ದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಬ್ಯಾರಿಕೇಡ್ ಹಾಕಿದ್ದು ದೆಹಲಿ ಪೊಲೀಸರು, ರೈತರಲ್ಲ ಎಂದು ರೈತ ಸಂಘಟನೆ ಬಿಕೆಯು ಪ್ರತಿಕ್ರಿಯಿಸಿದೆ. 2020 ನವೆಂಬರ್ ನಿಂದ ಬಿಕೆಯು (BKU) ಬೆಂಬಲಿಗರು ಮತ್ತು ಪದಾಧಿಕಾರಿಗಳು ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಕೃಷಿ ಕಾನೂನು ವಿರೋಧಿಸಿ ದೆಹಲಿ-ಉತ್ತರ ಪ್ರದೇಶ ಗಡಿಭಾಗವಾದ ಗಾಜೀಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಭಾವಿ ರೈತರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (SKM) ನ ಭಾಗವಾಗಿರುವ ಭಾರತೀಯ ಕಿಸಾನ್ ಯೂನಿಯನ್ ಗಾಜಿಪುರ್ ಗಡಿಯಲ್ಲಿ ರಸ್ತೆ ತೆರವು ಮಾಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಕಡೆಗಣಿಸಿದೆ.
ರೈತರಿಗೆ ಪ್ರತಿಭಟಿಸುವ ಹಕ್ಕಿದೆ ಆದರೆ ಅವರು ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲಿ ಆಂದೋಲನ ಮಾಡುವ ಹಕ್ಕನ್ನು ನೀವು ಹೊಂದಿರಬಹುದು ಆದರೆ ರಸ್ತೆಗಳನ್ನು ಈ ರೀತಿ ನಿರ್ಬಂಧಿಸಬಾರದು. ಜನರಿಗೆ ರಸ್ತೆಗಳಲ್ಲಿ ಹೋಗುವ ಹಕ್ಕಿದೆ ಆದರೆ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರ ನ್ಯಾಯಪೀಠ ಹೇಳಿತ್ತು.
ನೋಯ್ಡಾ ನಿವಾಸಿ ಮೊನಿಕಾ ಅಗರ್‌ವಾಲ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಆಲಿಸುವಾಗ ಪೀಠವು ಈ ರೀತಿ ಹೇಳಿದೆ. ಪ್ರತಿಭಟನಾ ನಿರತ ರೈತರು ರಸ್ತೆಗಳನ್ನು ನಿರ್ಬಂಧಿಸಿದ್ದರಿಂದ ದೈನಂದಿನ ಪ್ರಯಾಣದಲ್ಲಿ ವಿಳಂಬವಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಮೂರು ವಾರಗಳಲ್ಲಿ ಪಿಐಎಲ್‌ಗೆ ಪ್ರತಿಕ್ರಿಯೆ ನೀಡುವಂತೆ ರೈತ ಸಂಘಗಳಿಗೆ ನ್ಯಾಯಾಲಯ ಸೂಚಿಸಿದೆ.
ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ನವೆಂಬರ್ 2020 ರಿಂದ ನೂರಾರು ರೈತರು ದಿಲ್ಲಿಯ ಗಡಿಗಳಲ್ಲಿ ಬೀಡುಬಿಟ್ಟಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಉಳಿಸಿಕೊಳ್ಳಲು ಕಾನೂನು ಖಾತರಿ ನೀಡಬೇಕೆಂದು ಇವರು ಒತ್ತಾಯಿಸಿದರು.
ಕೇಂದ್ರ ಮತ್ತು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ನಡುವೆ ಪ್ರತಿಭಟನೆ ಆರಂಭವಾದಾಗಿನಿಂದ ದೆಹಲಿಯನ್ನು ಹರ್ಯಾಣ ಮತ್ತು ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಅಡಚಣೆಯುಂಟಾಗಿದೆ.
ನಾವು ಸುಪ್ರೀಂಕೋರ್ಟ್ ನಿರ್ದೇಶನವನ್ನು ಗೌರವಿಸುತ್ತೇವೆ. ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದ್ದು ದೆಹಲಿ ಪೊಲೀಸರು ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಸಾರ್ವಜನಿಕ ಕಲ್ಯಾಣಕ್ಕಾಗಿ ದೆಹಲಿ ಪೊಲೀಸರು ಈಗ ಅವರನ್ನು ತೆಗೆದುಹಾಕಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಬಿಕೆಯು ವಕ್ತಾರ ಸೌರಭ್ ಉಪಾಧ್ಯಾಯ್ ಹೇಳಿದ್ದಾರೆ.
ದೆಹಲಿ ಅಥವಾ ಹರ್ಯಾಣ , ರಾಜಸ್ಥಾನ, ಉತ್ತರ ಪ್ರದೇಶ, ಎಲ್ಲಿಯೂ ರೈತರು ಯಾವುದೇ ರಸ್ತೆಗಳನ್ನು ತಡೆದಿಲ್ಲ. ರೈತರಿಗೆ ರಸ್ತೆ ತಡೆ ಮಾಡುವ ಅಧಿಕಾರವಿಲ್ಲ ಆದರೆ ಪೊಲೀಸರಿಗೆ ಇದೆ ಎಂದು ಉಪಾಧ್ಯಾಯ್ ಹೇಳಿದರು.
ಗಾಜಿಪುರದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ (NH-9) ನಲ್ಲಿ ಟೆಂಟ್ ತೆರವುಗೊಳಿಸುತ್ತಿರುವುದು ಎಂದು ಸಾಮಾಜಿಕ ಮಾಧ್ಯಮದಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ಸುಳ್ಳು, ಅವು ಕೇವಲ ವದಂತಿಗಳು ಎಂದು ಬಿಕೆಯು ಪದಾಧಿಕಾರಿ ಹೇಳಿದ್ದಾರೆ .
ಹಾಗೆ ಏನೂ ಇಲ್ಲ. ಯುಪಿ ಗೇಟ್‌ನ ಮೇಲಿರುವ ಎನ್‌ಎಚ್ 9 ರಲ್ಲಿ ಫ್ಲೈಓವರ್‌ನಲ್ಲಿ ದೆಹಲಿಯ ಕಡೆಗೆ ಸರ್ವೀಸ್ ಲೇನ್‌ನಲ್ಲಿರುವ ಒಂದು ಟೆಂಟ್ ಅನ್ನು ನಾವು ಈಗಷ್ಟೇ ತೆಗೆದುಹಾಕಿದ್ದೇವೆ. ದೆಹಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್ ಇನ್ನೂ ಲೇನ್‌ನಲ್ಲಿ ಇದೆ ಎಂದು ಅವರು ಹೇಳಿದರು. ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರು ಗಡಿಯಿಂದ ಎಲ್ಲಿಯೂ ಹೋಗುತ್ತಿಲ್ಲ. ಬ್ಯಾರಿಕೇಡ್‌ಗಳನ್ನು ತೆಗೆಯುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ಅವರು ಹೇಳಿದರು. ರೈತರು ಎಕ್ಸ್‌ಪ್ರೆಸ್‌ವೇಯಲ್ಲಿ ಕುಳಿತುಕೊಳ್ಳುವುದನ್ನು ಮುಂದುವರಿಸುತ್ತೀರಾ ಎಂದು ಕೇಳಿದಾಗ, ಉಪಾಧ್ಯಾಯ್ ಅವರು ಸುಪ್ರೀಂ ಕೋರ್ಟ್ ಕೂಡ ಶಾಂತಿಯುತ ಪ್ರತಿಭಟನೆ ನಾಗರಿಕರ ಹಕ್ಕು ಎಂದು ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
Published On - 7:36 pm, Thu, 21 October 21