ಡಿ.15ರೊಳಗೆ ಸಿದ್ಧವಾಗಲಿದೆ ಅಯೋಧ್ಯೆ ವಿಮಾನ ನಿಲ್ದಾಣ, ರಾಮಮಂದಿರಕ್ಕೆ ಮುನ್ನ ಉದ್ಘಾಟನೆ
ಅಯೋಧ್ಯೆಯಲ್ಲಿನ ವಿಮಾನ ನಿಲ್ದಾಣವನ್ನು ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಡಿಸೆಂಬರ್ 15ರೊಳಗೆ ವಿಮಾನ ನಿಲ್ದಾಣದ ಕಾಮಕಾರಿ ಪೂರ್ಣಗೊಳ್ಳಲಿದ್ದು , ರಾಮಮಂದಿರ ಉದ್ಘಾಟನೆಗೆ ಮುನ್ನ ಇದು ಕಾರ್ಯಪ್ರವೃತ್ತವಾಗಲಿದೆ.

ದೆಹಲಿ ಡಿಸೆಂಬರ್ 02: ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ (Ram Temple) ಉದ್ಘಾಟನೆಗೆ ಒಂದು ತಿಂಗಳ ಮುಂಚೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಶನಿವಾರ ನಗರದಲ್ಲಿ ಮೊದಲ ಹಂತದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿಸೆಂಬರ್ 15 ರೊಳಗೆ ಸಿದ್ಧಗೊಳಿಸಲಾಗುವುದು ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣವನ್ನು ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಇಲ್ಲಿ ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ವಿಮಾನಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿಕೆ ಸಿಂಗ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ, ಪ್ರಧಾನಿ ಮೋದಿಯವರ ದೂರದೃಷ್ಟಿಯೊಂದಿಗೆ ಅಯೋಧ್ಯೆಯು “ನವ ಭಾರತದ ದ್ಯೋತಕ” ವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.
#WATCH | Uttar Pradesh: Construction work underway of Maryada Purushottam Shri Ram International Airport in Ayodhya. pic.twitter.com/OEYJAvrL4p
— ANI UP/Uttarakhand (@ANINewsUP) December 1, 2023
ಪ್ರಮುಖ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ ನಂತರ, ಯೋಗಿ ಆದಿತ್ಯನಾಥ್ ಅವರು, “ಆರಂಭದಲ್ಲಿ ಅಯೋಧ್ಯೆಯು 178 ಎಕರೆಗಳಷ್ಟು ವಿಶಾಲವಾದ ವಿಮಾನ ನಿಲ್ದಾಣವನ್ನು ಹೊಂದಿತ್ತು, ಆದರೆ ಈಗ ಅದನ್ನು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಗುತ್ತಿದೆ” ಎಂದು ಹೇಳಿದರು.
ಈ ಯೋಜನೆಗೆ ರಾಜ್ಯ ಸರ್ಕಾರ 821 ಎಕರೆ ಭೂಮಿ ನೀಡಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉಸ್ತುವಾರಿಯಲ್ಲಿ ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. ಇದು, ಅಯೋಧ್ಯೆಯ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಜೊತೆಗೆ ನಗರದ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ತನ್ನ ಸರ್ಕಾರದ ಬದ್ಧತೆಯ ಭಾಗವಾಗಿದೆ ಎಂದಿದ್ದಾರೆ ಅವರು.
ವಿಮಾನ ನಿಲ್ದಾಣದಲ್ಲಿ ಅಯೋಧ್ಯೆಯ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಸಿಂಧಿಯಾ ಹೇಳಿದರು. ಮೊದಲ ಹಂತದಲ್ಲಿ 65,000 ಚದರ ಅಡಿ ಟರ್ಮಿನಲ್ ನಿರ್ಮಾಣ ಹಂತದಲ್ಲಿದ್ದು, ಗಂಟೆಗೆ 2-3 ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ನಂತಹ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ 2,200-ಮೀಟರ್ ರನ್‌ವೇಯ ಕೆಲಸವೂ ನಡೆಯುತ್ತಿದೆ.
ಇದನ್ನೂ ಓದಿ:ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ; 6,000 ಮಂದಿಗೆ ಆಮಂತ್ರಣ
ಎರಡನೇ ಹಂತದಲ್ಲಿ ರನ್‌ವೇಯ ಉದ್ದವನ್ನು 3,700 ಮೀಟರ್‌ಗೆ ವಿಸ್ತರಿಸಲಾಗುವುದು, ಬೋಯಿಂಗ್ 787 ಡ್ರೀಮ್‌ಲೈನರ್ ಮತ್ತು ಬೋಯಿಂಗ್ 777 ನಂತಹ ವಿಶಾಲವಾದ ವಿಮಾನಗಳು ನೇರವಾಗಿ ಅಯೋಧ್ಯೆಯಲ್ಲಿ ಇಳಿಯಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ಹೇಳಿದರು. ಇಲ್ಲಿನ ಟರ್ಮಿನಲ್‌ನ ವಿಸ್ತೀರ್ಣ 5 ಲಕ್ಷ ಚದರ ಅಡಿ ಇರಲಿದೆ.
ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



