Assam Assembly elections 2021: ಕಾಂಗ್ರೆಸ್ ಜಿನ್ನಾರ ಹೆಜ್ಜೆ ಅನುಸರಿಸುತ್ತಿದ್ದು, ದೇಶವನ್ನು ನಾಶ ಮಾಡಲಿದೆ: ಶಿವರಾಜ್ ಸಿಂಗ್ ಚೌಹಾಣ್
Shivraj Singh Chouhan at Assam: ಎಐಯುಡಿಎಫ್ ಜತೆ ಮೈತ್ರಿ ಮಾಡಿರುವುದಕ್ಕೆ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
ದಿಬ್ರುಗಡ್: ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ನಹರ್ಕಾಟಿಯಾದಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ಪಕ್ಷ ಮಹಾತ್ಮಾಗಾಂಧಿಯವರ ಹೆಜ್ಜೆಯನ್ನು ಅನುಸರಿಸುವ ಬದಲು ಜಿನ್ನಾ ಅವರ ಹೆಜ್ಜೆಯನ್ನು ಅನುಸರಿಸುತ್ತಿದೆ. ಇದು ದೇಶವನ್ನು ನಾಶ ಮಾಡಲಿದೆ ಎಂದಿದ್ದಾರೆ. ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಹೆಜ್ಜೆಯನ್ನು ಅನುಸರಿಸುತ್ತಿಲ್ಲ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಜಿನ್ನಾ ಅವರ ಹೆಜ್ಜೆಯನ್ನು ಅನುಸರಿಸುತ್ತಿದ್ದಾರೆ. ಜಿನ್ನಾ ಅವರ ಹೆಜ್ಜೆ ಅಸ್ಸಾಂ ಮತ್ತು ಭಾರತವನ್ನು ನಾಶ ಮಾಡಲಿದೆ ಎಂದಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ ಎಐಯುಡಿಎಫ್ ಜತೆ, ಪಶ್ಚಿಮ ಬಂಗಾಳದಲ್ಲಿ ಐಎಸ್ಎಫ್ ಮತ್ತು ಕೇರಳದಲ್ಲಿ ಐಯುಎಂಎಲ್ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿ ಚೌಹಾಣ್ ಈ ಮಾತುಗಳನ್ನಾಡಿದ್ದಾರೆ.
ಅಸ್ಸಾಂನಲ್ಲಿ ಒಳನುಸುಳುಕೋರರನ್ನು ತುಂಬಿಸಿದ ಬದ್ರುದ್ದೀನ್ ಅಜ್ಮಲ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಅವರಿಗೆ ಸುಗಂಧ ದ್ರವ್ಯದ ವ್ಯಾಪಾರ ಇತ್ತು. ಆದರೆ ಅವರು ಸಮಾಜದಲ್ಲಿ ವಿಷ ಹರಡುತ್ತಿದ್ದಾರೆ. ನಾಗರಾಜ ಮತ್ತು ಸರ್ಪರಾಜ ಪರಸ್ಪರ ಮೈತ್ರಿ ಮಾಡಿಕೊಂಡರೆ ಅಸ್ಸಾಂ ಅಭಿವೃದ್ಧಿ ಹೊಂದುವುದಿಲ್ಲ. ಎಐಯುಡಿಎಫ್ ಜತೆ ಮೈತ್ರಿ ಮಾಡಿರುವುದಕ್ಕೆ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಚೌಹಾಣ್ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಭಾರತವನ್ನು ದಕ್ಷಿಣ ಮತ್ತು ಉತ್ತರ ಭಾರತ ಎಂದು ವಿಭಜಿಸಿದ್ದಾರೆ. ಇದನ್ನೇ ಅಸ್ಸಾಂನಲ್ಲಿ ಮುಂದುವರಿಸುತ್ತಾ ಬಂದು ವಿವಿಧ ಸಮುದಾಯ ಮತ್ತು ಬುಡಕಟ್ಟು ಜನರನ್ನು ವಿಭಜನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ 55 ವರ್ಷಗಳ ಕಾಲ ಅಸ್ಸಾಂನಲ್ಲಿ ಅಧಿಕಾರ ನಡೆಸಿದೆ. ಅವರು ಮಾಡಿದ್ದೇನು? ಅಸ್ಸಾಂನ್ನು ಮೊಘಲರಿಗೆ ಮಣಿಸಲು ಸಾಧ್ಯವಾಗಿರಲಿಲ್ಲ. ಲಚಿತ್ ಬೋರ್ಫುಕನ್ ಅವರ ನಾಯಕತ್ವ ಮೊಘಲರ ವಿರುದ್ಧ ಹೋರಾಡಿತ್ತು. ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಒಳನುಸುಳುವಿಕೆ, ಹಿಂಸಾಚಾರ, ಭಯೋತ್ಪಾದನೆ, ಹಸಿವು, ನಿರುದ್ಯೋಗವನ್ನು ಮಾತ್ರ ನೀಡಿದೆ. ಕಾಂಗ್ರೆಸ್ ಅಸ್ಸಾಂನಲ್ಲಿರುವ ಅಕ್ರಮ ವಲಸೆಗಾರರನ್ನು ಮತ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ಅವರು ಒಳನುಸುಳುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಚರಿತ್ರೆಯಾಗಿ ಮಾರ್ಪಡಲಿದೆ. ಕಾಂಗ್ರೆಸ್ಗೆ ಗೊತ್ತಿರುವುದು ನಾಟಕ ಮತ್ತು ಸಿನಿಮೀಯ ಆಟಗಳು ಮಾತ್ರ. ರಾಹುಲ್ ಕೇರಳದ ಸಮುದ್ರದಲ್ಲಿ ಮುಳುಗೇಳುತ್ತಿದ್ದರೆ ಅಸ್ಸಾಂನಲ್ಲಿ ಪ್ರಿಯಾಂಕಾ ಚಹಾದ ಎಲೆಗಳನ್ನು ಕೀಳುತ್ತಾರೆ. ಇದು ಎಲೆ ಕೀಳುವ ಸಮಯವಲ್ಲ ಎಂದು ಅವರಿಗೆ ಗೊತ್ತಿಲ್ಲ. ಅಲ್ಲಿ ಏನಾದರೂ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತೇ? ಎಂದು ಚೌಹಾಣ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರು ಇಲ್ಲಿ ಮೀನುಗಾರಿಕೆ ಸಚಿವಾಲಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಸ್ಸಾಂನಲ್ಲಿ ಅದು ಈಗಾಗಲೇ ಇದೆ. ಅವರ ಟ್ಯೂಬ್ಲೈಟ್ ನಿಧಾನವಾಗಿ ಉರಿಯುತ್ತದೆ. ಯಾವುದೇ ಮಾರ್ಗದರ್ಶ ಇಲ್ಲದ ಪಕ್ಷ ಅಸ್ಸಾಂನ ಅಭಿವೃದ್ಧಿಗಾಗಿ ದುಡಿಯುವುದು ಹೇಗೆ? ಎಂದಿದ್ದಾರೆ ಶಿವರಾಜ್ ಸಿಂಗ್ ಚೌಹಾಣ್.
ನಹರ್ಕಟಿಯಾದಲ್ಲಿ ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಬಿಜೆಪಿ ಅಭ್ಯರ್ಥಿಯಾದಿ ತರಂಗಾ ಗೊಗೊಯಿ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಅಸ್ಸಾಂ ಜಾತೀಯ ಪರಿಷದ್ (AJP) ಅಧ್ಯಕ್ಷ ಲುರಿನ್ ಜ್ಯೋತಿ ಗೊಗೊಯಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಚಿವೆ ಪ್ರಣಿ ಫುಕಾನ್ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಜನರಲ್ಲಿ ಮತಯಾಚಿಸಿದ ಚೌಹಾಣ್, ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಪಟ್ಟಿಯನ್ನು ಓದಿದ್ದಾರೆ. ಸರ್ಬಾನಂದ ಸೊನೊವಾಲ್ ಅವರು 5 ವರ್ಷಗಳಲ್ಲಿ ಮಾಡಿದ ಕೆಲಸದಷ್ಟು 55 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದೆಯೇ? ಎಂದು ಕೇಳಿದ ಚೌಹಾಣ್ ಪ್ರವಾಹದ ನೀರನ್ನು ಕೆರೆ ಮತ್ತು ಕಾಲುವೆಗಳಿಗೆ ಹರಿಸುವ ಮೂಲಕ ಬಿಜೆಪಿ ಸರ್ಕಾರ ಪ್ರವಾಹದ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಭರವಸೆ ನೀಡಿದ್ದಾರೆ.
Published On - 8:30 pm, Mon, 15 March 21