ಪೊಲೀಸ್ ಸಶಸ್ತ್ರ ಮಸೂದೆ ಮಂಡನೆ ವಿರೋಧಿಸಿ ಬಿಹಾರ ವಿಧಾನಸಭೆಯಲ್ಲಿ ಗದ್ದಲ; ಪೊಲೀಸರ ಲಾಠಿ ಪ್ರಹಾರ ಖಂಡಿಸಿದ ಅಖಿಲೇಶ್ ಯಾದವ್

ಆರ್​ಜೆಡಿ ಶಾಸಕರು ಮೂರುಗಂಟೆಗಳ ಕಾಲ ಸಭಾಧ್ಯಕ್ಷರಿಗೆ ಮುತ್ತಿಗೆ ಹಾಕಿ ಕಲಾಪಕ್ಕೆ ಅಡ್ಡಿಪಡಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ವಿಧಾನಸಭೆಯೊಳಗೆ ಪ್ರವೇಶಿಸಿದ ಪೊಲೀಸರು ವಿಪಕ್ಷದ ಶಾಸಕರನ್ನು ಬಲವಂತವಾಗಿ ಹಿಡಿದು ಹೊರಹಾಕಿದ್ದಾರೆ.

ಪೊಲೀಸ್ ಸಶಸ್ತ್ರ ಮಸೂದೆ ಮಂಡನೆ ವಿರೋಧಿಸಿ ಬಿಹಾರ ವಿಧಾನಸಭೆಯಲ್ಲಿ ಗದ್ದಲ; ಪೊಲೀಸರ ಲಾಠಿ ಪ್ರಹಾರ ಖಂಡಿಸಿದ ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್

Updated on: Mar 24, 2021 | 2:51 PM

ಲಕ್ನೊ: ವಿಶೇಷ ಪೊಲೀಸ್ ಸಶಸ್ತ್ರ ಮಸೂದೆ ಮಂಡನೆ ವೇಳೆ ಬಿಹಾರ ವಿಧಾನಸಭೆಯಲ್ಲಿ ನಡೆದ ಗದ್ದಲ, ತದನಂತರ ಪೊಲೀಸರಿಂದ ನಡೆದ ಲಾಠಿ ಪ್ರಹಾರವನ್ನು ಖಂಡಿಸಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಇದು ಹಿಂಸಾತ್ಮಕ ಕೃತ್ಯ ಎಂದು ಹೇಳಿದ್ದಾರೆ.  ಈ ಬಗ್ಗೆ ಬುಧವಾರ ಟ್ವೀಟ್ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಬಿಹಾರ ವಿಧಾನಸಭೆಯಲ್ಲಿ ಶಾಸಕರ ಮೇಲೆ ಪೊಲೀಸರ ಸಶಸ್ತ್ರ ಪಡೆ ದಾಳಿ ನಡೆಸಿದ್ದು ಅಪರಾಧ ಕೃತ್ಯ. ರಸ್ತೆಯಲ್ಲಿರುವ ನಿರುದ್ಯೋಗಿ ಯುವಕರ ಮೇಲೆ ನಡೆಯುವ ದಾಳಿ ನೋಡಿದರೆ, ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ. ಇದು ಬಿಹಾರದ ಪ್ರಜಾಪ್ರಭುತ್ವದ ಮೇಲೆ ನಡೆದ ಹಿಂಸಾತ್ಮಕ ದಾಳಿ ಎಂದಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿ ನಡೆದದ್ದೇನು?
ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಮಸೂದೆ-2021 ಅಂಗೀಕಾರಕ್ಕೆ ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷ ಮೈತ್ರಿಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಭಾಧ್ಯಕ್ಷರ ಕೊಠಡಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಶಾಸಕರನ್ನು ಮಾರ್ಷಲ್ಸ್ ಹೊರದಬ್ಬಿದ್ದಾರೆ. ಸದನದ ಹೊರಗೆ ಮತ್ತು ಒಳಗೆ ನಡೆದ ಕೋಲಾಹಲದ ನಡುವೆಯೇ  ಮಂಗಳವಾರ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು,  ವಿಧಾನ ಪರಿಷತ್​ ನಲ್ಲಿ ಮಂಡನೆಯಾಗಿದೆ.  ಬಿಹಾರ ವಿಧಾನಸಭೆಯಲ್ಲಿ ನಡೆಯುವ ಬಜೆಟ್ ಅಧಿವೇಶನಕ್ಕೆ ತಡೆಯೊಡ್ಡಬೇಕು ಎಂದು ಐದು ಪಕ್ಷಗಳ ಮೈತ್ರಿಕೂಟ ನಾಯಕರಿಗೆ ನಿರ್ದೇಶಿಸಿತ್ತು ಎಂದು ಹೆಸರು ಹೇಳಲಿಚ್ಛಿಸದ, ಮೈತ್ರಿಕೂಟದ ಸದಸ್ಯರೊಬ್ಬರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಆರ್​ಜೆಡಿ ಶಾಸಕರು ಮೂರುಗಂಟೆಗಳ ಕಾಲ ಸಭಾಧ್ಯಕ್ಷರಿಗೆ ಮುತ್ತಿಗೆ ಹಾಕಿ ಕಲಾಪಕ್ಕೆ ಅಡ್ಡಿಪಡಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ವಿಧಾನಸಭೆಯೊಳಗೆ ಪ್ರವೇಶಿಸಿದ ಪೊಲೀಸರು ವಿಪಕ್ಷದ ಶಾಸಕರನ್ನು ಬಲವಂತವಾಗಿ ಹಿಡಿದು ಹೊರಹಾಕಿದ್ದಾರೆ. ಪೊಲೀಸರು ಮತ್ತು ಶಾಸಕರ ನಡುವೆ ನಡೆದ ಜಟಾಪಟಿಯಲ್ಲಿ ಆರ್​ಜೆಡಿ ಶಾಸಕ ಸತೀಶ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಪೊಲೀಸರು ಥಳಿಸಿದ್ದಾರೆ ಎಂದು ಶಾಸಕ ಸತ್ಯೇಂದ್ರ ಕುಮಾರ್ ಆರೋಪಿಸಿದ್ದು, ನಮ್ಮನ್ನು ಹಿಡಿದು ಎಳೆದಾಡಿದ್ದಾರೆ ಎಂದು ಕೆಲವು ಶಾಸಕಿಯರು ದೂರಿದ್ದಾರೆ. ಆರ್​ಜೆಡಿ ಶಾಸಕಿ ಕಿರಣ್ ದೇವಿ, ಕಾಂಗ್ರೆಸ್ ಶಾಸಕಿ ಪ್ರತಿಮಾ ಕುಮಾರಿ, ಆರ್ ಜೆಡಿ ಶಾಸಕಿ ಅನಿತಾ ದೇವಿ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆರ್ ಜೆಡಿ ಶಾಸಕರನ್ನು ಸದನದಿಂದ ಹೊರದಬ್ಬುತ್ತಿರುವ ವಿಡಿಯೊ ಮತ್ತು ಫೊಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


ಪೊಲೀಸರ ಕ್ರಮದ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಶ್ನಿಸಿದ ವಿಪಕ್ಷ ನಾಯಕ ತೇಜಸ್ವಿ ಯಾದವ್, ಸದನದೊಳಿಗಿದ್ದ ಶಾಸಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಿರುದ್ಯೋಗಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಮೂರನೇ ದರ್ಜೆಯ ಪಕ್ಷದ ಮೂರನೇ ದರ್ಜೆಯ ನಾಯಕರಾದ ಮೇಲೆ ನಿತೀಶ್ ಕುಮಾರ್ ಅವರಿಗೆ ಬುದ್ಧಿಭ್ರಮಣೆ ಆಗಿದೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ, ಇವತ್ತು ಸದನದಲ್ಲಿ ಕಪ್ಪು ನಿಯಮವೊಂದನ್ನು ಮಂಡನೆ ಮಾಡಲಾಗಿದೆ. ಪ್ರಜಾಪ್ರಭುತ್ವ ದೇಗುಲದೊಳಗೆ ಇದೇ ಮೊದಲ ಬಾರಿ ಪೊಲೀಸರು ನುಗ್ಗಿದ್ದಾರೆ. ನಮ್ಮ ಶಾಸಕರ ಮೇಲೆ ಹಲ್ಲೆ ನಡೆದಿದೆ. ಶಾಸಕಿಯರನ್ನು ಎಳೆದಾಡಲಾಗಿದೆ. ಇದೆಲ್ಲವೂ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  ಬಿಹಾರದಲ್ಲಿ ಕೊರೊನಾ ಲಸಿಕೆ ಉಚಿತ : ಚುನಾವಣಾ ಭರವಸೆ ಉಳಿಸಿಕೊಂಡ ನಿತೀಶ್ ಸರ್ಕಾರ