Big Breaking: ತನಿಖೆಯ ಪ್ರಮುಖ ಹಂತದಲ್ಲಿ ಸಿಡಿ ಗ್ಯಾಂಗ್ ಆರೋಪಿಗಳಿಗೆ ಜಾಮೀನು ಬೇಡ – ಎಸ್‌ಐಟಿ ಆಕ್ಷೇಪಣೆ
Ramesh Jarkiholi CD Case: ಈವರೆಗೂ ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರವಣ್, ನರೇಶ್ ಇಬ್ಬರಿಗೆ ಈಗ ತನಿಖೆಯ ಪ್ರಮುಖ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ಎಸ್‌ಐಟಿ ತಿಳಿಸಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ತಿರುವು ಲಭ್ಯವಾಗಿದ್ದು, ಎಸ್‌ಐಟಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ವಿಷಯ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್ ಗೌಡ, ಶ್ರವಣ್ ನಿರೀಕ್ಷಣಾ ಜಾಮೀನಿಗೆ ಎಸ್‌ಐಟಿ ಪೊಲೀಸರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ. ರಮೇಶ್ ಜಾರಕಿಹೊಳಿಯಿಂದ ಹಣ ವಸೂಲಿ ಮಾಡಿದ್ದ ಸಿಡಿ ಗ್ಯಾಂಗ್, ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಯುವತಿಗೆ ಸೂಚಿಸಿದ್ದರು. ಮೊಬೈಲ್, ವಾಟ್ಸ್ ಆಪ್, ವಿಡಿಯೋ ಕಾಲ್ ಮೂಲಕವೂ ಸಂಪರ್ಕ ಸಾಧಿಸಲು ತಿಳಿಸಿದ್ದರು. ಲೈಂಗಿಕ ಸಂಪರ್ಕವೂ ಸುಲಿಗೆ, ಬ್ಲಾಕ್ ಮೇಲ್ ಉದ್ದೇಶದಿಂದಲೇ ಆಗಿರುವುದು ಎಂದು ಬಹಿರಂಗವಾಗಿದೆ. ಅಲ್ಲದೇ ಸಿಡಿ ಗ್ಯಾಂಗ್ನವರು ಹನಿಟ್ರ್ಯಾಪ್ ಮಾಡಿ ಹಲವು ಬಾರಿ ಹಣ ಪಡೆದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಎಂ.ವಿ.ನಾಗರಾಜ್ ಕೂಡಾ ಹೇಳಿಕೆ ನೀಡಿದ್ದು, ಈವರೆಗೂ ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರವಣ್, ನರೇಶ್ ಇಬ್ಬರಿಗೆ ಈಗ ತನಿಖೆಯ ಪ್ರಮುಖ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ಎಸ್‌ಐಟಿ ತಿಳಿಸಿದೆ. ಅಲ್ಲದೇ ಈ ಆರೋಪಿಗಳು ಇಂತಹದ್ದೇ ಬೇರೆ ಕೃತ್ಯಗಳಲ್ಲಿ ಭಾಗವಹಿಸಿರುವ ಅನುಮಾನವನ್ನೂ ವ್ಯಕ್ತಪಡಿಸಲಾಗಿದೆ.
ಆರೋಪಿಗಳು ಈವರೆಗೂ ತಲೆಮರೆಸಿಕೊಂಡಿದ್ದಾರೆ, ನ್ಯಾಯಸಮ್ಮತ ತನಿಖೆಗೆ ಆರೋಪಿಗಳಿಂದ ಅಡ್ಡಿಯಾಗಿದೆ. ಸಿಡಿ ಬಹಿರಂಗವಾದ ದಿನವೇ ಯುವತಿ, ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ಆಗಿದೆ. ಯುವತಿ ಸ್ನೇಹಿತನ ಮೊಬೈಲ್ ಮೂಲಕವೂ ಕರೆ ಬಂದಿದೆ. ಸಿಡಿ ಪ್ರಕರಣ ಬಹಿರಂಗವಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾದ ದೃಶ್ಯಗಳು ಇವೆ. ನಂತರ ಯುವತಿ ಹಾಗೂ ಸ್ನೇಹಿತನನ್ನು ಗೋವಾಗೆ ಕಳುಹಿಸಿದ್ದರು. ಗೋವಾದಲ್ಲಿ ಅವರು ಉಳಿದುಕೊಳ್ಳಲು ಸವಿತಾ ಎಂಬಾಕೆಯ ನೆರವಿನಿಂದ ವ್ಯವಸ್ಥೆ ಮಾಡಲಾಗಿತ್ತು. ಯುವತಿಗೂ ಆರೋಪಿಗಳಿಗೂ ಮೊದಲೇ ಲಿಂಕ್ ಇದ್ದು, ಯುವತಿ ಮನೆಯಲ್ಲಿ 9.20 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಒಡೆದ ಮೊಬೈಲ್ ಹಾಗೂ ದಾಖಲೆ ಕೂಡಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಾಗೂ ಯುವತಿ ಭೇಟಿ ಬಗ್ಗೆ, ಸುಲಿಗೆಯ ಹಣ ವಿನಿಮಯ ಬಗ್ಗೆ ಸಾಕ್ಷ್ಯ ಲಭ್ಯವಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.
ಬಹುಮುಖ್ಯವಾಗಿ ಸಿಡಿ ಬಹಿರಂಗವಾದ ನಂತರ ಯುವತಿಯನ್ನು ಸಂತೈಸಲು ಮಾ ಮೊಹಾಂತಿ ಎಂಬುವನಿಗೆ ಸೂಚನೆ ನೀಡಲಾಗಿತ್ತು. ಮಾ ಮೊಹಾಂತಿ ತನ್ನ ಕಾರಿನಲ್ಲಿ ರಾಜ್ಯಾದ್ಯಂತ ಸುತ್ತಾಡಿಸಿದ್ದ. ಕರ್ನಾಟಕ, ಕೇರಳದಲ್ಲಿ ಮಾರ್ಚ್ 6 ರಿಂದ 8ರ ನಡುವೆ ಸುತ್ತಾಡಿಸಿದ್ದ. ಇತ್ತ ಶ್ರವಣ್ ದೊಡ್ಡ ಕಾರ್ಯಾಚರಣೆಯಲ್ಲಿರುವುದಾಗಿ, ದೊಡ್ಡ ಲಾಭ ಬರುವ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಲೈಂಗಿಕ ಚಟುವಟಿಕೆ ಬಳಸಿಕೊಂಡು ಹಣ ಮಾಡುವುದಾಗಿ ಹೇಳಿದ್ದ. ಅಲ್ಲದೇ ನರೇಶ್ ಗೌಡ ಪುತ್ರಿಯ ನಾಮಕರಣದಲ್ಲಿ ಯುವತಿ ಭಾಗಿಯಾಗಿದ್ದು, ಸಂತ್ರಸ್ತೆ ಯುವತಿ ಹಾಗೂ ಶ್ರವಣ್ ಅದೇ ದಿನ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬ್ಲಾಕ್ ಮೇಲ್, ಸುಲಿಗೆಯ ಹಣದಿಂದ 17 ಲಕ್ಷ ರೂ. ಮೌಲ್ಯದ ಮಹೇಂದ್ರಾ ಥಾರ್ ಬುಕ್ ಮಾಡಲು ಯೋಚಿಸಿ ಸಹೋದರ ಚೇತನ್ ಹೆಸರಲ್ಲಿ ಖರೀದಿಸಲು 20 ಸಾವಿರ ರೂ. ಹಣ ಅಡ್ವಾನ್ಸ್ ನೀಡಲಾಗಿತ್ತು. ಅಲ್ಲದೇ 23 ಲಕ್ಷ ರೂ ಮೌಲ್ಯದ ಮಹೇಂದ್ರ ಎಕ್ಸ್‌ಯುವಿ 500 ಖರೀದಿಸಲು ನರೇಶ್ ಗೌಡ ಯೋಚಿಸಿದ್ದ. ಇದಕ್ಕಾಗಿ 1 ಲಕ್ಷ ರೂ. ಅಡ್ವಾನ್ಸ್ ಹಣವನ್ನೂ ನೀಡಿದ್ದ. ಸಂಪೂರ್ಣ ಹಣ ಕ್ಯಾಷ್ನಲ್ಲೇ ಪಾವತಿಸಲು ಇಬ್ಬರೂ ಮುಂದಾಗಿದ್ದರು. ಆದರೆ ಶೋ ರೂಂನವರು ಒಪ್ಪದಿದ್ದರಿಂದ ಹಣ ಪಾವತಿಸಲಾಗಿರಲಿಲ್ಲ ಎಂದು ಗೊತ್ತಾಗಿದೆ. ಜತೆಗೆ, ಯುವತಿಯ ಬ್ಯಾಂಕ್ ಅಕೌಂಟ್ಗೆ ಶ್ರವಣ್ ಹಲವು ಬಾರಿ ಹಣ ಹಾಕಿದ್ದ. ಶ್ರವಣ್ ಮತ್ತು ಯುವತಿಯ ನಡುವೆ ಮೊದಲೇ ಸಂಪರ್ಕವಿತ್ತು. ಲೈಂಗಿಕ ಚಟುವಟಿಕೆಯ ಚಿತ್ರೀಕರಣದ ನಂತರ ಯುವತಿ ಕರೆ ಮಾಡಿ ಕೆಲಸ ಆಗಿದೆ, ಹೊರಡುತ್ತೇನೆ ಎಂದಿದ್ದಳು ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ: ನಾನು ಸುರಕ್ಷಿತವಾಗಿದ್ದೇನೆ, ನನಗೆ ಯಾವ ಅಪಾಯವೂ ಇಲ್ಲ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ
Published On - 1:44 pm, Wed, 2 June 21