ಅಸ್ಸಾಂ: ಶಾಲಾ ಅಸೆಂಬ್ಲಿಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕಿ; ತನಿಖೆಗೆ ಜಿಲ್ಲಾಧಿಕಾರಿ ಆದೇಶ
ನಿಕಿ ಎಂದು ಗುರುತಿಸಲಾದ ಶಿಕ್ಷಕಿ, ತಾನು ಶಾಲೆಯ ಅಧಿಕಾರಿಗಳ ಆದೇಶವನ್ನು ಅನುಸರಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಘಟನೆಯ ನಂತರ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ನಿರಾಕರಿಸುತ್ತಿದ್ದಾರೆ ಎಂದು ಅವರ ಪೋಷಕರು ತಿಳಿಸಿದ್ದಾರೆ
ಅಸ್ಸಾಂನ (Assam) ಮಜುಲಿ ಜಿಲ್ಲೆಯ (Majuli district) ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಗುರುವಾರ ಬೆಳಿಗ್ಗೆ ಅಸೆಂಬ್ಲಿಯಲ್ಲಿ ಶಿಸ್ತು ಕಲಿಸಲು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಯ ಕುರಿತು ಜಿಲ್ಲೆಯ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಲೆಯ ಮಾರ್ಗಸೂಚಿಗಳ ಪ್ರಕಾರ ಮಕ್ಕಳು ಉದ್ದ ಕೂದಲನ್ನು ಇಟ್ಟುಕೊಳ್ಳುತ್ತಿದ್ದಾರೆ ಎಂದು ಶಾಲೆಯ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಯಿತು. ಈ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿಸಲಾಯಿತು. ಆದರೆ ಏನೂ ಬದಲಾವಣೆ ಆಗಿಲ್ಲ. ಇದು ಕೇವಲ ಶಿಸ್ತು ಕಲಿಸುವ ವಿಧಾನವಾಗಿತ್ತು ಎಂದು ಶಾಲೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಕಾವೇರಿ ಬಿ ಶರ್ಮಾ ಶುಕ್ರವಾರ ಸಂಜೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಿಕ್ಷಕರು ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ. ಕೆಲವು ವರದಿಗಳು ಹೇಳುವಂತೆ ಪೂರ್ತಿ ಕತ್ತರಿಸಲಾಗಿಲ್ಲ ಎಂದು ಕಾವೇರಿ ಅವರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಿಕಿ ಎಂದು ಗುರುತಿಸಲಾದ ಶಿಕ್ಷಕಿ, ತಾನು ಶಾಲೆಯ ಅಧಿಕಾರಿಗಳ ಆದೇಶವನ್ನು ಅನುಸರಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಘಟನೆಯ ನಂತರ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ನಿರಾಕರಿಸುತ್ತಿದ್ದಾರೆ ಎಂದು ಅವರ ಪೋಷಕರು ತಿಳಿಸಿದ್ದಾರೆ. ಗುರುವಾರ ನನ್ನ ಮಗು ಕೂದಲನ್ನು ಮುಂಭಾಗದಲ್ಲಿ ಟ್ರಿಮ್ ಮಾಡಿಕೊಂಡು ಅಳುತ್ತಾ ಮನೆಗೆ ಬಂದಿತ್ತು ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗ ಆ ಮಗು ಶಾಲೆಗೆ ಹೋಗಲು ನಿರಾಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಶಾಲಾ ಅಧಿಕಾರಿಗಳಿಗೆ ಶಿಸ್ತು ವಿಧಿಸುವ ಸ್ವಾತಂತ್ರ್ಯವಿದೆ. ಆದರೆ ಕೆಲವು ಮಿತಿಗಳಿವೆ ಎಂದು ಪೋಷಕರು ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಏಕರೂಪವಾಗಿ ಕಾಣಬೇಕು ಎಂಬುದು ನಿಜ. ಆದರೆ ಅಸೆಂಬ್ಲಿ ಸಮಯದಲ್ಲಿ ಇಡೀ ಶಾಲೆಯ ಮುಂದೆ ಕೂದಲು ಟ್ರಿಮ್ ಮಾಡುವುದು ಅವಮಾನಕರ ಎಂದು ಪೋಷಕರು ಹೇಳಿದ್ದಾರೆ.
ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಇಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಭೇಟಿ
ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಶಿಕ್ಷಕರು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಲು ಯಾವುದೇ ಅವಕಾಶವಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಅಪ್ರಾಪ್ತ ಮಕ್ಕಳೊಂದಿಗೆ ವ್ಯವಹರಿಸಲು ಇತರ ಮಾರ್ಗಗಳಿವೆ. ಆ ದಿನ ನಿಜವಾಗಿ ಏನಾಯಿತು ಎಂಬುದನ್ನು ಅರಿಯಲು ನಾವು ತನಿಖೆ ಮಾಡುತ್ತಿದ್ದೇವೆ ಅಧಿಕಾರಿ ಹೇಳಿದರು.
ಎರಡು ವಾರಗಳ ಹಿಂದೆ ಕ್ಯಾಚಾರ್ ಜಿಲ್ಲೆಯ ಶಾಲೆಯೊಂದು ಕ್ಯಾಂಪಸ್‌ನಲ್ಲಿ ಆಕಸ್ಮಿಕವಾಗಿ ಮಾತೃಭಾಷೆಯಲ್ಲಿ ಮಾತನಾಡಿದ ವಿದ್ಯಾರ್ಥಿಗೆ ₹250 ದಂಡ ವಿಧಿಸಿತ್ತು. ದಂಡ ವಿಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಲು ಅವರು ಬಯಸಿದ್ದರು, ಹಣ ಸಂಗ್ರಹಿಸುವುದು ಅವರ ಉದ್ದೇಶವಲ್ಲ ಎಂದು ಶಾಲೆಯ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Sat, 27 May 23