ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ

Punjab Assembly Election 2022: ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು.

ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ ಕಾಟ !; ಮಹಿಳೆಯರ ಮತ ಸೆಳೆಯಲು ವಿಶೇಷ ಘೋಷಣೆ ಮಾಡಿದ ದೆಹಲಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್​

ಮೋಗಾ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Arvind Kejriwal) ಸದ್ಯ ಪಂಜಾಬ್​, ಉತ್ತರಾಖಂಡ್​ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಿನ್ನೆ ಉತ್ತರಾಖಂಡ್​​ಗೆ ಭೇಟಿ ಕೊಟ್ಟಿದ್ದ ಕೇಜ್ರಿವಾಲ್​, ಇಂದು ಪಂಜಾಬ್​ಗೆ ಹೋಗಿದ್ದಾರೆ. ಅಲ್ಲಿನ ಮಹಿಳೆಯರ ಮತ ಸೆಳೆಯಲು ಮುಂದಾಗಿದ್ದಾರೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್​ನ ಪ್ರತಿ ಮಹಿಳೆಗೂ ಪ್ರತಿ ತಿಂಗಳೂ 1 ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಆಪ್​ ಸೇರಿ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಮಾದರಿಯಲ್ಲಿ ಜನರನ್ನು ಸೆಳೆಯಲು ಶುರುವಿಟ್ಟುಕೊಂಡಿವೆ. 

ಇನ್ನು ಇಂದು ಪಂಜಾಬ್​ಗೆ ಭೇಟಿಕೊಟ್ಟಿರುವ ಅರವಿಂದ್ ಕೇಜ್ರಿವಾಲ್​, ಪಂಜಾಬ್​​ನಲ್ಲಿ 2022ರ ಚುನಾವಣೆಯಲ್ಲಿ ಆಪ್​ ಸರ್ಕಾರ ಅಧಿಕಾರಕ್ಕೆ ಬಂದರೆ  18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೂ ತಿಂಗಳಿಗೆ 1 ಸಾವಿರ ರೂಪಾಯಿ ನೀಡುತ್ತೇವೆ. ಅದೂ ಕೂಡ ನೇರವಾಗಿ ಅವರ ಅಕೌಂಟ್​ಗೇ ತಲುಪಲಿದೆ. ಒಂದು ಕುಟುಂಬದಲ್ಲಿ ಮೂವರು ಮಹಿಳೆಯರು ಇದ್ದರೆ, ಆ ಮೂವರ ಅಕೌಂಟ್​ಗಳು ತಲಾ 1 ಸಾವಿರ ರೂಪಾಯಿ ಹಾಕಲಾಗುವುದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತರಲು ನಿರ್ಧರಿಸಿರುವ ಈ ಯೋಜನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ಮೋಗಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಇದೇ ವೇಳೆ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ ವಿರುದ್ಧ  ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ಕಳೆದ ಬಾರಿ ಕೇಜ್ರಿವಾಲ್​ ಪಂಜಾಬ್​ಗೆ ಬಂದಿದ್ದಾಗ ಇಲ್ಲಿನ ಜನರಿಗೆ ಉಚಿತ ವಿದ್ಯುತ್​ ಮತ್ತು ಉಚಿತ ಆರೋಗ್ಯ ಸೇವೆಯ ಭರವಸೆ ನೀಡಿದ್ದರು. ಅವರು ಅತ್ತ ಹೋಗುತ್ತಿದ್ದಂತೆ ಇತ್ತ ಮುಖ್ಯಮಂತ್ರಿ ಛನ್ನಿ, ಒಂದು ಯೂನಿಟ್​ ವಿದ್ಯುತ್​ ಬೆಲೆಯನ್ನು 3 ರೂಪಾಯಿಗೆ ಇಳಿಸಿದ್ದರು. ಅಷ್ಟೇ ಅಲ್ಲ, ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್​ ನೀಡಬೇಕೆ ಹೊರತು, ಉಚಿತವಾಗಿ ನೀಡುವುದಲ್ಲ ಎಂದಿದ್ದರು. ಈ ಬಾರಿ ಕೇಜ್ರಿವಾಲ್​ ಅದನ್ನೇ ಪ್ರಸ್ತಾಪ ಮಾಡಿದ್ದಾರೆ.‘ಪಂಜಾಬ್​​ನಲ್ಲಿ ಫೇಕ್​ ಕೇಜ್ರಿವಾಲ್​ (ಸಿಎಂ ಛೆನ್ನಿಯನ್ನು ಉದ್ದೇಶಿಸಿ ಹೇಳಿದ್ದು) ಅಲೆದಾಡುತ್ತಿದ್ದಾರೆ. ನಾನು ಇಲ್ಲಿ ಏನಾದರೂ ಭರವಸೆ ನೀಡಿ, ಅತ್ತ ಹೋಗುತ್ತಿದ್ದಂತೆ ಇತ್ತ ಅದನ್ನೇ ಅನುಷ್ಠಾನಕ್ಕೆ ತರುತ್ತಾರೆ. ಆ ಫೇಕ್​ ಕೇಜ್ರಿವಾಲ್​ ಬಗ್ಗೆ ನೀವೆಲ್ಲ ಎಚ್ಚರಿಕೆಯಿಂದ ಇರಬೇಕು’ ಎಂದು ಟಾಂಗ್​ ಕೊಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ಎರಡು ದಿನಗಳ ಪಂಜಾಬ್​ ಪ್ರವಾಸದಲ್ಲಿದ್ದಾರೆ. ಅವರಿಲ್ಲಿ ಮಿಷನ್ ಪಂಜಾಬ್ ಉದ್ಘಾಟನೆ ಮಾಡಲು ಬಂದವರು. ಇಂದು ಸಂಜೆಹೊತ್ತಿಗೆ ಅವರು ಲುಧಿಯಾನಾಕ್ಕೆ ಭೇಟಿ ಕೊಟ್ಟು, ಆಟೋ ಚಾಲಕರೊಂದಿಗೆ ಚರ್ಚೆ ನಡೆಸುವರು. ಮಂಗಳವಾರ ಕೇಜ್ರಿವಾಲ್​ ಅವರು ಆಪ್​ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ: ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಿದರೆ ಮಾತ್ರ ನಾವು ಮನೆಗೆ ಹೋಗುತ್ತೇವೆ: ರಾಕೇಶ್ ಟಿಕಾಯತ್

Click on your DTH Provider to Add TV9 Kannada