Rahul Gandhi At Lal Chowk: ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಿದ ರಾಹುಲ್ ಗಾಂಧಿ
Bharath Jodo Yatra: ಜಮ್ಮು ಮತ್ತು ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ರಾಷ್ಟ್ರ ಧ್ವಜ ಯಾಕೆ ಹಾರಿಸಿಲ್ಲ ಎಂದು ಕೆಲವಾರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹಲವರು ಟೀಕೆ ಮಾಡಿದ್ದರು. ಇದೀಗ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಭಾನುವಾರ ಇಲ್ಲಿಯ ಲಾಲ್ ಚೌಕ್ ವೃತ್ತದಲ್ಲಿ (Lal Chowk, Srinagar) ಭಾರತದ ರಾಷ್ಟ್ರ ಧ್ವಜದ ಆರೋಹಣ ಮಾಡಿದರು. ಭಾರತ್ ಜೋಡೋ ಯಾತ್ರೆಯ ಕೊನೆಯ ನಡಿಗೆಯ ದಿನವಾದ ಇಂದು ರಾಹುಲ್ ಗಾಂಧಿ ಪಾದಯಾತ್ರೆ ಆರಂಭಕ್ಕೆ ಮುನ್ನ ತ್ರಿವರ್ಣ ಬಾವುಟ ಲಾಲ್ ಚೌಕ್ನಲ್ಲಿ ಹಾರಿಸಿದರು.
ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಅಡಿ ಇಟ್ಟರೂ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ರಾಷ್ಟ್ರ ಧ್ವಜ ಯಾಕೆ ಹಾರಿಸಿಲ್ಲ ಎಂದು ಕೆಲವಾರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹಲವರು ಟೀಕೆ ಮಾಡಿದ್ದರು. ಕಾಶ್ಮೀರೀ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ ಎಂಬ ಖಂಡನೆಗಳು ವ್ಯಕ್ತವಾಗಿದ್ದವು. ಇದೀಗ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ತೊಂಬತ್ತರ ದಶಕದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಲಾಲ್ ಚೌಕ್ನಲ್ಲಿ ಭಾರತದ ಬಾವುಟ ಹಾರಿಸದಂತೆ ಉಗ್ರರು ಬೆದರಿಕೆ ಹಾಕಿದ್ದರು. ಭದ್ರತಾ ಪಡೆಗಳು ಇದನ್ನು ಸವಾಲಾಗಿ ಸ್ವೀಕರಿಸಿ ಅಲ್ಲಿ ಧ್ವಜ ಹಾರಿಸಿದ್ದರು. 1992ರಲ್ಲಿ ಬಿಜೆಪಿಯ ಮುಖಂಡರು ಗಣರಾಜ್ಯ ದಿನದಂದು ರಾಷ್ಟ್ರ ಬಾವುಟ ಹಾರಿಸಿದರು. ಆ ಬಳಿಕ ಲಾಲ್ ಚೌಕ್ ದೇಶದ ಗಮನ ಸೆಳೆಯತೊಡಗಿತ್ತು. 2009ರವರೆಗೂ ಭದ್ರತಾ ಪಡೆಗಳು ಪ್ರತೀ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವಗಳಂದು ಅಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದವು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಲಾಲ್ ಚೌಕ್ನಲ್ಲಿ ಮತ್ತೆ ರಾಷ್ಟ್ರ ಧ್ವಜ ಹಾರಾಡಿಸುವ ಪರಿಪಾಟ ಬಂದಿದೆ.
ಇನ್ನು, ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಕಾಲಿಟ್ಟ ಬಳಿಕ ಅಲ್ಲಿನ ಬಿಜೆಪಿಯೇತರ ರಾಜಕಾರಣಿಗಳನ್ನು ಒಗ್ಗೂಡಿಸುವ ಕೆಲಸ ಆಗಿದೆ. ಪಿಡಿಪಿಯ ಮೆಹಬೂಬ ಮುಫ್ತಿ, ನ್ಯಾಷನಲ್ ಕಾನ್ಫೆರೆನ್ಸ್ನ ಒಮರ್ ಅಬ್ದುಲ್ಲಾ ಮೊದಲಾದವರು ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು, ಇದೇ ಕಣಿವೆ ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಪಾದಯಾತ್ರೆ ವೇಳೆ ಪೊಲೀಸರ ಭದ್ರತಾ ವೈಫಲ್ಯದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದರು. ಜನರ ಗುಂಪನ್ನು ನಿಯಂತ್ರಿಸಲು ಒಬ್ಬರೂ ಪೊಲೀಸರು ಇರಲಿಲ್ಲ. ಇದರಿಂದ ತಾನು ನಡಿಗೆ ನಿಲ್ಲಿಸಬೇಕಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಹೇಳಿಕೊಂಡಿದ್ದರು. ಆ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಭಾರತ್ ಜೋಡೋ ಯಾತ್ರೆ ಮತ್ತು ಸಮಾರೋಪ ಸಮಾರಂಭಕ್ಕೆ ಅಗತ್ಯ ಭದ್ರತೆಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.
ಇಂದು ಭಾನುವಾರ ಭಾರತ್ ಜೋಡೋ ಯಾತ್ರೆ ಶ್ರೀನಗರದ ಪಂಥ ಚೌಕ್ನಿಂದ ಹೊರಟಿದ್ದು, ಬೋಲೆವಾರ್ಡ್ ರಸ್ತೆಯ ನೆಹರೂ ಪಾರ್ಕ್ ಬಳಿ ಸಮಾಪ್ತಿಗೊಳ್ಳಲಿದೆ. ಇಂದು ಯಾತ್ರೆಯ ಕೊನೆಯ ನಡಿಗೆ ದಿನವಾಗಿದೆ. ನಾಳೆ ಯಾತ್ರೆಯ ಸಮಾರೋಪ ಕಾರ್ಯಕ್ರಮ ಶ್ರೀನಗರದಲ್ಲೇ ನಡೆಯಲಿದೆ.