‘ಪಕ್ಕದ ಮನೆಯವರಿಗೆ ಕೊರೊನಾ ಪಾಸಿಟಿವ್ ಆಗಿದೆ ಅಂತ ಅವರಿವರಿಗೆ ಫೋನ್ ಮಾಡಿ ಹೇಳುವ ಮೊದಲು, ನಿಮ್ಮ ಪಕ್ಕದ ಮನೆಯವರಿಗೆ ಫೋನ್ ಮಾಡಿ ಏನು ಬೇಕೋ ಕೇಳಿ..’ ನಮ್ಮೂರು ದೊಡ್ಡಬಳ್ಳಾಪುರದ ಕೆಲವರು ಫೇಸ್ಬುಕ್ನಲ್ಲಿ ಹೀಗೆ ಬರೆದುಕೊಂಡಿದ್ದರು. ಒಂದು ಕುಟುಂಬಕ್ಕೆ ಕೊರೊನಾ ಸೋಂಕು ತಂದೊಡ್ಡುವ ಸಂಕಷ್ಟ, ಸಮಾಜದಲ್ಲಿ ಆ ಕುಟುಂಬ ಅನುಭವಿಸುವ ಅವಮಾನದ ತೀವ್ರತೆ ಎಷ್ಟು ಎಂಬುದಕ್ಕೆ ಈ ಸಾಲುಗಳೇ ಉದಾಹರಣೆ.
ಮೇ ತಿಂಗಳ ಆರಂಭದಲ್ಲಿ ನಮ್ಮ ಕುಟುಂಬದಲ್ಲಿ ಒಟ್ಟು 6 ಜನಕ್ಕೆ ಸೋಂಕು ದೃಢಪಟ್ಟಿತ್ತು. ಈ ಪೈಕಿ ಐವರಿಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿದ ಮೂರು ದಿನಗಳ ನಂತರ ಪಾಸಿಟಿವ್ ಮೆಸೇಜ್ ಬಂತು. ಏನು ಮಾಡುವುದು ಎಂಬುದೇ ಆ ಕ್ಷಣಕ್ಕೆ ದೊಡ್ಡ ಗೊಂದಲ. ‘ಯಾರೆಲ್ಲಾ ಉಳೀತೀವೋ, ಯಾರೆಲ್ಲೋ ಹೋಗ್ತೀವೋ’ ಎಂದು ದೊಡ್ಡವರು ಆತಂಕದಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡ ಮಕ್ಕಳು ಏನೋ ಆಗಬಾರದ್ದು ಆಗಿಹೋಗಿದೆ ಎಂಬಂತೆ ಸಪ್ಪಗಾದರು. ಏನೇನೋ ಕಥೆ-ಆಟಗಳ ನೆಪದಲ್ಲಿ ಅವರನ್ನು ಮತ್ತೆ ಸರಿಮಾಡಿಕೊಂಡಿದ್ದು ಆಯ್ತು ಅನ್ನಿ.
ಪಾಸಿಟಿವ್ ಆಗಿರುವ ಬಗ್ಗೆ ಮೆಸೇಜ್ ಬಂದ ನಂತರ ಸರ್ಕಾರಿ ಆಸ್ಪತ್ರೆಯಿಂದ ನರ್ಸಮ್ಮ ಒಬ್ಬರು ಫೋನ್ ಮಾಡಿದ್ದರು. ‘ಬಿಸಿಬಿಸಿ ಊಟ ಮಾಡಿ, ಹೆದರಿಕೊಳ್ಳಬೇಡಿ. ಎಲ್ಲ ಸರಿಯಾಗುತ್ತೆ. ನಿಮ್ಮ ಕಾಂಟ್ಯಾಕ್ಟ್ಗೆ ಬಂದಿದ್ದವರಿಗೆ ನೀವು ಪಾಸಿಟಿವ್ ಆಗಿರುವ ವಿಷಯ ತಿಳಿಸಿ. ಅವರಿಗೂ ಟೆಸ್ಟ್ ಮಾಡಿಸಿಕೊಳ್ಳಲು ಹೇಳಿ’ ಎಂದೆಲ್ಲಾ ಧೈರ್ಯ ಹೇಳಿದ್ದರು. ‘ಮೇಡಂ, ನಮ್ಮ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರಿಗೂ ಸೋಂಕು ಬಂದಿದೆ. ಮುಂದಿನ ಕಥೆ ಹೇಗೆ? ಮನೆ ಹತ್ತಿರಕ್ಕೆ ಯಾರಾದ್ರೂ ಬಂದು ಔಷಧಿ ಕೊಡ್ತೀರಾ’ ಎಂದು ಅಸಹಾಯಕನಾಗಿ ಪ್ರಶ್ನಿಸಿದ್ದೆ. ‘ಇಲ್ಲ ಸರ್, ಯಾರೂ ಬರಲ್ಲ. ಅಂಥ ವ್ಯವಸ್ಥೆ ಮಾಡಿಲ್ಲ. ನೀವೇ ಯಾರನ್ನಾದರೂ ಗೌರ್ಮೆಂಟ್ ಆಸ್ಪತ್ರೆ ಹತ್ತಿರಕ್ಕೆ ಕಳಿಸಿ, ಔಷಧಿ ಕೊಟ್ಟು ಕಳಿಸ್ತೀವಿ. ನೀವು ಮಾತ್ರ ಬರಬೇಡಿ’ ಅಂದ್ರು. ‘ಯಾರೂ ಇಲ್ವಲ್ಲಾ ಮೇಡಂ ಏನು ಮಾಡೋದು’ ಎಂಬ ಮತ್ತೊಂದು ಪ್ರಶ್ನೆ ನನ್ನದು. ‘ನೋಡೋಣ ತಾಳಿ, ಒಟ್ಟಿನಲ್ಲಿ ಹೆದರಿಕೊಳ್ಳಬೇಡಿ, ಊಟ ಬಿಡಬೇಡಿ. ಏನಾದ್ರೂ ವ್ಯವಸ್ಥೆ ಮಾಡೋಣ. ನನ್ನ ನಂಬರ್ ಸೇವ್ ಮಾಡಿಕೊಂಡಿರಿ. ಎಮರ್ಜೆನ್ಸಿ ಇದ್ರೆ ಫೋನ್ ಮಾಡಿ’ ಅಂತ ಮತ್ತೊಮ್ಮೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದರು.
ಹಿಂದೆ ತುಮಕೂರು ಜಿಲ್ಲೆ ತೋವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಚನ್ನಕೇಶವ ಈಗ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯ ಕೊವಿಡ್ ಕೇಂದ್ರದಲ್ಲಿರುವ ವಿಷಯ ತಿಳೀತು. ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ ತಕ್ಷಣ ವಾಟ್ಸಾಪ್ನಲ್ಲೇ ತೆಗೆದುಕೊಳ್ಳಬೇಕಾದ ಔಷಧಿಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ವಿವರಿಸಿದರು. ಮುಂದಿನ 15 ದಿನ ಮನೆ ಹೇಗೆ ಸಾಗಿತು ಎಂಬುದೇ ಸೋಜಿಗ. ಹೊರಗೆ ಆಟವಾಡಿ ರೂಢಿಯಾದ ಮಕ್ಕಳಿಗೆ ಮನೆಯಲ್ಲಿರುವುದು ಬೋರು. ಹಗಲುಹೊತ್ತಿನಲ್ಲೇ ಗೇಟ್ ಬೀಗ ಹಾಕುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರ ಮಕ್ಕಳೂ ನಮ್ಮ ಮನೆಗೆ ಬರಲು ಆಗುತ್ತಿರಲಿಲ್ಲ. ಗೇಟ್ನ ಆ ಬದಿ ಆ ಮಕ್ಕಳು, ಈ ಬದಿ ನನ್ನ ಮಕ್ಕಳು. ಬಂದ ಮಕ್ಕಳಿಗೆ ಏನೇನೋ ನೆಪ ಹೇಳಿ, ಇನ್ನೂ ಸ್ವಲ್ಪ ದಿನ ಮನೆ ಹತ್ತಿರಕ್ಕೆ ಬರಬೇಡಿ ಅಂತ ಹೇಳಿ ಕಳಿಸುತ್ತಿದ್ದೆವು.
ಒಂದು ದಿನದ ನಂತರ ಸರ್ಕಾರಿ ಕಾಲೇಜು ಪ್ರಿನ್ಸಿಪಾಲರು ಫೋನ್ ಮಾಡಿದ್ದರು. ‘ತಾಲ್ಲೂಕು ಪಂಚಾಯಿತಿಯಲ್ಲಿ ನಿಮ್ಮ ನಂಬರ್ ಕೊಟ್ಟರು. ಹೇಗಿದ್ದೀರಿ ಎಲ್ಲರೂ? ರೋಗ ಖಂಡಿತ ವಾಸಿ ಆಗುತ್ತೆ. ಧೈರ್ಯ ಕಳ್ಕೊಬೇಡಿ. ಮಾತಾಡಬೇಕು ಅನ್ನಿಸಿದರೆ ನನಗೆ ಯಾವಾಗ ಬೇಕಿದ್ರೂ ಫೋನ್ ಮಾಡಿ. ಈ ರೋಗ ಬಂದಿರೋದು ನಿಮಗೊಬ್ಬರಿಗೇ ಅಲ್ಲ. ಎಷ್ಟೊಂದು ಜನರು ಹುಷಾರಾಗಿದ್ದಾರೆ. ನಮ್ಮ ಮನೆ ಹತ್ರಾನೂ ಒಬ್ರಿಗೆ ಕಾಯಿಲೆ ಬಂದಿತ್ತು. ಆಮೇಲೆ ಹುಷಾರಾದ್ರು. ಏನೋ ಪಾಪ ಮಾಡಿದ್ದೆ ಅದಕ್ಕೆ ಈ ಕಾಯಿಲೆ ಬಂದಿದೆ ಅಂತ ಅಂದ್ಕೊಬೇಡಿ’ ಹೀಗೆ ಇನ್ನೂ ಏನೇನೋ ಹೇಳಿದ್ರು. ಒಂಥರಾ ಧೈರ್ಯ ತುಂಬುವ, ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳು ಅವು. ಮನೆಯಲ್ಲಿ ಉಳಿದವರಿಗೆ ಅವರು ಆಡಿದ ಮಾತುಗಳ ಬಗ್ಗೆ ಹೇಳಿದೆ. ಸಪ್ಪಗಿದ್ದ ಮನೆಯಲ್ಲಿ ಒಂಚೂರು ಚುರುಕುತನ ಕಾಣಿಸಿತು.
ಮಕ್ಕಳಿಗೆ ಸೋಂಕು ಬಂದಿರುವ ವಿಷಯ ತಿಳಿದು ಅಂಗನವಾಡಿ ಟೀಚರ್ ಫೋನ್ ಮಾಡಿದ್ರು. ಒಬ್ಬರು ಆಶಾ ಕಾರ್ಯಕರ್ತೆಯ ಜೊತೆಗೆ ಸರ್ಕಾರಿ ಆಸ್ಪತ್ರೆಯ ನರ್ಸ್ ಮನೆಗೆ ಬಂದು ವಿಚಾರಿಸಿಕೊಂಡು ಹೋದರು. ಅಷ್ಟೊತ್ತಿಗೆ ನಾವೂ ಚೇತರಿಸಿಕೊಂಡಿದ್ದೆವು ಅನ್ನಿ. ‘ಬಿಸಿಬಿಸಿ ಊಟ ಮಾಡಿ. ಮಧ್ಯಾಹ್ನದ ಹೊತ್ತು ನಿಂಬೆ ಪಾನಕ ಕುಡೀರಿ. ಚೆನ್ನಾಗಿ ನಿದ್ದೆ ಮಾಡಿ. ನನ್ನ ನಂಬರ್ ಸೇವ್ ಮಾಡಿಕೊಂಡಿರಿ. ಎಮರ್ಜೆನ್ಸಿ ಇದ್ರೆ ಫೋನ್ ಮಾಡಿ’ ಅಂತೆಲ್ಲಾ ಧೈರ್ಯ ಹೇಳಿದರು. ಕೊವಿಡ್ ವಾಸಿಯಾದ ನಂತರ ಹೇಗಿರಬೇಕು ಎನ್ನುವ ಬಗ್ಗೆ ನರ್ಸಮ್ಮ ನೀಡಿದ ಸಲಹೆಗಳನ್ನು ಇಂದಿಗೂ ಅನುಸರಿಸುತ್ತಿದ್ದೇವೆ.
ಇದನ್ನೂ ಓದಿ: Covid Diary : ಡಾ. ಎಚ್.ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’
ದೊಡ್ಡಬಳ್ಳಾಪುರದ ಅಂಜನಾದ್ರಿ ಟ್ರಸ್ಟ್ ಬಡವರಿಗೆ ದಿನಸಿ ಕಿಟ್ಗಳನ್ನು ನೀಡುತ್ತಿದೆ
ಸರ್ಕಾರವೇಕೆ ಇಷ್ಟು ಅಸಹಾಯಕ?
ನಮ್ಮ ಕುಟುಂಬದ ಸಂಕಷ್ಟ ಪರಿಸ್ಥಿತಿಯಲ್ಲಿ ‘ನಿಮಗೆ ಧೈರ್ಯ ತುಂಬಲು ಫೋನ್ ಮಾಡ್ತಿದ್ದೇವೆ’ ಎಂದು ದಿನಕ್ಕೆ ಒಬ್ಬರಾದರೂ ಫೋನ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿ. ಆದರೆ ಸೋಂಕಿನಿಂದ ಚೇತರಿಸಿಕೊಳ್ಳಲು ಧೈರ್ಯ ತುಂಬುವ ಮಾತುಗಳಷ್ಟೇ ಸಾಕೆ? ಬಹಳಷ್ಟು ಸಲ ಈ ಪ್ರಶ್ನೆ ನನ್ನನ್ನು ಕಾಡಿದ್ದು ಉಂಟು. ‘ಮಕ್ಕಳಿಗೆ ಸಿ ವಿಟಮಿನ್ ಮಾತ್ರೆ ಕೊಡೋಕೆ ಹೇಳಿದ್ದಾರೆ. ನಾವು ಹೊರಗೆ ಹೋಗುವಂತಿಲ್ಲ. ನಿಮ್ಮ ಹತ್ರ ಇದ್ದರೆ ಕೊಡಿ’ ಎಂದು ಅಂಗನವಾಡಿ ಟೀಚರ್ಗೆ ಕೇಳಿದಾಗ, ‘ಸಪ್ಲೈ ಇಲ್ಲ ಸಾರ್, ಅಧಿಕಾರಿಗಳಿಗೆ ತಿಳಿಸ್ತೀನಿ’ ಎಂಬ ಉತ್ತರ ಬಂತು. ಆ ಮೇಲೆ ಅವರು ಫೋನ್ ಮಾಡಲಿಲ್ಲ. ತೀರಾ ಬೇಸಿಕ್ ಆದ ಇಂಥವನ್ನೂ ಕೊಡದ ಅಸಹಾಯಕ ಸ್ಥಿತಿಯಲ್ಲಿದೆಯೇ ನಮ್ಮ ಸರ್ಕಾರ? ಯಾರಿಗೆ ಈ ಪ್ರಶ್ನೆ ಕೇಳಬೇಕೋ ಗೊತ್ತಾಗುತ್ತಿಲ್ಲ.
ಭೀತಿ ಹುಟ್ಟಿಸುತ್ತೆ ಸೋಂಕಿತನೆಂಬ ಹಣೆಪಟ್ಟಿ
ಸೋಂಕು ದೃಢಪಟ್ಟವರನ್ನು ಸಮಾಜ ಸ್ವೀಕರಿಸುವ ಸ್ಥಿತಿಯೇ ಹೆದರಿಕೆ ಹುಟ್ಟಿಸುತ್ತದೆ. ಬೆಂಗಳೂರಿನಂಥ ಮಹಾನಗರಗಳಿಗೂ ದೊಡ್ಡಬಳ್ಳಾಪುರದಂಥ ಪುಟ್ಟ ಪಟ್ಟಣಗಳಿಗೂ, ಅದೇ ದೊಡ್ಡಬಳ್ಳಾಪುರದ ಗ್ರಾಮಾಂತರ ಪ್ರದೇಶಗಳಿಗೂ ಸಾಮಾಜಿಕವಾಗಿ ಬಹಳ ವ್ಯತ್ಯಾಸಗಳಿವೆ. ಸೋಂಕಿತರನ್ನು ಸಮಾಜ ಅಕ್ಷರಶಃ ದೂರ ಇಡುತ್ತಿದೆ. ಸೋಂಕು ಹರಡುವನ್ನು ತಡೆಯಲು ಇದು ಅನಿವಾರ್ಯವೂ ಹೌದು ಎಂದು ಒಪ್ಪಿಕೊಳ್ಳೋಣ. ಆದರೆ ಹೀಗೆ ಪ್ರತ್ಯೇಕವಾಗಿ ಬದುಕಲು ಪೂರಕ ವ್ಯವಸ್ಥೆಯೂ ಬೇಕಲ್ಲವೇ? ಬೆಳಿಗ್ಗೆ ಅಂದ್ರೆ ಮನೆಗೆ ಕುಡಿಯುವ ನೀರು ಬೇಕು. ನಾವು ಹೊರಗೆ ಹೋಗುವಂತಿಲ್ಲ, ತಂದುಕೊಡುವವರು ಯಾರು? ಮನೆಯಲ್ಲಿ ಎಲ್ಲರಿಗೂ ಸುಸ್ತು, ಅಡುಗೆ ಮಾಡಲು ತ್ರಾಣವಿಲ್ಲ, ಅಂದಿನ ಹೊಟ್ಟೆಪಾಡು ಹೇಗೆ? ಔಷಧಿ ತರಲು ಮೆಡಿಕಲ್ ಸ್ಟೋರ್ಗೆ ಹೋಗಬೇಕು, ಹೋಗದಿದ್ದರೆ ಔಷಧಿ ತಂದುಕೊಡುವವರು ಯಾರು? ಇಂಥ ಎಷ್ಟೋ ಪ್ರಶ್ನೆಗಳು ನನ್ನನ್ನು ಬಾಧಿಸಿದ್ದವು.
ಕೊವಿಡ್ ಸೋಂಕಿತರ ಆರೈಕೆ ಕೇಂದ್ರಗಳಿಗೆ ಹೋಗೋಣ ಎಂದರೆ ಅಲ್ಲಿನ ಸಮಸ್ಯೆಗಳ ಬಗ್ಗೆ ಹೋಗಿ ಬಂದ ಜನರು ಹೇಳುವುದನ್ನು ಕೇಳಿಕೇಳಿ ಸಾಕಾಗಿತ್ತು. ಮಕ್ಕಳನ್ನು ಕರೆದೊಯ್ಯುವ ಧೈರ್ಯ ಖಂಡಿತ ನಮಗೆ ಇರಲಿಲ್ಲ. ನಮಗೆ ಸಹಾಯ ಮಾಡುವವರು ಬೇಕು ಎಂದು ಪದೇಪದೆ ಅನ್ನಿಸುತ್ತಿತ್ತು. ಕೆಲವರಿಂದ ಅಂಥ ಸಹಾಯವೂ ಸಿಕ್ಕಿತು ಅನ್ನಿ. ‘ಚೆನ್ನಾಗಿದ್ದಾಗ ಮಾತ್ರ ಫ್ರೆಂಡ್ ಅಲ್ಲ, ನೀವು ಎಂಥ ಸ್ಥಿತಿಯಲ್ಲಿದ್ರೂ ನಾನು ನಿಮ್ಮ ಜೊತೆಗೆ ಇರ್ತೇನೆ’ ಎಂದು ಹೇಳುವಷ್ಟು ಮಾತ್ರವಲ್ಲ, ಹಾಗೆ ವರ್ತಿಸುವ ಕೆಲವರಾದರೂ ಇದ್ದರು.
ಅತ್ತ ನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ದೊಡ್ಡಬಳ್ಳಾಪುರ ಎನ್ನುವ ತಾಲ್ಲೂಕು ಕೇಂದ್ರದ ಪರಿಸ್ಥಿತಿಯಿದು. ಕೊವಿಡ್ ಸೋಂಕು ತೀವ್ರಗೊಂಡ ಕಾರಣ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಪಕ್ಕದ ಬೆಡ್ನಲ್ಲಿದ್ದ ಹಿರಿಯರು ನಂದಿಬೆಟ್ಟದ ತಪ್ಪಲಿನ ಹಳ್ಳಿಯವರು. ‘ನಮ್ಮೂರಲ್ಲಿ ಕೊರೊನಾ ಅಂದ್ರೆ ಮನೆ ಮುಂದಕ್ಕೂ ಯಾರೂ ಬರಲ್ಲ ಸಾರ್. ಎಲ್ಲಿಗೋಗಿ ಅಂಟಿಸ್ಕೊಂಡು ಬಂದ್ಯೋ ಅಂತ ನಗ್ತಾರೆ. ಈಗ ಆಸ್ಪತ್ರೇಲಿ ಇರೋಗಂಟ ಪರವಾಗಿಲ್ಲ. ವಾಪಸ್ ಹಳ್ಳಿಗೆ ಹೋದಮೇಲೆ ಇನ್ನೆಷ್ಟು ಅವಮಾನ ಕಾದೈತೋ’ ಅಂತ ಕಣ್ಣೀರಾಗಿದ್ದರು. ಇವರು ಡಿಸ್ಚಾರ್ಜ್ ಆದ ಮೇಲೆ ಬಂದ ಮತ್ತೊಬ್ಬರದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸಮೀಪದ ಹಳ್ಳಿ. ‘ಟೈಫಾಯ್ಡ್ ಅಂತ ಹೇಳಿದ್ದೀನಿ ಸಾರ್ ಊರಲ್ಲಿ. ಇಲ್ಲದಿದ್ರೆ ಬಾಳೋಕಾಗುತ್ತಾ’ ಅಂತ ಅವರು ಸಪ್ಪಗಾಗಿದ್ದರು. ಇಂಗ್ಲಿಷ್ ಬಾರದ ಅವರು ಬೇಸಿಕ್ ಫೋನ್ನಲ್ಲಿ ಸೇವ್ ಮಾಡಿಕೊಂಡಿದ್ದ ಸೂಪರ್ವೈಸರ್ ನಂಬರ್ ಹುಡುಕಿ ಡಯಲ್ ಮಾಡಿಕೊಡಲು ನನಗೆ ಕೇಳಿದರು. ‘ಯಾವತ್ತಿನಿಂದ ಇತ್ತು? ಫ್ಯಾಕ್ಟರಿಲಿ ಯಾರ ಜೊತೆಗೆಲ್ಲಾ ಇದ್ಯೋ? ಪೂರ್ತಿ ಹುಷಾರಾಗೋ ತನಕ ಈ ಕಡೆ ತಲೆ ಹಾಕಬೇಡ. ನಿನ್ನಿಂದಾಗಿ ಫ್ಯಾಕ್ಟರಿಯೆಲ್ಲಾ ಸ್ಯಾನಿಟೈಸ್ ಮಾಡಿಸಬೇಕು’ ಅಂತ ಗತ್ತಿನಲ್ಲಿ ಹೇಳಿ ಫೋನ್ ಕಟ್ ಮಾಡಿದ. ಸಾಂತ್ವನದ ಮಾತು ನಿರೀಕ್ಷಿಸಿದ್ದ ಆ ಕಾರ್ಮಿಕ ಇನ್ನೂ ಕುಗ್ಗಿಹೋದ.
ಇದನ್ನೂ ಓದಿ: My Covid Experience : ಹೇ ಪೂರ್ಣಿಮೆ! ಸೈರಿಸಿಕೋ ನನ್ನ ಉಪಟಳ ನಿನ್ನ ಸಹಾಯಕ್ಕೆ ಯಾರೂ ಬಾರರು
ಕೊವಿಡ್ ಸೋಂಕಿತರ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸುವ, ಆಹಾರ ಪದ್ಧತಿಯ ಸಲಹೆ ನೀಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ರೂಪಿಸಿದೆ.
ಸಮಾಜದಿಂದ ಸಿಗುತ್ತಿಲ್ಲ ಸಹಾಯ
ಮುಂದಿನ ದಿನಗಳಲ್ಲಿ ನಮ್ಮ ಮನೆ ಒಂದು ಹಂತಕ್ಕೆ ಬಂದ ನಂತರ ನಮ್ಮೂರಿನಲ್ಲಿ ಸೋಂಕಿತರ ಮನೆಗಳಿಗೆ ಇರುವ ಸಾಮಾಜಿಕ ಬೆಂಬಲದ ಬಗ್ಗೆ ಒಂದಿಷ್ಟು ಜನರನ್ನು ವಿಚಾರಿಸಿದೆ. ಎಲ್ಲರೂ ಒಂದು ರೀತಿ ಅಸಹಾಯಕರಾಗಿದ್ದಾರೆ, ಸಮಾಜದಲ್ಲಿ ಹತಾಶೆ ಆವರಿಸಿದೆ ಎನ್ನಿಸಿತು. ಕೊವಿಡ್ ಮೊದಲ ಅಲೆ ವ್ಯಾಪಿಸಿದ್ದಾಗ ಸಹಾಯಹಸ್ತ ಚಾಚಿದ್ದವರೆಲ್ಲರೂ ಈ ಸಲ ಮೌನವಾಗಿದ್ದರು. ಕಳೆದ ಸಲ ನೆರವು ಕೊಟ್ಟಿದ್ದ ಕೆಲವರ ಮುಖಗಳು ಸರ್ಕಲ್ಗಳಲ್ಲಿ ರಾರಾಜಿಸುತ್ತಿದ್ದ ಫ್ಲೆಕ್ಸ್ಗಳಲ್ಲಿದ್ದವು. ಊರೊಟ್ಟಿನ ಕೆಲಸಕ್ಕೆ ಬರುತ್ತಿದ್ದ ಬಹುತೇಕರು 40 ವರ್ಷದ ಆಸುಪಾಸಿನವರು. ಆದರೆ ಈ ಸಲ ಇದೇ ವಯೋಮಾನದವರನ್ನು ಸೋಂಕು ತೀವ್ರವಾಗಿ ಬಾಧಿಸಿದೆ. ಹೀಗಾಗಿ ಬಹುತೇಕರು ಪಾಸಿಟಿವ್ ಆಗಿ ಪ್ರತ್ಯೇಕವಾಗಿ ಉಳಿದಿದ್ದಾರೆ. ಜನರಿಗೆ ಸಹಾಯ ನೀಡಲೆಂದು ಹಣ, ಧಾನ್ಯ ದಾನವಾಗಿ ಕೊಡಲು ಕೆಲವರು ಸಿದ್ಧರಿದ್ದರೂ ಅದನ್ನು ಬಳಸಿಕೊಂಡು ಕಳೆದ ಸಲದಂತೆ ಅಡುಗೆ ಮಾಡಿಸಿ ಹಂಚುವವರು ಊರಿನಲ್ಲಿ ಇಲ್ಲ.
ಸದ್ಯದ ಮಟ್ಟಿಗೆ ನಮ್ಮೂರಿನಲ್ಲಿ ತಕ್ಷಣದ ಸಹಾಯಕ್ಕೆ ಅಂತ ಸಿಗ್ತಾ ಇರೋರು ನಗರಸಭೆ ಸದಸ್ಯರು. ‘ಈ ಸಲ ಸಮಾಜ ಸೇವೆಗೆ ಅಂತ ಹುಡುಗರು ಬರ್ತಿಲ್ಲ. ಎಲ್ಲ ಹೆದರಿಬಿಟ್ಟಿದ್ದಾರೆ. ನನ್ನ ವಾರ್ಡ್ನಲ್ಲಿ ಯಾರೇ ಕೊವಿಡ್ ಪಾಸಿಟಿವ್ ಅಂತ ತಿಳಿಸಿದ್ರೂ ನಾನು ಮತ್ತು ನನ್ನ ಗೆಳೆಯರು ವಿಚಾರಿಸ್ತಾ ಇದ್ದೀವಿ. ಡಾಕ್ಟರ್ ಭೇಟಿಗೆ, ಔಷಧಿ ಕೊಡಿಸೋಕೆ, ಮನೆ ಮುಂದೆ ಸ್ಯಾನಿಟೈಸ್ ಮಾಡಿಸೋಕೆ ಸಹಾಯ ಮಾಡ್ತಾ ಇದ್ದೀವಿ. ಕೊವಿಡ್ ಬಂದವರನ್ನು ನಮ್ಮ ಸಮಾಜ ಒಂಥರಾ ನೋಡುತ್ತೆ ಅನ್ನೋದು ನಿಜ. ಎಲ್ಲರಿಗೂ ಅವರ ಜೀವದ ಮೇಲೆ ಆಸೆ, ಅವರ ಮನೆ ಹತ್ತಿರಕ್ಕೆ ಹೋದ್ರೆ ನಮಗೆ ಏನಾದ್ರೂ ಆಗಿಬಿಡುತ್ತೆ ಅನ್ನೋ ಭಯ. ಹಳ್ಳಿಗಳಲ್ಲಿ ಅಂತೂ ಈ ಸ್ಥಿತಿ ಇನ್ನೂ ಭೀಕರವಾಗಿದೆ. ಅಕ್ಕಪಕ್ಕದವರು ಹೀಗೆ ಅಸಹ್ಯವಾಗಿ ನೋಡ್ತಾರೆ ಅಂತ ಹೆದರಿಕೊಂಡೇ ಎಷ್ಟೋ ಜನ ಟೆಸ್ಟ್ ಮಾಡಿಸೋಕೆ ಹಿಂಜರಿತಾರೆ. ನಮ್ಮ ದುರಾದೃಷ್ಟಕ್ಕೆ ಈ ಸಲ ಟೌನ್ಗಿಂತ ಹಳ್ಳಿ ಕಡೆನೇ ಹೆಚ್ಚು ಸೋಂಕು ಹರಡಿದೆ. ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕೊವಿಡ್ ಕೇರ್ ಕೇಂದ್ರಗಳಿಗೆ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಅಗತ್ಯವಿರುವ ಜನರಿಗೆ ಸಹಾಯ ಒದಗಿಸಲು ನಮಗೆ ಆಗ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು ನಗರಸಭೆ ಸದಸ್ಯ ರವಿಕುಮಾರ್.
ದೊಡ್ಡಬಳ್ಳಾಪುರದಲ್ಲಿ ಕೊವಿಡ್ ಸೋಂಕಿತರಿಗೆ ನೆರವಾಗುತ್ತಿರುವ ಕೆಲವರ ಪೈಕಿ ಒಬ್ಬರಾದ ಮತ್ತೊಬ್ಬ ನಗರಸಭಾ ಸದಸ್ಯ ಕೆಂಪರಾಜು ಅವರನ್ನು ಮಾತನಾಡಿಸಿದೆ. ‘ಜನಗಳು ಅಳುತ್ತಾ ಫೋನ್ ಮಾಡ್ತಾರೆ. ಏನೋ ಗ್ರಹಚಾರ ಬಿಡಣ್ಣಾ, ದೇವ್ರ ದಯೆಯಿದೆ, ಎಲ್ಲಾ ಸರಿಯಾಗುತ್ತೆ ಅಂತ ಧೈರ್ಯ ತುಂಬೋಕೆ ಪ್ರಯತ್ನ ಮಾಡ್ತೀವಿ. ನಮ್ಮ ವಾರ್ಡ್ನಲ್ಲಿ ಪಾಸಿಟಿವ್ ಬಂದ ಒಂದಿಷ್ಟು ಮನೆಗಳಿಗೆ ತರಕಾರಿ, ದಿನಸಿ, ನೀರು ತಲುಪಿಸಲು ನಾನೇ ಓಡಾಡ್ತಾ ಇದ್ದೀನಿ. ಮೊದಲಿನಂತೆ ಹುಡುಗರು ಸಹಾಯ ಮಾಡೋಕೆ ಮುಂದೆ ಬರ್ತಿಲ್ಲ. ಬಲವಂತ ಮಾಡೋಕೆ ನನಗೂ ಧೈರ್ಯವಿಲ್ಲ’ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು ಅವರು.
ದೊಡ್ಡಬಳ್ಳಾಪುರದ ನೆರೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ರೈತ ಪದ್ಮರಾಜು ಕೊರೊನಾ ಸೋಂಕಿನಿಂದ ಅಣ್ಣನನ್ನು ಕಳೆದುಕೊಂಡವರು. ‘ಸೋಂಕು ಬಂದಿದೆ ಅಂತ ಗೊತ್ತಾದ್ರೆ ಫೋನ್ನಲ್ಲಿ ಮಾತಾಡಿಸೋಕೋ ಜನ ಹೆದರ್ತಾರೆ. ಆದ್ರೆ ಅವರಿಗೆ ಕಾಳಜಿಯಿಲ್ಲ ಅಂತ ಅರ್ಥವಲ್ಲ. ಮುಂದೆ ಬಂದು ಸಹಾಯ ಮಾಡೋಕೆ ಧೈರ್ಯ ಸಾಕಾಗ್ತಿಲ್ಲ. ನಾವು ಏನಾದ್ರೂ ಕೇಳಿಬಿಡ್ತೀವಿ ಅಂತ ಭಯ ಅವರಿಗೆ. ಅಯ್ಯಯ್ಯೋ ಆವಮ್ಮಂಗೆ ಕೊರೊನಾ ಬಂದೈತಂತೆ. ಹೆಂಗೋ ಸದ್ಯ ಹುಷಾರಾದ್ರೆ ಸಾಕು ಅಂತ ಹೆಣ್ಮಕ್ಕಳು ಕಣ್ಣೀರು ಹಾಕ್ತಾರೆ. ಅದೇ ಮಾತನ್ನು ಆ ಮನೆಯವರ ಎದುರು ಆಡಿದ್ರೆ ಸಾಂತ್ವನ ಹೇಳಿದಂತೆ ಆಗಿರೋದು. ಕೊರೊನಾ ಅಂದ್ರೆ ಹಳ್ಳಿ ಕಡೆ ವಿಪರೀತ ಭಯ ಸಾರ್. ಹೀಗೆ ಹೆದರಿಕೊಂಡೇ ನನ್ನ ಅಣ್ಣನೂ ಸತ್ತುಹೋದ. ಎಷ್ಟೋ ಜನರು ಎದೆಯೊಡೆದು ಸಾಯಲೂ ಭಯವೇ ಕಾರಣ. ಶೀತ, ನೆಗಡಿ, ಜ್ವರದಂತೆ ಇದೂ ಒಂದು ಕಾಯಿಲೆ. ಔಷಧಿ ತಗೊಂಡ್ರೆ ವಾಸಿಯಾಗುತ್ತೆ ಅನ್ನೋ ಧೈರ್ಯ ತುಂಬೋರು ಬೇಕು ಈಗ’ ಎನ್ನುತ್ತಾರೆ ಅವರು.
ಕೊವಿಡ್ ಕಾಲದ ಆಶಾಕಿರಣಗಳು
ಇಡೀ ಕುಟುಂಬ ಕೊವಿಡ್ನಿಂದ ಬಾಧಿತವಾಗಿದೆ ಎಂಬ ಮಾಹಿತಿ ಬಂದಾಗ ಅಂಥವರ ಮನೆಗಳಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ತಲುಪಿಸುವ ಪ್ರಯತ್ನವನ್ನು ದೊಡ್ಡಬಳ್ಳಾಪುರದ ಕೆಲ ಶ್ರೀಮಂತ ವರ್ತಕರು ಮಾಡುತ್ತಿದ್ದಾರೆ. ಈ ತಂಡದಲ್ಲಿ ಒಬ್ಬರನ್ನು ಮಾತನಾಡಿಸಿದೆ. ‘ದಿನಕ್ಕೆ ಸುಮಾರು 50 ಮನೆಗಳಿಗೆ ಅಡುಗೆ ತಲುಪಿಸ್ತಾ ಇದ್ದೀವಿ. ಯಾರೋ ಎಣ್ಣೆ ಕೊಡಿಸ್ತಾರೆ, ಇನ್ಯಾರೋ ಅಕ್ಕಿ ಕೊಡಿಸ್ತಾರೆ, ಹೀಗೇ ನಡೀತಾ ಇದೆ ಸೇವೆ. ನಮಗೆ ವಿಷಯ ತಿಳಿಸಿದ್ರೆ ಅವರ ಮನೆಗಳಿಗೇ ಅಡುಗೆ ತಲುಪಿಸ್ತೀವಿ. ನಮ್ಮ ತಂಡ ಯಾರ ಹೆಸರೂ ಬರೆಯುವುದು, ಫೋಟೊ ಹಾಕುವುದು ದಯವಿಟ್ಟು ಬೇಡ’ ಎಂದರು ಅವರು.
ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ನ ಮೂಲಕ ಧೀರಜ್ ಮುನಿರಾಜ್ ಸಹ ಇದೇ ರೀತಿ ಜನರಿಗೆ ಸಹಾಯ ಒದಗಿಸುತ್ತಿದ್ದಾರೆ. ಕೋವಿಡ್ ಸೊಂಕಿತ ಕುಟುಂಬಗಳಿಗೆ ದಿನಸಿ ಕಿಟ್, ಊಟದ ವ್ಯವಸ್ಥೆ, ಔಷಧಿ ಒದಗಿಸುವುದು, ತುರ್ತು ಸಂದರ್ಭಗಳಲ್ಲಿ ಆ್ಯಂಬ್ಯುಲೆನ್ಸ್ ಒದಗಿಸಲು ಈ ಟ್ರಸ್ಟ್ ಶ್ರಮಿಸುತ್ತಿದೆ. ‘ಈವರೆಗೆ ತಾಲ್ಲೂಕಿನಲ್ಲಿ 42 ಸಾವಿರ ದಿನಸಿ ಕಿಟ್, 1000 ಮೆಡಿಕಲ್ ಕಿಟ್, 500 ಸ್ಟೀಮ್ ಮಿಷನ್ ಕೊಟ್ಟಿದ್ದೀವಿ. ನಾನ್ ಕೊವಿಡ್ ರೋಗಿಗಳಿಗೆ ಮೊಬೈಲ್ ಆಸ್ಪತ್ರೆ ಮಾಡಿದ್ದೇವೆ’ ಎಂದು ಧೀರಜ್ ತಮ್ಮ ಟ್ರಸ್ಟ್ನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಕೊವಿಡ್ ಖಚಿತ ಪಟ್ಟಾಗ ಅಕ್ಕಪಕ್ಕದ ಮನೆಯವರಿಗೆ ಅಡುಗೆ ಮಾಡಿಕೊಡುವ, ನೀರು ತಿಂದಿಡುವ, ತರಕಾರಿ ಕೊಡುವ ಎಷ್ಟೋ ಮನೆಗಳು ನಮ್ಮೂರಿನಲ್ಲಿವೆ. ಆದರೆ ಸಮಾಜದ ಒಟ್ಟು ಮನಸ್ಥಿತಿ ಬದಲಾಗದೆ ಸೋಂಕಿತರಿಗೆ ಧೈರ್ಯ ಹೆಚ್ಚಾಗುವುದಿಲ್ಲ ಎನ್ನುವುದು ವಾಸ್ತವ.
ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್ ವಿಥ್ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ
ಇದನ್ನೂ ಓದಿ: Tv9 Digital Live: ಹೊರಗೆ ಬರೋಕೆ ಕೊರೊನಾ ಭಯ, ಮನೇಲಿದ್ರೆ ಹಸಿವಿನ ಹಿಂಸೆ; ಅಡಕತ್ತರಿಯಲ್ಲಿ ದುಡಿದು ತಿನ್ನುವ ಜನ