬಲು ದೂರ
Around 166 BJP Workers Killed in 5 years by TMC goons in West Bengal sais Dilip Ghosh