ಗುರುಗ್ರಾಮ್‌ನ ಮಸೀದಿ ಮೇಲೆ 200 ಜನರ ಗುಂಪು ದಾಳಿ; ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ ಹಲ್ಲೆ, ಬೆದರಿಕೆ
ಬುಧವಾರ ರಾತ್ರಿ ಭೋರಾ ಕಲನ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ, ಆದರೆ ಗುರುವಾರ ಸಂಜೆಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಗುರುಗ್ರಾಮ್: 200 ಕ್ಕೂ ಹೆಚ್ಚು ಜನರ ಗುಂಪು ಗುರುಗ್ರಾಮ್‌ನ ಹಳ್ಳಿಯೊಂದರಲ್ಲಿ ಮಸೀದಿಯನ್ನು(mosque) ಧ್ವಂಸ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ ಹಲ್ಲೆ ನಡೆದಿದ್ದು, ಗ್ರಾಮದಿಂದ ಹೊರಹಾಕುವುದಾಗಿ ಬೆದರಿಕೆಯನ್ನೂ ಒಡ್ಡಲಾಗಿದೆ. ಬುಧವಾರ ರಾತ್ರಿ ಭೋರಾ ಕಲನ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ, ಆದರೆ ಗುರುವಾರ ಸಂಜೆಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಸುಬೇದಾರ್ ನಜರ್ ಮೊಹಮ್ಮದ್ ನೀಡಿದ ದೂರಿನ ಪ್ರಕಾರ, ಭೋರ ಕಾಳನ್ ಗ್ರಾಮದಲ್ಲಿ ಕೇವಲ ನಾಲ್ಕು ಮುಸ್ಲಿಂ ಕುಟುಂಬಗಳಿವೆ. ರಾಜೇಶ್ ಚೌಹಾಣ್ ಅಲಿಯಾಸ್ ಬಾಬು, ಅನಿಲ್ ಭಡೋರಿಯಾ ಮತ್ತು ಸಂಜಯ್ ವ್ಯಾಸ್ ನೇತೃತ್ವದ ಸುಮಾರು 200 ಜನರನ್ನು ಒಳಗೊಂಡ ಗುಂಪು ಮಸೀದಿಯನ್ನು ಸುತ್ತುವರೆದು ಪ್ರಾರ್ಥನಾ ಮಂದಿರಕ್ಕೆ ಪ್ರವೇಶಿಸಿದಾಗ ಬುಧವಾರ ಬೆಳಿಗ್ಗೆ ಗದ್ದಲ ಪ್ರಾರಂಭವಾಯಿತು. ಅಲ್ಲಿ ನಮಾಜ್ ಮಾಡುತ್ತಿದ್ದವರನ್ನು ಗ್ರಾಮದಿಂದ ಹೊರಹಾಕುವುದಾಗಿ ಆ ಗುಂಪು ಬೆದರಿಕೆ ಹಾಕಿದೆ.
ರಾತ್ರಿ ಮತ್ತೆ ನಾವು ಮಸೀದಿಯ ಪ್ರಾರ್ಥನಾ ಮಂದಿರದ ಒಳಗೆ ಪ್ರಾರ್ಥನೆ ಮಾಡುತ್ತಿದ್ದಾಗ ಗುಂಪು ಬಂದು ನಮಾಜ್ ಮಾಡುವವರ ಮೇಲೆ ಹಲ್ಲೆ ನಡೆಸಿ ಪ್ರಾರ್ಥನಾ ಮಂದಿರಕ್ಕೆ ಬೀಗ ಜಡಿದಿದೆ. ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಸುಬೇದಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಪೊಲೀಸರು ಸ್ಥಳದಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ದಾಳಿ ನಡೆಸಲು ಬಂದ ಗುಂಪಿನಲ್ಲಿರುವರದ್ದಾಗಿರುವ ಸಾಧ್ಯತೆ ಇದೆ ಮೊಹಮ್ಮದ್ ಅವರ ದೂರಿನ ನಂತರ, ರಾಜೇಶ್ ಚೌಹಾಣ್, ಅನಿಲ್ ಭಡೋರಿಯಾ, ಸಂಜಯ್ ವ್ಯಾಸ್ ಮತ್ತು ಇತರ ಹಲವರ ವಿರುದ್ಧ ಗಲಭೆ, ಧಾರ್ಮಿಕ ಕಲಹವನ್ನು ಉಂಟುಮಾಡಲು ಪ್ರಯತ್ನಿಸುವುದು ಮತ್ತು ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಸಭೆಯ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನನ್ವಯ ಎಫ್‌ಐಆರ್ ದಾಖಲಾಗಿದ್ದು, ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿ ಹಿರಿಯ ಪೊಲೀಸ್ ಅಧಿಕಾರಿ ಗಜೇಂದರ್ ಸಿಂಗ್ ಹೇಳಿದ್ದಾರೆ
Published On - 9:10 pm, Thu, 13 October 22