ಕೋಟಿ ವೆಚ್ಚದಲ್ಲಿ ಮಗಳ ಮದುವೆ ಮಾಡಬೇಕೆಂಬ ಕನಸು ಕಂಡಿದ್ದ ಉದ್ಯಮಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣು
ಪ್ರತಿ ಪೋಷಕರೂ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಕನಸು ಹೊತ್ತಿರುತ್ತಾರೆ. ಹಾಗೆಯೇ ಈ ಉದ್ಯಮಿ ಕೂಡ ತಮ್ಮ ಮಗಳ ಮದುವೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಮಾಡಬೇಕೆನ್ನುವ ಕನಸು ಕಂಡಿದ್ದರು.
ಪ್ರತಿ ಪೋಷಕರೂ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಕನಸು ಹೊತ್ತಿರುತ್ತಾರೆ. ಹಾಗೆಯೇ ಈ ಉದ್ಯಮಿ ಕೂಡ ತಮ್ಮ ಮಗಳ ಮದುವೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಮಾಡಬೇಕೆನ್ನುವ ಕನಸು ಕಂಡಿದ್ದರು. ಆದರೆ ಅವರಿಂದ ಹಣಪಡೆದ ಕೆಲವು ಮಂದಿ ಹಣ ವಾಪಸ್ ನೀಡಲೇ ಇಲ್ಲ. ಅವರ ಬಳಿ ಕೇವಲ 29 ಲಕ್ಷ ರೂ ಹಣ ಮಾತ್ರ ಇತ್ತು. ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗೂ ಒಂದು ಕಡೆ. ಅದಕ್ಕಾಗಿ ದುಡುಕಿ ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆ, ಉದ್ಯಮಿಯೊಬ್ಬರು ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ.
ಇದೀಗ ಇವರಿಬ್ಬರ ಸಾವು ಇಡೀ ನಗರದಲ್ಲೇ ಸಂಚಲನ ಮೂಡಿಸಿದೆ. ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಶವದ ಮೇಲೆ ಗುಂಡಿನ ಗುರುತುಗಳಿದ್ದವು. ಘಟನಾ ಸ್ಥಳದಿಂದ ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉದ್ಯಮಿ ಸಂಜಯ್ ಸೇಠ್ ಬಾಗೇಶ್ವರ ಧಾಮದ ಭಕ್ತರಾಗಿದ್ದರು. ಅವರ ಆತ್ಮಹತ್ಯೆ ಪತ್ರದಲ್ಲಿ ಗುರೂಜಿ, ನನ್ನನ್ನು ಕ್ಷಮಿಸಿ, ನನಗೆ ಇನ್ನೊಂದು ಜನ್ಮ ಸಿಕ್ಕರೆ, ನಾನು ಅದನ್ನು ನಿಮ್ಮ ನಿಷ್ಠಾವಂತ ಭಕ್ತನಾಗಿ ಇರಲು ಇಷ್ಟಪಡುತ್ತೇನೆ.
ಘಟನೆಗೂ ಮುನ್ನ ಸಂಜಯ್ ಸೇಠ್ ಅವರು ಅಳುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಬಹಳಷ್ಟು ಮಂದಿ ನನ್ನಿಂದ ಪಡೆದ ಸಾಲವನ್ನು ಮರುಪಾವತಿಸಿಲ್ಲ, ದಯವಿಟ್ಟು ನನ್ನ ಮಕ್ಕಳಿಗಾಗಿ, ನನ್ನ ಮಗಳ ಮದುವೆಗಾಗಿ ನನ್ನ ಹಣವನ್ನು ಹಿಂತಿರುಗಿಸಿ, ಅವಳ ಮದುವೆಯನ್ನು 50 ಲಕ್ಷದಿಂದ 1 ಕೋಟಿಯಲ್ಲಿ ಆಯೋಜಿಸಬೇಕೆನ್ನುವ ಆಸೆ ನನಗಿತ್ತು, ನನ್ನ ಮಗಳ ಖಾತೆಯಲ್ಲಿ 29 ಲಕ್ಷ ರೂ ಹಣವಿದೆ. ಮಗಳ ಮದುವೆ ಹಾಗೆಯೇ ನಡೆಯಬೇಕು, ನನ್ನ ಹೆಂಡತಿ ಮತ್ತು ನಾನು ಇಬ್ಬರೂ ದೂರ ಹೋಗುತ್ತಿದ್ದೇವೆ, ಬದುಕಲು ಸಾಧ್ಯವಾಗುತ್ತಿಲ್ಲ, ಮಕ್ಕಳೇ ನಮ್ಮನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾರೆ.
ಸಂಜಯ್ ಸೇಠ್ ಅವರು ತಮ್ಮ ಪತ್ನಿ ಮೀನು ಜೊತೆ ನಗರದ ಹೃದಯ ಭಾಗದಲ್ಲಿರುವ ಕಿಶೋರ್ ಗಂಜ್ ಪ್ರದೇಶದಲ್ಲಿ ವಾಸವಾಗಿದ್ದರು. ಘಟನೆಯ ವೇಳೆ ಸಂಜಯ್ ಮತ್ತು ಮೀನು ಇಬ್ಬರೂ ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿದ್ದರು. ಗುಂಡಿನ ಸದ್ದು ಕೇಳಿದ ನಂತರ ಕುಟುಂಬದ ಇತರ ಸದಸ್ಯರು ಮಹಡಿಗೆ ಬಂದರು. ಮಹಿಳೆ ಆಗಲೇ ಸಾವನ್ನಪ್ಪಿದ್ದಳು, ಆದರೆ ಸಂಜಯ್ ಇನ್ನೂ ಉಸಿರಾಡುತ್ತಿದ್ದರು. ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರೂ ಮೃತಪಟ್ಟಿದ್ದರು.
ಪನ್ನಾ ಪೊಲೀಸ್ ಅಧೀಕ್ಷಕ ಧರ್ಮರಾಜ್ ಮೀನಾ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಹೊರಗಿನವರು ಭಾಗಿಯಾಗಿರುವಂತೆ ತೋರುತ್ತಿಲ್ಲ, ದಂಪತಿಗಳು ಆ ಕೋಣೆಯಲ್ಲಿ ಇಬ್ಬರೇ ಇದ್ದರು, ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Sun, 29 January 23