ಆಯುಷ್ ಕ್ಷೇತ್ರದ ಮೇಲೆ ಮನ್ ಕೀ ಬಾತ್ ಪರಿಣಾಮ, ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸರ್ಕಾರ; ಏನಿದರ ವಿಶೇಷ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ನಿಂದಾಗಿ ಆಯುಷ್ ಕ್ಷೇತ್ರದ ಮೇಲೆ ಆಗಿರುವ ಪರಿಣಾಮಗಳಿಗೆ ಸಂಬಂಧಿಸಿ ಆಯುರ್ವೇದ ವಿಜ್ಞಾನಗಳ ಕೇಂದ್ರ ಸಂಶೋಧನಾ ಮಂಡಳಿಯು ಜರ್ನಲ್ ಆಫ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ನ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ನಿಂದಾಗಿ (Mann ki Baat) ಆಯುಷ್ ಕ್ಷೇತ್ರದ ಮೇಲೆ ಆಗಿರುವ ಪರಿಣಾಮಗಳಿಗೆ ಸಂಬಂಧಿಸಿ ಆಯುರ್ವೇದ ವಿಜ್ಞಾನಗಳ ಕೇಂದ್ರ ಸಂಶೋಧನಾ ಮಂಡಳಿಯು (CCRAS) ಜರ್ನಲ್ ಆಫ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ನ (JRAS) ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ಆಯುಷ್, ಬಂದರು, ಹಡಗು, ಜಲಸಾರಿಗೆ ಸಚಿವ ಸರ್ಬಾನಂದ ಸೊನೊವಾಲ್ ಅವರು ಜರ್ನಲ್ನ ವಿಶೇಷ ಸಂಚಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮವು 99ನೇ ಸಂಚಿಕೆಯನ್ನು ಮುಗಿಸಿದ್ದು, ಇದೀಗ 100ನೇ ಸಂಚಿಕೆಗೆ ಸಿದ್ಧತೆ ನಡೆಸಿದೆ. ಈ ಹೊತ್ತಿನಲ್ಲಿಯೇ ಆಯುಷ್ ಸಚಿವಾಲಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದೆ.
ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ನಲ್ಲಿ ಆಡಿರುವ ಮಾತುಗಳು ಆಯುಷ್ ಮೇಲಿನ ವಿಶ್ವಾಸ ವೃದ್ಧಿಗೆ ಕಾರಣವಾಗಿದೆ. ನವೀನ ಮತ್ತು ವಿಶಿಷ್ಟವಾದ ಸಂವಾದಾತ್ಮಕ ಪ್ರಸ್ತುತಿ ಶೈಲಿಯೊಂದಿಗೆ, ರೇಡಿಯೋ ಕಾರ್ಯಕ್ರಮವು ತನ್ನದೇ ಆದ ಛಾಪು ಮೂಡಿಸಿದ್ದರ ಜತೆಗೆ ಸಮುದಾಯಗಳಲ್ಲಿ ಜನಪ್ರಿಯತೆ ಗಳಿಸಿದೆ. ಆಯುಷ್ ಕ್ಷೇತ್ರದ ಬಗ್ಗೆ ಪ್ರಧಾನಿ ಅವರು ಮಾತನಾಡಿರುವ ಸ್ಫೂರ್ತಿದಾಯಕ ವಿಚಾರಗಳನ್ನು ಒಳಗೊಂಡಂತೆ ಈ ವಿಶೇಷ ಸಂಚಿಕೆ ಹೊರತರಲಾಗಿದೆ ಎಂದು ಸರ್ಬಾನಂದ ಸೊನೊವಾಲ್ ಹೇಳಿದರು.
ಮನ್ ಕೀ ಬಾತ್ನ 37 ಆವೃತ್ತಿಗಳಲ್ಲಿ ಆಯುಷ್ ಬಗ್ಗೆ ಪ್ರಧಾನಿಯವರು ಪ್ರಸ್ತಾಪಿಸಿದ್ದಾರೆ. ಆರೋಗ್ಯಕರ ಜೀವನಶೈಲಿ, ಯೋಗಾಭ್ಯಾಸ ಮತ್ತು ಸಮರ್ಪಕವಾದ ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರಧಾನಿ ಜನರಲ್ಲಿ ಮನವಿ ಮಾಡಿದ್ದಾರೆ. ಆಯುಷ್ ಕ್ಷೇತ್ರದ ಉತ್ತೇಜನಕ್ಕೆ ಪ್ರಧಾನಿಯವರು ಮಾಡಿರುವ ಪ್ರಯತ್ನಗಳಿಂದಾಗಿ ಭಾರತದ ಪಾರಂಪರಿಕ ವೈದ್ಯ ಪದ್ಧತಿಯು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಮನ್ನಣೆ ಪಡೆಯುವಂತಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಮನ್ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವ ಕುರಿತ ಪುಸ್ತಕ ಹೊರಬರಲಿದೆ
ಕಳೆದ 9 ವರ್ಷಗಳಲ್ಲಿ ಆಯುಷ್ ವ್ಯವಸ್ಥೆಯ ಸುಧಾರಣೆಗಾಗಿ ಮೋದಿ ಪ್ರಸ್ತಾಪಿಸಿದ್ದ ವಿಷಯಗಳು ವಿಶೇಷ ಸಂಚಿಕೆಯಲ್ಲಿ ಇರಲಿದೆ. ಆಯುಷ್ ಕ್ಷೇತ್ರದ ಮೇಲೆ ಮನ್ ಕೀ ಬಾತ್ನ ಪರಿಣಾಮ, ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಯುಷ್ ಕ್ಷೇತ್ರ ಮೂಲಭೂತ ಅಂಶವಾಗಿ ಹೊರಹೊಮ್ಮುತ್ತಿರುವುದಕ್ಕೆ ಸಂಬಂಧಿಸಿದ ಮುಖ್ಯಾಂಶಗಳು ಸಂಚಿಕೆಯಲ್ಲಿ ಅಡಕವಾಗಿದೆ ಎಂದು ಸಚಿವರು ಮಾಹಿತಿ ನೀಡಿದೆ.
ನೀತಿ, ಸಾರ್ವಜನಿಕ ಆರೋಗ್ಯ, ವಿಜ್ಞಾನ, ಆರೋಗ್ಯ ಶಿಕ್ಷಣ ಮತ್ತು ಜಾಗೃತಿ, ಯೋಗ, ಕೊರೊನಾ ವಿರುದ್ಧ ಹೋರಟ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿ ಖ್ಯಾತ ತಜ್ಞರು ಬರೆದ 24 ಲೇಖನಗಳು ಸಂಚಿಕೆಯಲ್ಲಿವೆ ಎಂದೂ ಅವರು ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮವು ಸಮಾಜದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂದು ವಿಶ್ಲೇಷಿಸಿರುವ ಪ್ರಸಾರ್ ಭಾರತಿ ಮಾಜಿ ಸಿಇಒ ಶಶಿ ಶೇಖರ್ ಬರೆದಿರುವ ‘ಕಲೆಕ್ಟೀವ್ ಸ್ಪಿರಿಟ್, ಕಾಂಕ್ರೀಟ್ ಆಕ್ಷನ್’ಎಂಬ ಪುಸ್ತಕ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ