ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕನಿಷ್ಠ 594 ಭಾರತೀಯ ವೈದ್ಯರು ಮೃತಪಟ್ಟಿದ್ದಾರೆ: ಐಎಂಎ ವರದಿ

|

Updated on: Jun 02, 2021 | 10:07 AM

ದೇಶದಲ್ಲಿರುವ ಸರಿಸುಮಾರು 12 ಲಕ್ಷ ವೈದ್ಯರ ಪೈಕಿ ಐಎಂಎ ಸದಸ್ಯತ್ವ ಹೊಂದಿರುವ 3.5ಲಕ್ಷ ವೈದ್ಯರ ಮಾಹಿತಿ ಮಾತ್ರ ಇದರಲ್ಲಿ ಸೇರಿದ್ದು, ಐಎಂಎ ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ ಇನ್ನೂ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕನಿಷ್ಠ 594 ಭಾರತೀಯ ವೈದ್ಯರು ಮೃತಪಟ್ಟಿದ್ದಾರೆ: ಐಎಂಎ ವರದಿ
ಸಾಂಕೇತಿಕ ಚಿತ್ರ
Follow us on

ದೆಹಲಿ: ಕೊವಿಡ್​ 19 ಆರಂಭದಿಂದ ಇಲ್ಲಿಯ ತನಕ ಜಾಗತಿಕ ಮಟ್ಟದಲ್ಲಿ ದೇಶವೊಂದು ತಿಂಗಳೊಳಗೆ ದಾಖಲಿಸಿದ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸೋಂಕಿತರ ಸಾವಿನ ಪ್ರಮಾಣ ಭಾರತದಲ್ಲೇ ಅತ್ಯಧಿಕವಾಗಿದೆ. ಮೇ ತಿಂಗಳಿನ ಅಂಕಿ ಅಂಶಗಳಿಂದ ಈ ವಿಚಾರ ಬಯಲಾಗಿದ್ದು, ಕೊರೊನಾ ಎರಡನೇ ಅಲೆ ಭಾರತವನ್ನು ಎಷ್ಟು ಗಂಭೀರವಾಗಿ ಕಾಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ವರದಿಯ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತೊಂದು ವಿಚಾರವನ್ನು ಬಹಿರಂಗಪಡಿಸಿದ್ದು, ಕೊರೊನಾ ಎರಡನೇ ಅಲೆಗೆ ದೇಶದಲ್ಲಿ ಸುಮಾರು 594ಕ್ಕೂ ಹೆಚ್ಚು ವೈದ್ಯರು ಉಸಿರು ಚೆಲ್ಲಿರುವುದಾಗಿ ತಿಳಿಸಿದೆ.

ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರ ಪೈಕಿ ಕನಿಷ್ಠ 594 ಜನ ಮೃತಪಟ್ಟಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯೂ ಇರಬಹುದು ಎಂದು ಐಎಂಎ ಮಾಹಿತಿ ನೀಡಿದೆ. ಮೃತಪಟ್ಟಿರುವ ವೈದ್ಯರಲ್ಲಿ ಹೆಚ್ಚಿನವರು ಅಂದರೆ ಶೇ.45ರಷ್ಟು ಜನ ದೆಹಲಿ, ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯೊಂದೇ 107 ವೈದ್ಯರ ಸಾವಿಗೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐಎಂಎ ಪ್ರಕಾರ ಕೊರೊನಾ ಆರಂಭ ಕಾಲದಿಂದ ಇಲ್ಲಿಯವರೆಗೆ ಭಾರತದಲ್ಲಿ ಸುಮಾರು 1,300 ವೈದ್ಯರು ಸಾವಿಗೀಡಾಗಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ವೈದ್ಯರ ಮಕ್ಕಳು ಹಾಗೂ ಕುಟುಂಬಸ್ಥರು ಸೋಂಕಿಗೀಡಾಗಿದ್ದಾರೆ. ವೈದ್ಯ ಬಳಗದ ಸೇವೆಯನ್ನು ದೇಶ ಸದಾ ಸ್ಮರಿಸಲಿದ್ದು, ಈ ತ್ಯಾಗ ಇತಿಹಾಸದ ಪುಟದಲ್ಲಿ ನಮೂದಾಗಲಿದೆ ಎಂದು ಐಎಂಎ ಭಾವುಕವಾಗಿ ನುಡಿದಿದೆ.

ಐಎಂಎ ಬಿಡುಗಡೆಗೊಳಿಸಿದ ಅಂಕಿ ಅಂಶ

ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಮಂದಿ ವೈದ್ಯರು ಕೊರೊನಾ ಎರಡನೇ ಅಲೆ ವೇಳೆ ಮೃತರಾಗಿದ್ದಾರೆ ಎಂದು ತಿಳಿಸುವ ಪಟ್ಟಿಯನ್ನು ಐಎಂಎ ಬಹಿರಂಗಪಡಿಸಿದ್ದು, ಅದರಲ್ಲಿ ಒಟ್ಟು 594 ವೈದ್ಯರು ಸಾವಿಗೀಡಾಗಿರುವುದಾಗಿ ಉಲ್ಲೇಖಿಸಲಾಗಿದೆ. ದೆಹಲಿ, ಬಿಹಾರ ಹಾಗೂ ಉತ್ತರಪ್ರದೇಶ ರಾಜ್ಯಗಳ ನಂತರ ರಾಜಸ್ಥಾನ, ಜಾರ್ಖಂಡ್​, ಆಂಧ್ರಪ್ರದೇಶದಲ್ಲಿಯೂ ವೈದ್ಯರು ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ.

ದೇಶದಲ್ಲಿರುವ ಸರಿಸುಮಾರು 12 ಲಕ್ಷ ವೈದ್ಯರ ಪೈಕಿ ಐಎಂಎ ಸದಸ್ಯತ್ವ ಹೊಂದಿರುವ 3.5ಲಕ್ಷ ವೈದ್ಯರ ಮಾಹಿತಿ ಮಾತ್ರ ಇದರಲ್ಲಿ ಸೇರಿದ್ದು, ಐಎಂಎ ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ ಇನ್ನೂ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ. ಐಎಂಎ ಬಿಡುಗಡೆಗೊಳಿಸಿರುವ ಪಟ್ಟಿ ತಿಳಿಸಿರುವಂತೆ ಕರ್ನಾಟಕದಲ್ಲಿ 8 ಮಂದಿ ವೈದ್ಯರು ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮೃತರಾಗಿದ್ದಾರೆ.

ಇದನ್ನೂ ಓದಿ:
ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ 

ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ

Published On - 10:03 am, Wed, 2 June 21