G20 Youth 20 in Leh: ಲೇಹ್ನಲ್ಲಿ ಯೂತ್20 ಪೂರ್ವಭಾವಿ ಸಭೆ; ಯುವಕರು ಗುರುತಿಸಿದ ಐದು ಅಂಶಗಳಿವು
ಜಿ20 ಸದಸ್ಯರಾಷ್ಟ್ರಗಳ ಅಧಿಕೃತ ಗುಂಪಾಗಿರುವ ಯೂತ್20 (Youth 20) ಶೃಂಗಸಭೆಯ ಪೂರ್ವಭಾವಿ ಸಭೆ ಲೇಹ್ನಲ್ಲಿ ಬುಧವಾರದಿಂದ ಶನಿವಾರದ ವರೆಗೆ ಕಾಲ ನಡೆಯಿತು. ಈ ಸಭೆಯಲ್ಲಿ ಯೂತ್20 ಗುರುತಿಸಿದ ಆದ್ಯತೆಯ ಐದು ವಿಚಾರಗಳನ್ನು ಪ್ರಸ್ತಾಪಿಸಲಾಯಿತು.
ಲೇಹ್: ಜಿ20 ಸದಸ್ಯರಾಷ್ಟ್ರಗಳ ಅಧಿಕೃತ ಗುಂಪಾಗಿರುವ ಯೂತ್20 (Youth 20) ಶೃಂಗಸಭೆಯ ಪೂರ್ವಭಾವಿ ಸಭೆ ಲೇಹ್ನಲ್ಲಿ ಬುಧವಾರದಿಂದ ಶನಿವಾರದ ವರೆಗೆ ಕಾಲ ನಡೆಯಿತು. ಯುವಜನರು ತಮ್ಮ ದೃಷ್ಟಿಕೋನಗಳು ಮತ್ತು ಯೋಜನೆಗಳನ್ನು ಜಿ20 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಲು ಅನುವು ಮಾಡಿಕೊಡುವ ಗುರಿಯೊಂದಿಗೆ ಈ ಸಭೆ ನಡೆಯಿತು. ಇದು ಆಂತರಿಕ ಚರ್ಚಾ ವೇದಿಕೆಯಾಗಿದ್ದು, ಜಿ20 ಕಾರ್ಯಸೂಚಿಗೆ ಸಂಬಂಧಿಸಿದ ಒಪ್ಪಿತ ಶಿಫಾರಸುಗಳ ಜಂಟಿ ಸಂವಹನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಈ ಸಭೆಯಲ್ಲಿ ಯೂತ್20 ಗುರುತಿಸಿದ ಆದ್ಯತೆಯ ಐದು ವಿಚಾರಗಳನ್ನು ಪ್ರಸ್ತಾಪಿಸಲಾಯಿತು.
ಯೂತ್20 ಗುರುತಿಸಿದ ಆದ್ಯತೆಯ ಐದು ವಿಚಾರಗಳು ಹೀಗಿವೆ;
- ಭವಿಷ್ಯದ ಕೆಲಸ
- ಹವಾಮಾನ ಬದಲಾವಣೆ
- ಶಾಂತಿ ಸ್ಥಾಪನೆ ಮತ್ತು ಸಮನ್ವಯತೆ
- ಆರೋಗ್ಯ, ಯೋಗಕ್ಷೇಮ ಹಾಗೂ ಕ್ರೀಡೆ
- ಆಡಳಿತದಲ್ಲಿ ಯುವಕರು
ಜಿ20 ಸದಸ್ಯ, ಅತಿಥಿ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವಿದೇಶಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
ಯೂತ್20 ಶೃಂಗಸಭೆಯ ಪೂರ್ವಭಾವಿ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಯಿತು. ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಬಿಡಿ ಮಿಶ್ರಾ ಸಭೆಯಲ್ಲಿ ಸೇರಿದ್ದ ಗಣ್ಯರ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಭಾಗವಹಿಸಿರುವ ಪ್ರತಿನಿಧಿಗಳು ಸ್ಥಳೀಯ ಮಠಗಳು ಮತ್ತು ಶಾಂತಿ ಸ್ತೂಪಗಳಿಗೆ ಭೇಟಿ ನೀಡಿ ಲೇಹ್ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸದ ಮಾಹಿತಿ ಪಡೆದುಕೊಂಡರು. ಶ್ರೀಮಂತ ಸಂಸ್ಕೃತಿ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಅಂತಿಮ ದಿನವಾದ ಶನಿವಾರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂವಾದ ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ.
2022ರ ಡಿಸೆಂಬರ್ನಲ್ಲಿ ಭಾರತವು ಜಿ20 ಸದಸ್ಯರ ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಆ ನಂತರ ಈವರೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಿದೆ. 2023ನೇ ಸಾಲಿನ ಜಿ20 ಅಧ್ಯಕ್ಷತೆ ವಹಿಸಿರುವ ಭಾರತ 20 ವಾರಗಳಲ್ಲಿ 100 ಸಭೆಗಳನ್ನು ಆಯೋಜಿಸಿದೆ. 26 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಭೆ ನಡೆದಿದ್ದು, ಈ ಪೈಕಿ 2 ಶೆರ್ಪಾ ಸಭೆ, 2 ಸಚಿವರ ಸಭೆ, 34ವರ್ಕಿಂಗ್ ಗ್ರೂಪ್ ಸಭೆಗಳನ್ನು ನಡೆಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Fri, 28 April 23