ವಾಚ್ ಟವರ್, ಹೀಟ್ ಮ್ಯಾಪ್, ಚೆನ್ನಮ್ಮ ಪಡೆ: ಹೊಸ ವರ್ಷಾಚರಣೆಗೆ ಬೆಂಗಳೂರಿನ ಎಲ್ಲೆಡೆ ಪೊಲೀಸ್ ಬಂದೋಬಸ್ತ್
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಭದ್ರತೆ ಹೆಚ್ಚಿಸಲಾಗಿದೆ. ಡಿಸೆಂಬರ್ 31 ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಸಿಸಿಟಿವಿ, ವಾಚ್‌ಟವರ್‌ಗಳ ಮೂಲಕ ಬಿಗಿ ನಿಗಾ ವಹಿಸಲಾಗಿದೆ. ಮಹಿಳಾ ಸುರಕ್ಷತೆಗೆ ಚೆನ್ನಮ್ಮ ಪಡೆ, ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು (Bangalore) ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಕೇಂದ್ರಗಳು ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಈ ಪ್ರದೇಶಗಳು ಮತ್ತು ಕೋರಮಂಗಲ ಸೇರಿದಂತೆ ಹೆಚ್ಚು ಜನಸಂದಣಿ ನಿರೀಕ್ಷಿತ ಸ್ಥಳಗಳಲ್ಲಿ ಪೊಲೀಸರು ಅತ್ಯಂತ ಹೆಚ್ಚಿನ ನಿಗಾ ವಹಿಸಿದ್ದಾರೆ. ನಗರದಾದ್ಯಂತ ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಸ್ತೆಗಳ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದೆ.
ಪ್ರಮುಖ ರಸ್ತೆಗಳಲ್ಲಿ ವಾಚ್‌ಟವರ್
ಪ್ರಮುಖ ರಸ್ತೆಗಳಲ್ಲಿ ವಾಚ್‌ಟವರ್‌ಗಳನ್ನು ನಿರ್ಮಿಸಿ ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ.
ಭದ್ರತೆಗಾಗಿ ಬೆಂಗಳೂರು ನಗರದ ಹಲವೆಡೆ ವಾಚ್ ಟವರ್‌ಗಳ ನಿಯೋಜನೆ ಮಾಡಲಾಗಿದೆ. ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ (ಕಲರ್ ಕೋಡೆಡ್ ವಿಶ್ಯುಯಲ್ ಟೂಲ್ ಆಧಾರಿತ ಭದ್ರತಾ ವ್ಯವಸ್ಥೆ. ಇದು ಪೊಲೀಸರಿಗೆ ಹೆಚ್ಚಿನ ಚಟುವಟಿಕೆ ಇರುವ ಪ್ರದೇಶಗಳನ್ನು ಗುರುತಿಸಲು ನೆರವಾಗುತ್ತದೆ.) ಮಾಡಲಾಗಿದೆ.
ಮಹಿಳಾ ಸುರಕ್ಷತೆಗೆ ಚೆನ್ನಮ್ಮ ಪಡೆ
ಮಹಿಳಾ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದ್ದು ಕ್ಯೂಆರ್‌ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಲೇಡಿ ಡಿ.ಸಿ.ಪಿ. ಶ್ರೇಣಿಯ ಅಧಿಕಾರಿಗಳು ಸಹ ನಿಯೋಜಿತರಾಗಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಮಹಿಳಾ ಸಹಾಯವಾಣಿ ಕೇಂದ್ರಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ಮಹಿಳಾ ಬೌನ್ಸರ್ಸ್ ನಿಯೋಜನೆ
ವುಮೆನ್ ಬೌನ್ಸರ್ಗಳನ್ನೂ ಸಹ ನಿಯೋಜಿಸಲಾಗಿದೆ. ಅಸ್ವಸ್ಥರಾದವರಿಗೆ ಸುರಕ್ಷತೆ ಒದಗಿಸಲು ಸೇಫ್ಟಿ ಐಲ್ಯಾಂಡ್‌ಗಳನ್ನು ನಿರ್ಮಿಸಲಾಗಿದ್ದು, ವುಮೆನ್ ಶೆಲ್ಟರ್‌ಗಳಲ್ಲಿ ಮಹಿಳಾ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಲಭ್ಯವಿರುತ್ತಾರೆ. 112 ತುರ್ತು ಸೇವೆಗೆ ಕರೆ ಬಂದ ತಕ್ಷಣ ದ್ವಿಗುಣ ಬಲದೊಂದಿಗೆ ಸ್ಪಂದಿಸಲು ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳ ಮತ್ತು ಅಬಕಾರಿ ಇಲಾಖೆಗಳೊಂದಿಗೆ ಜಂಟಿ ತಪಾಸಣೆ ನಡೆಸಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತರಿಂದ ಭದ್ರತಾ ಪರಿಶೀಲನೆ
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಡಿಸೆಂಬರ್ 30ರ ರಾತ್ರಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಜನಸಂದಣಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜನರನ್ನು ಪದೇ ಪದೇ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಲು ಬಿಡುವುದಿಲ್ಲ, ಬದಲಾಗಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳಂತಹ ನಿರ್ದಿಷ್ಟ ಸ್ಥಳಗಳಿಗೆ ತೆರಳಲು ಅವಕಾಶ ನೀಡಲಾಗುವುದು ಎಂದಿದ್ದಾರೆ. ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಅವರು ಬ್ರಿಗೇಡ್ ರಸ್ತೆಗೆ ಭೇಟಿ ನೀಡಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಅವರು ಜನರಿಗೆ ಶಿಸ್ತುಬದ್ಧವಾಗಿ ಸಂಭ್ರಮಿಸಲು ಕರೆ ನೀಡಿದ್ದು, ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಕಣ್ಗಾವಲು ವ್ಯವಸ್ಥೆ ಎಲ್ಲವನ್ನೂ ದಾಖಲಿಸುತ್ತಿದ್ದು, ಯಾವುದೇ ತಪ್ಪು ಮಾಡಿದರೆ ನಂತರವೂ ಪತ್ತೆಹಚ್ಚಲು ಸಾಧ್ಯ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಹದ್ದಿನಕಣ್ಣು
ಮುಂಜಾಗ್ರತಾ ಕ್ರಮವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಾದ ಶ್ರೀರಾಮದೇವರ ಬೆಟ್ಟ, ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಯಶ್ವಂತ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಈ ತಾಣಗಳಿಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.




