ಪ್ರಧಾನಿಯನ್ನು ಭೇಟಿಯಾಗಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಸ್ಸಾಂನ ವಾಕ್-ಶ್ರವಣದೋಷ ಇರುವ ಕಲಾವಿದ
ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಂಟಿಂಗ್ ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ ಖುಷಿಯಾಯಿತು.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi)( ಭೇಟಿ ಮಾಡಬೇಕೆಂಬ ಅದಮ್ಯ ಆಸೆ ಇದ್ದ ವಾಕ್-ಶ್ರವಣದೋಷ ಇರುವ ಕಲಾವಿದನ ಕನಸನ್ನು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ನನಸಾಗಿಸಿದ್ದಾರೆ. 28ರ ಹರೆಯದ ಯುವ ಕಲಾವಿದ ಶುಕ್ರವಾರ ಮೋದಿಯವರನ್ನು ಭೇಟಿ ಮಾಡಿ ಅವರಿಗೊಂದು ಉಡುಗೊರೆ ನೀಡಿದ್ದಾರೆ. ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಅಭಿಜಿತ್ ಗೊತಾನಿ ತನ್ನ ಅಮ್ಮನೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು. ಗೊತಾನಿಯ ದೊಡ್ಡ ಕನಸೊಂದು ಸಾಕಾರವಾದ ಕ್ಷಣವಾಗಿತ್ತು ಅದು. ಪ್ರಧಾನಿ ನರೇಂದ್ರ ಮೋದಿಯವರ ಬದುಕಿನ ಪಯಣವನ್ನು ತೋರಿಸುವ ಪೇಟಿಂಗ್ನ್ನು ಗೊತಾನಿ ಮೋದಿಯವರಿಗೆ ನೀಡಿದ್ದಾರೆ. ಈ ಪೇಂಟಿಂಗ್ನಲ್ಲಿ ಪ್ರಧಾನಿ ಮೋದಿ ಮತ್ತು ಅವರ ಅಮ್ಮ, ಪಿಎಂ ಮೋದಿ ಯುಎನ್ ಜಿಎಯಲ್ಲಿ ಮಾತಾನಾಡುತ್ತಿರುವುದು, ಅವರು ಬಾಲಕನಾಗಿದ್ದಾಗಲಿಂದ ಹಿಡಿದು ಪ್ರಧಾನಿಯಾಗುವವರೆಗಿನ ಪಯಣದ ಚಿತ್ರ ಈ ಕಲಾವಿದನ ಕುಂಚದಲ್ಲಿ ಮೂಡಿ ಬಂದಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ಅವನಿಗೆ ತುಂಬಾ ಖುಷಿ ಕೊಟ್ಟಿದೆ. ಅದ್ಭುತ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವನ ಬೆನ್ನು ತಟ್ಟಿದಾಗ ಅವನ ಕಣ್ಣಲ್ಲಿ ಹೊಳಪು ಕಂಡೆ ಎಂದು ಗೋತಾನಿ ಅವರ ಅಮ್ಮ ಹೇಳಿದ್ದಾರೆ.
ನಾನು ಪ್ರಧಾನಿಯವರನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿದ್ದೆ. ಇವತ್ತು ನಾನು ಅವರನ್ನು ಮುಖತಃ ಭೇಟಿಯಾದೆ. ತುಂಬಾ ಖುಷಿಯಾಗಿದೆ. ಅವರು ನನ್ನ ಪೇಟಿಂಗ್ ಮೆಚ್ಚಿ ಅದು ಚಂದವಿದೆ ಎಂದು ಹೊಗಳಿದಾಗ ಖುಷಿಯಾಯಿತು. ಪ್ರಧಾನಿ ನನ್ನ ಬೆನ್ನು ತಟ್ಟಿ ಈ ಕಲಾಕೃತಿ ಚೆನ್ನಾಗಿದೆ ಎಂದರು. ಇವತ್ತು ನನ್ನ ಕನಸು ನನಸಾಗಿದೆ. ಅವರು ತುಂಬಾ ಮೃದು ಹೃದಯದ ಸರಳ ವ್ಯಕ್ತಿ. ನಾನು ಪ್ರಧಾನಿಯವರನ್ನು ಭೇಟಿ ಮಾಡಿದರ ಬಗ್ಗೆ ನನ್ನ ಕುಟುಂಬಕ್ಕೆ ಹೆಮ್ಮೆಯಾಗಿದೆ. ನನ್ನಂತಿರುವ ವ್ಯಕ್ತಿಗಳು ಹಿಂದೇಟು ಹಾಕದೆ ನಮಗೂ ಅದು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಡಬೇಕು ಎಂದು ಸಂಜ್ಞಾಭಾಷೆಯಲ್ಲಿ ಗೊತಾನಿ ಹೇಳಿದ್ದು, ಅದನ್ನು ಅವರ ಅಮ್ಮ ವಿವರಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಇವರು ಸಿಲ್ಚಾರ್ನಿಂದ ಗುವಾಹಟಿಗೆ ಹೋಗಿ ಮುಖ್ಯಮಂತ್ರಿ ಶರ್ಮಾ ಅವರಿಗೆ ಪೇಟಿಂಗ್ ಉಡುಗೊರಯಾಗಿ ನೀಡಿದ್ದರು. ಈ ಭೇಟಿ ವೇಳೆ ಪ್ರಧಾನಿ ಮೋದಿಯವರಿಗೂ ಪೇಟಿಂಗ್ ನೀಡಬೇಕು ಎಂದು ಬಯಸುತ್ತಿರುವುದಾಗಿ ಗೊತಾನಿ ಹೇಳಿದ್ದರು. ತಕ್ಷಣವೇ ಶರ್ಮಾ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಮನವಿ ಮಾಡಿದ್ದರು.
ಅವರು ಒಬ್ಬ ಒಳ್ಳೆಯ ಹುಡುಗ, ತುಂಬಾ ಚೆನ್ನಾಗಿ ಚಿತ್ರ ಬರೆಯುತ್ತಾರೆ. ತನಗೆ ಮೋದಿಯವರನ್ನು ಭೇಟಿ ಮಾಡಬೇಕು ಎಂದು ಅವರು ತಮ್ಮ ಬಯಕೆಯನ್ನು ತಿಳಿಸಿದಾಗ ನಾನು ತಕ್ಷಣವೇ ಪಿಎಂ ಕಚೇರಿಗೆ ಪತ್ರ ಬರೆದು ಭೇಟಿಗಾಗಿ ಅನುಮತಿ ಕೋರಿದೆ ಎಂದು ಅಸ್ಸಾಂ ಸಿಎಂ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
Published On - 3:25 pm, Fri, 22 July 22