ಅಮಿತ್ ಶಾ ವಿರುದ್ಧದ ಆರೋಪ: ಕೆನಡಾ ಹೈಕಮಿಷನರ್ ಕರೆಸಿ ಭಾರತ ತೀವ್ರ ಆಕ್ರೋಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆನಡಾದ ಸಚಿವರೊಬ್ಬರು ಮಾಡಿರುವ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಭಾರತ ಶನಿವಾರ ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ ತೀವ್ರ ಆಕ್ಷೇಪಣೆ ಸಲ್ಲಿಸಿದೆ. ಕೆನಡಾದ ಆರೋಪಗಳು ಆಧಾರರಹಿತ ಎಂದಿರುವ ಭಾರತ, ಅಂತಹ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನವದೆಹಲಿ, ನವೆಂಬರ್ 2: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆನಡಾ ವಿದೇಶಾಂಗ ಉಪ ಸಚಿವ ಡೇವಿಡ್ ಮಾರಿಸನ್ ಅಸಂಬದ್ಧ ಆರೋಪಗಳನ್ನು ಮಾಡಿರುವ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಕ್ರಮಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಭಾರತ ಎಚ್ಚರಿಸಿದೆ. ಅಷ್ಟೇ ಅಲ್ಲದೆ, ಭಾರತೀಯ ವಿದೇಶಾಂಗ ಸಚಿವಾಲಯ ಕೂಡ ಕೆನಡಾ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ. ಕೆಲವು ದಿನಗಳ ಹಿಂದೆ ಮತ್ತೆ ಕೆನಡಾ ಯಾವುದೇ ಪುರಾವೆಗಳಿಲ್ಲದೆ ಭಾರತದ ವಿರುದ್ಧ ಅನೇಕ ಅಸಂಬದ್ಧ ಆರೋಪಗಳನ್ನು ಮಾಡಿದೆ.
ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ನಾವು ನಿನ್ನೆ ಕನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ ನಮ್ಮ ಪ್ರತಿಭಟನೆಯನ್ನು ಸೂಚಿಸಿದ್ದೇವೆ. ನಮ್ಮ ಗೃಹ ಸಚಿವರ ಬಗ್ಗೆ ಕೆನಡಾ ಸಚಿವ ಡೇವಿಡ್ ಮಾರಿಸನ್ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳನ್ನು ಭಾರತ ಸರ್ಕಾರವು ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಕೆನಡಾದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಸಂಚಿನ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ ಎಂದು ಕೆನಡಾ ಆರೋಪಿಸಿತ್ತು. ಈ ಸಂಚುಗಳ ಹಿಂದೆ ಶಾ ಇದ್ದಾರೆ ಎಂದು ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಅವರು ವಾಷಿಂಗ್ಟನ್ ಪೋಸ್ಟ್‌ಗೆ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಭಾರತದ ಮೇಲೆ ಕೆನಡಾ ‘ವಕ್ರ’ ದೃಷ್ಟಿ; ಉತ್ತರಕೊರಿಯಾ, ಇರಾನ್, ಚೀನಾ ಪಟ್ಟಿಗೆ ಭಾರತವನ್ನೂ ಸೇರಿಸಿದ ಕೆನಡಾ
ಶಾ ವಿರುದ್ಧ ಕೆನಡಾ ಮಾಡಿದ್ದ ಆರೋಪಗಳ ಬಗ್ಗೆ ಅಮೆರಿಕ ಕೂಡ ಪ್ರತಿಕ್ರಿಯಿಸಿತ್ತು. ಕೆನಡಾ ಆರೋಪಗಳು ಆತಂಕಕಾರಿ ಎಂದು ಅಮೆರಿಕ ಹೇಳಿತ್ತು. ಕೆನಡಾ ಸರ್ಕಾರ ಮಾಡಿರುವ ಆರೋಪಗಳ ಸಂಬಂಧ ಕೆನಡಾ ಸರ್ಕಾರದೊಂದಿಗೆ ಸಮಾಲೋಚನೆ ಮುಂದುವರಿಸುತ್ತೇವೆ ಎಂದು ಅಮೆರಿಕ ಹೇಳಿತ್ತು. ಏತನ್ಮಧ್ಯೆ, ಕೆನಡಾದ ಆರೋಪಗಳು ಅಸಂಬದ್ಧ ಮತ್ತು ಆಧಾರರಹಿತ ಎಂದು ಭಾರತ ಸ್ಪಷ್ಟಪಡಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ