ನವದೆಹಲಿ: ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್ನಲ್ಲಿ ಪ್ರತ್ಯೇಕ ಸೀಟ್ (baby berth) ಕಲ್ಪಿಸಿಕೊಡುವ ಯೋಜನೆ.
@RailMinIndiaIndian ರೈಲ್ವೆ ಇಲಾಖೆಯು ಶಿಶುಗಳಿಗಾಗಿ ತನ್ನ ರೈಲುಗಳಲ್ಲಿ ಪ್ರತ್ಯೇಕ ಸೀಟ್ ವ್ಯವಸ್ಥೆ ಕಲ್ಪಿಸಲಿದೆ. ಆದರೆ ಇದು ಸದ್ಯಕ್ಕೆ ಉತ್ತರ ರೈಲ್ವೆ ವಿಭಾಗದಲ್ಲಿ (Northern Railways) ಪ್ರಯೋಗಾರ್ಥವಾಗಿ ಸಂಚರಿಸಲಿದೆ. ಲಖ್ನೋ – ನವದೆಹಲಿ ಮೈಲ್ (Lucknow- New Delhi Mail) ಟ್ರೈನ್ನಲ್ಲಿ ಮಾತ್ರ ಈ ವ್ಯವಸ್ಥೆ ಲಭಿಸಲಿದೆ. ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟ್ ಪಕ್ಕದಲ್ಲಿಯೇ (ಕೆಳಗಿನ ಸೀಟ್) ಬೇಬಿ ಬರ್ತ್ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯಾವುದೇ ತೊಂದರೆ ಪಡದೆ ತಾಯಂದಿರು ತಮ್ಮ ಮಕ್ಕಳ ಜೊತೆ ರೈಲ್ವೆಯಲ್ಲಿ ಆರಾಮವಾಗಿ ಸಂಚರಿಸಬಹುದಾಗಿದೆ. ಇದು ಎಸಿ ಕೋಚ್ಗಳಲ್ಲಿ ಮಾತ್ರ ಲಭ್ಯವಿದ್ದು, ಎರಡು ಬರ್ಥ್ಗಳ ಮಧ್ಯೆ ಶಿಶುವಿನ ಬರ್ತ್ ಅಳವಡಿಸಲಾಗಿದೆ. ಗಮನಾರ್ಹವೆಂದರೆ ಭಾರತೀಯ ರೈಲ್ವೆ ಮಕ್ಕಳ ಈ ವಿಶೇಷ ಸೌಲಭ್ಯಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಸೌಲಭ್ಯಕ್ಕೆ ಜನರಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ, ಈ ವ್ಯವಸ್ಥೆಯನ್ನು ಇತರೆ ವಿಭಾಗಗಳ ಟ್ರೈನ್ನಲ್ಲಿಯೂ ಕೊಡಮಾಡಲಾಗುವುದು ಎಂದು ಉತ್ತರ ವಿಭಾಗದ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:59 pm, Wed, 11 May 22