ಲಾಕ್‌ಡೌನ್ ನಿಮಿತ್ತ ಬಂದ್ ಆಗಿದ್ದ ಬೈಕ್ ಶೋ ರೂಮ್ ಈಗ ಕೊವಿಡ್ ಕೇರ್ ಸೆಂಟರ್; ಹಾವೇರಿಯ ಶೋ ರೂಮ್ ಮಾಲೀಕನಿಂದ ಮಾದರಿ ಕೆಲಸ

ಲಾಕ್‌ಡೌನ್ ನಿಮಿತ್ತ ಬಂದ್ ಆಗಿದ್ದ ಬೈಕ್ ಶೋ ರೂಮ್ ಈಗ ಕೊವಿಡ್ ಕೇರ್ ಸೆಂಟರ್; ಹಾವೇರಿಯ ಶೋ ರೂಮ್ ಮಾಲೀಕನಿಂದ ಮಾದರಿ ಕೆಲಸ
ಲಾಕ್‌ಡೌನ್ ನಿಮಿತ್ತ ಬಂದ್ ಆಗಿದ್ದ ಬೈಕ್ ಶೋ ರೂಮ್ ಈಗ ಕೊವಿಡ್ ಕೇರ್ ಸೆಂಟರ್

ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರು ಬೆಡ್, ಆಕ್ಸಿಜನ್ ಮತ್ತು ಸರಿಯಾದ ವೈದ್ಯಕೀಯ ಉಪಚಾರ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ‌. ಇದನ್ನರಿತ ಶೋ ರೂಂ ಮಾಲೀಕ ಪವನ ದೇಸಾಯಿ, ಸ್ಥಳೀಯ ಶಾಸಕರು ಹಾಗೂ ಸೇವಾ ಭಾರತಿ ಸಹಯೋಗದೊಂದಿಗೆ ಬಂದ್ ಆಗಿರುವ ಹಾವೇರಿ ನಗರದ ಬಹದ್ದೂರ್ ದೇಸಾಯಿ ಬೈಕ್ ಶೋ ರೂಂ ಅನ್ನು ಕೊರೊನಾ ಸೋಂಕಿತರ ಸಹಾಯಕ್ಕಾಗಿ ಬಳಸುತ್ತಿದ್ದಾರೆ.

TV9kannada Web Team

| Edited By: preethi shettigar

Jun 02, 2021 | 1:27 PM

ಹಾವೇರಿ: ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಇದರಿಂದಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದ್ದು, ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಆದರೆ ಕೊವಿಡ್ ತೀವ್ರತೆಯನ್ನು ಅರಿತ ಹಾವೇರಿ ಜಿಲ್ಲೆಯ ಬೈಕ್​ ಶೋ ರೂಂ ಮಾಲಿಕರೊಬ್ಬರು, ಶೋ ರೂಂ ಅನ್ನು ಕೊವಿಡ್ ಕೇರ್ ಸೆಂಟರ್​ ಆಗಿ ಪರಿವರ್ತನೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಸೋಂಕಿತರಿಗೆ ಬೇಕಾದ ಆಕ್ಸಿಜನ್, ಬೆಡ್​ಗಳು ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಹೀಗಾಗಿ ಲಾಕ್​ಡೌನ್ ನಂತರದಲ್ಲಿ ಬಂದ್ ಆಗಿರುವ ಶೋ ರೂಂ ಅನ್ನು ಕೊರೊನಾ ಸೋಂಕಿತರ ಸಹಾಯಕ್ಕಾಗಿ ಬಳಸಲಾಗುತ್ತಿದೆ.

ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರು ಬೆಡ್, ಆಕ್ಸಿಜನ್ ಮತ್ತು ಸರಿಯಾದ ವೈದ್ಯಕೀಯ ಉಪಚಾರ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ‌. ಇದನ್ನರಿತ ಶೋ ರೂಂ ಮಾಲೀಕ ಪವನ ದೇಸಾಯಿ, ಸ್ಥಳೀಯ ಶಾಸಕರು ಹಾಗೂ ಸೇವಾ ಭಾರತಿ ಸಹಯೋಗದೊಂದಿಗೆ ಬಂದ್ ಆಗಿರುವ ಹಾವೇರಿ ನಗರದ ಬಹದ್ದೂರ್ ದೇಸಾಯಿ ಬೈಕ್ ಶೋ ರೂಂ ಅನ್ನು ಕೊರೊನಾ ಸೋಂಕಿತರ ಸಹಾಯಕ್ಕಾಗಿ ಬಳಸುತ್ತಿದ್ದಾರೆ.

ಈವರೆಗೆ ಹಾವೇರಿ ನಗರದಲ್ಲಿ ಹೋಂ ಐಸೋಲೇಶನ್​ನಲ್ಲಿರುವ 679 ಸೋಂಕಿತರನ್ನ ಸಂಪರ್ಕಿಸಿ ಅವರಿಗೆ ಸಹಾಯ ಮಾಡಿದ್ದಾರೆ. ಶೋ ರೂಂನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪೈಕಿ ಇಪ್ಪತ್ತು ಜನ ಸಿಬ್ಬಂದಿಗಳು, ಸೇವಾ ಭಾರತಿ ಟ್ರಸ್ಟ್​ನ ಏಳು ಜನರು ಹಾಗೂ ಹತ್ತು ಜನ ವೈದ್ಯರ ತಂಡ ಸೋಂಕಿತರಿಗೆ ನೆರವು ಒದಗಿಸುವ ಈ ಕೆಲಸ‌ಕ್ಕೆ ಕೈ ಜೊಡಿಸಿದ್ದಾರೆ. ಶೋ ರೂಂನಲ್ಲಿ ಕೊವಿಡ್ ಸಹಾಯವಾಣಿ ಆರಂಭಿಸಿದ್ದು, ಕೊರೊನಾ ಸೋಂಕಿತರು ತಮಗೇನಾದರು ಸಮಸ್ಯೆ ಎಂದು ಸಹಾಯವಾಣಿಗೆ ಕರೆ ಮಾಡಿದರೆ ಸಾಕು ತಂಡದ ಸದಸ್ಯರು ತಕ್ಷಣ ಅವರ ಸಮಸ್ಯೆ ಆಲಿಸಿ ಅವರಿಗೆ ಬೇಕಾದ ವೈದ್ಯಕೀಯ ನೆರವು ಹಾಗೂ ಊಟದ ವ್ಯವಸ್ಥೆ ಮಾಡುತ್ತಾರೆ.

ಶೋ ರೂಂನಲ್ಲಿ ಒಟ್ಟು ಹತ್ತು ಕಾನ್ಸೆಂಟ್ರೇಟರ್​ಗಳಿವೆ. ಹೋಂ ಐಸೋಲೇಶನ್​ನಲ್ಲಿದ್ದು ಉಸಿರಾಟದ ಸಮಸ್ಯೆ ಎದುರಾದ ಸೋಂಕಿತರ ಮನೆಗಳಿಗೆ ತೆರಳಿ ತಂಡದ ಸದಸ್ಯರು ಆಕ್ಸಿಜನ್ ಕಾನ್ಸೆಂಟ್ರೇಟರ್ ಅಳವಡಿಸುತ್ತಾರೆ. ಅದರ ಜತೆಗೆ ಸರಕಾರಿ ಆಸ್ಪತ್ರೆಯ ಸಲಹೆ ಹಾಗೂ ಸೂಚನೆ ಹಾಗೂ ತಪಾಸಣೆ ಮೂಲಕ ಸೋಂಕಿತರಿಗೆ ಬೇಕಾದ ಔಷಧ ಮತ್ತಿತರೆ ವೈದ್ಯಕೀಯ ಸೌಲಭ್ಯಗಳನ್ನ ಶೋ ರೂಂನವರು ಹಾಗೂ ತಂಡದ ಸದಸ್ಯರು ತಲುಪಿಸುತ್ತಿದ್ದಾರೆ. ಅಲ್ಲದೆ ಸೋಂಕಿತರ ಆರೋಗ್ಯ ವಿಚಾರಣೆಗೆ ಸಂಬಂಧಿಸಿದಂತೆ ಆಗಾಗ ವಿಡಿಯೋ ಸಂವಾದದ ಮೂಲಕ ಶೋ ರೂಂನಿಂದ ವೈದ್ಯರು ಹಾಗೂ ಶಾಸಕರ ತಂಡ ಸೋಂಕಿತರಿಗೆ ಅಗತ್ಯ ಸಲಹೆ ಸೂಚನೆಗಳನ್ನ ನೀಡುತ್ತಾ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಶೋ ರೂಂ ಮಾಲೀಕ ಪವನ ದೇಸಾಯಿ ತಿಳಿಸಿದ್ದಾರೆ.

ವೈದ್ಯಕೀಯ ಉಪಚಾರ, ಊಟದ ಜೊತೆಗೆ ಸೋಂಕಿತರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಗೀತ ಸೇರಿದಂತೆ ಮನರಂಜನೆ, ಮನೋವೈದ್ಯರಿಂದ ಧೈರ್ಯ ತುಂಬುವ ಕೆಲಸ‌ ಕೂಡಾ‌ ಮಾಡಲಾಗುತ್ತಿದೆ. ಬಹದ್ದೂರ್ ದೇಸಾಯಿ ಶೋ ರೂಂ ನೇತೃತ್ವದಲ್ಲಿ ಸೋಂಕಿತರ ನೆರವಿಗಾಗಿ ಸೇವಾಭಾರತಿ ಟ್ರಸ್ಟ್ ಈ ಕೆಲಸ ಮಾಡುತ್ತಿದ್ದು, ಸ್ಥಳೀಯ ಶಾಸಕ ನೆಹರು ಓಲೇಕಾ ಈ ಕೆಲಸಕ್ಕೆ ಸಾಥ್ ನೀಡಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೇವೆ ಹಾಗೂ ಸಲಹೆ ಸಹಕಾರ ಸಿಗುತ್ತಿಲ್ಲ. ಅದರಲ್ಲೂ ಹೋಂ ಐಸೋಲೇಶನ್​ನಲ್ಲಿರುವ ಸೋಂಕಿತರು ಸೂಕ್ತ ವೈದ್ಯಕೀಯ ಸೇವೆ, ಸಲಹೆ, ಸಹಕಾರ ಸಿಗದೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಇದನ್ನರಿತು ನೆರವಿಗೆ ಧಾವಿಸಿದ ಶೋ ರೂಂ ಮಾಲಿಕರ ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

ಕೊರೊನಾದಿಂದ ಬಲಿಯಾದ ಅನಾಥ ಮೃತ ಶವಗಳಿಗೆ ಸರ್ಕಾರದಿಂದ ಮೋಕ್ಷ

ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

Follow us on

Related Stories

Most Read Stories

Click on your DTH Provider to Add TV9 Kannada