ವಿದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ತಂದ ಪುರಾತತ್ವ ಇಲಾಖೆ, ಅಮೆರಿಕದಿಂದಲೇ ಹೆಚ್ಚು

|

Updated on: Nov 02, 2024 | 10:44 AM

ವಿವಿಧ ಕಾರಣಗಳಿಂದಾಗಿ ವಿದೇಶಗಳ ಪಾಲಾಗಿದ್ದ ಭಾರತದ ಪುರಾತನ ಕಲಾಕೃತಿಗಳು, ಸಾಂಸ್ಕೃತಿಕ ಮಹತ್ವ ಸಾರುವ ವಸ್ತುಗಳನ್ನು ಮರಳಿ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಹಿಸುತ್ತಿರುವ ಶ್ರಮ ಇದೀಗ ಸಾರ್ಥಕವಾಗುತ್ತಿದೆ. 2014ರ ನಂತರ ಈವರೆಗೆ ಒಟ್ಟಾರೆಯಾಗಿ 640 ಪುರಾತನ ಕಾಲಾಕೃತಿಗಳನ್ನು ಭಾರತಕ್ಕೆ ವಾಪಸ್ ತರಲಾಗಿದ್ದು, ಈ ಪೈಕಿ ಹೆಚ್ಚಿನವು ಅಮೆರಿಕದಿಂದ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.

ವಿದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ತಂದ ಪುರಾತತ್ವ ಇಲಾಖೆ, ಅಮೆರಿಕದಿಂದಲೇ ಹೆಚ್ಚು
ವಿದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ತಂದ ಪುರಾತತ್ವ ಇಲಾಖೆ, ಅಮೆರಿಕದಿಂದಲೇ ಹೆಚ್ಚು
Follow us on

ನವದೆಹಲಿ, ನವೆಂಬರ್ 2: ವಿವಿಧ ಕಾರಣಗಳಿಂದ ವಿದೇಶಗಳಿಗೆ ಒಯ್ಯಲ್ಪಟ್ಟಿದ್ದ 640 ಪುರಾತನ ಕಲಾಕೃತಿಗಳನ್ನು ವಾಪಸ್ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿರುವ ಇಲಾಖೆ, ವಿದೇಶಗಳಿಂದ ವಾಪಸ್ ತಂದಿರುವ ಕಲಾಕೃತಿಗಳ ಪೈಕಿ ಅತಿಹೆಚ್ಚು ಅಮೆರಿಕದಿಂದಲೇ ತರಲಾಗಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ ಒಂದು ದಶಕದಲ್ಲಿ ವಿವಿಧ ದೇಶಗಳಿಂದ 640 ಕಲಾಕೃತಿಗಳನ್ನು ವಾಪಸ್ ತರಿಸಲಾಗಿದೆ. ಅತ್ಯಧಿಕ ಸಂಖ್ಯೆಯ ಅಂದರೆ, 578 ಕಲಾಕೃತಿಗಳನ್ನು ಅಮೆರಿಕದಿಂದಲೇ ತರಲಾಗಿದೆ ಎಂದು ಇಲಾಖೆ ಉಲ್ಲೇಖಿಸಿದೆ. ಜತೆಗೆ, ವಾಪಸ್ ತಂದಿರುವ ಕಲಾಕೃತಿಗಳ ವಿಡಿಯೋವನ್ನೂ ಪ್ರಕಟಿಸಿದೆ.

ಪುರಾತತ್ವ ಇಲಾಖೆ ಎಕ್ಸ್ ಸಂದೇಶ


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ವಿವಿಧ ಕಾರಣಗಳಿಂದ ಅಮೆರಿಕ ಸೇರಿದ್ದ ಭಾರತದ ರಾಷ್ಟ್ರೀಯ ಪರಂಪರೆಯ ಕಲಾಕೃತಿಗಳನ್ನು ವಾಪಸ್ ತರುವ ಬಗ್ಗೆಯೂ ಸಮಾಲೋಚನೆಗಳನ್ನು ನಡೆಸಿದ್ದರು. ಪ್ರಧಾನಿಯವರ ಮೂರು ದಿನಗಳ ಅಮೇರಿಕ ಭೇಟಿ ಸಂದರ್ಭದಲ್ಲೇ ಭಾರತಕ್ಕೆ 297 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಈಗ ಪುರಾತತ್ವ ಇಲಾಖೆ ಹೇಳಿರುವ 640 ಪುರಾತನ ಕಲಾಕೃತಿಗಳಲ್ಲಿ ಅವೂ ಸಹ ಸೇರಿವೆ.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2014 ರಿಂದ ಭಾರತವು 640 ಪ್ರಾಚೀನ ವಸ್ತುಗಳನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬೆಳಗಿದ 25 ಲಕ್ಷ ಹಣತೆ, ಮತ್ತೊಂದು ಗಿನ್ನೆಸ್ ದಾಖಲೆ ಬರೆದ ದೀಪೋತ್ಸವ

2021 ರಲ್ಲಿ ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ಸಮಯದಲ್ಲಿ, 12 ನೇ ಶತಮಾನದ ಸೊಗಸಾದ ಕಂಚಿನ ನಟರಾಜ ಪ್ರತಿಮೆ ಸೇರಿದಂತೆ 157 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಹಸ್ತಾಂತರಿಸಿತ್ತು. ಅಲ್ಲದೆ, 2023 ರಲ್ಲಿ ಪ್ರಧಾನಿಯವರ ಅಮೆರಿಕ ಭೇಟಿಯ ಕೆಲವು ದಿನಗಳ ನಂತರ, 105 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ