Bhabanipur Bypoll ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿದ್ದಾರೆಯೇ ಬಿಜೆಪಿಯ ಪ್ರಿಯಾಂಕಾ ಟಿಬರೆವಾಲ್?
Priyanka Tibrewal:ಮಮತಾ ಬ್ಯಾನರ್ಜಿ ವಿರುದ್ಧ ನನ್ನ ಪಕ್ಷ ನನ್ನನ್ನು ಭವಾನಿಪುರದಿಂದ ಕಣಕ್ಕಿಳಿಸಿದರೆ, ನಾನು ನನ್ನ ಕೈಲಾದದ್ದನ್ನು ನೀಡುತ್ತೇನೆ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧದ ಈ ಹೋರಾಟದಲ್ಲಿ ಜನರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ
ಕೊಲ್ಕತ್ತಾ: ಮುಂಬರುವ ಉಪಚುನಾವಣೆಯಲ್ಲಿ ಭವಾನಿಪುರ (Bhabanipur Bypoll) ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ (Mamata Banerjee) ವಿರುದ್ಧ ಯಾರು ಸ್ಪರ್ಧೆಗಿಳಿಯುತ್ತಾರೆ ಎಂಬ ಸಸ್ಪೆನ್ಸ್ ಗುರುವಾರ ಕೊನೆಗೊಳ್ಳಬಹುದು. ಯಾಕೆಂದರೆ ಮಮತಾ ವಿರುದ್ಧ ಸ್ಪರ್ಧಿಸಲು ಬಿಜೆಪಿ ಪ್ರಿಯಾಂಕಾ ಟಿಬರೆವಾಲ್ (Priyanka Tibrewal) ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಬಾಬುಲ್ ಸುಪ್ರಿಯೊ (Babul Supriyo) ಅವರ ಕಾನೂನು ಸಲಹೆಗಾರರಾಗಿದ್ದ ಟಿಬರೆವಾಲ್, ಆಗಸ್ಟ್ 2014 ರಲ್ಲಿ ಸುಪ್ರಿಯೊ ಸಲಹೆ ಮೇರೆಗೆ ಬಿಜೆಪಿಗೆ ಸೇರಿದರು. ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಫೂರ್ತಿ ಪಡೆದು ಬಿಜೆಪಿ ಸೇರಿರುವುದಾಗಿ ಅವರು ಹೇಳಿದ್ದರು.
2015 ರಲ್ಲಿ ಪ್ರಿಯಾಂಕಾ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ವಾರ್ಡ್ ಸಂಖ್ಯೆ 58 ರಿಂದ (ಎಂಟಲಿ) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತೃಣಮೂಲ ಕಾಂಗ್ರೆಸ್‌ನ ಸ್ವಪನ್ ಸಮ್ಮದರ್ ವಿರುದ್ಧ ಪರಾಭವಗೊಂಡಿದ್ದರು.
ಬಿಜೆಪಿಯಲ್ಲಿ ಆರು ವರ್ಷಗಳ ಅವಧಿಯಲ್ಲಿ ಅವರು ಹಲವಾರು ಪ್ರಮುಖ ಕೆಲಸಗಳನ್ನು ನಿರ್ವಹಿಸಿದ ಅವರನ್ನು ಆಗಸ್ಟ್ 2020 ರಲ್ಲಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಉಪಾಧ್ಯಕ್ಷರನ್ನಾಗಿ ಮಾಡಲಾಯಿತು.
2021 ರಲ್ಲಿಅವರು ಎಂಟಲಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಟಿಎಂಸಿಯ ಸ್ವರ್ಣ ಕಮಲ್ ಸಾಹಾ ವಿರುದ್ಧ ಸೋತರು.
ಟಿಬರೆವಾಲ್ ಜುಲೈ 7, 1981 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ವೆಲ್ಯಾಂಡ್ ಗೌಲ್ಡ್ಸ್ಮಿತ್ ಶಾಲೆಯಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಳು. ಅದರ ನಂತರ, ಅವರು 2007 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಹಜ್ರಾ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದರು. ಅವರು ಥೈಲ್ಯಾಂಡ್ ಅಸಂಪ್ಷನ್ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದರು.
ನ್ಯೂಸ್ 18 ರೊಂದಿಗೆ ಮಾತನಾಡಿ ಟಿಬರೆವಾಲ್, “ಪಕ್ಷವು ನನ್ನನ್ನು ಸಂಪರ್ಕಿಸಿದೆ ಮತ್ತು ನಾನು ಭವಾನಿಪುರದಿಂದ – ಸ್ಪರ್ಧಿಸಲು ಬಯಸುತ್ತೇನೆಯೋ ಇಲ್ಲವೋ ಎಂಬ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿದೆ. ಅನೇಕ ಹೆಸರುಗಳಿವೆ ಮತ್ತು ಅಭ್ಯರ್ಥಿ ಯಾರೆಂದು ನನಗೆ ಇನ್ನೂ ತಿಳಿದಿಲ್ಲ. ಈ ಎಲ್ಲಾ ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಪಕ್ಷದ ಹಿರಿಯ ನಾಯಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮಮತಾ ಬ್ಯಾನರ್ಜಿ ವಿರುದ್ಧ ನನ್ನ ಪಕ್ಷ ನನ್ನನ್ನು ಭವಾನಿಪುರದಿಂದ ಕಣಕ್ಕಿಳಿಸಿದರೆ, ನಾನು ನನ್ನ ಕೈಲಾದದ್ದನ್ನು ನೀಡುತ್ತೇನೆ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧದ ಈ ಹೋರಾಟದಲ್ಲಿ ಜನರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಟಿಎಂಸಿ ಆಡಳಿತದ ದುರಾಡಳಿತದ ವಿರುದ್ಧ ಜನರು ಮತ ಚಲಾಯಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದು ಚುನಾವಣೆಯ ನಂತರದ ಹಿಂಸಾಚಾರ ಮತ್ತು ಬಂಗಾಳದ ಜನರ ಸಂಕಷ್ಟದ ವಿರುದ್ಧ ನಮ್ಮ ಹೋರಾಟವಾಗಿದೆ ಎಂದಿದ್ದಾರೆ.
ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂದೇಶವಾಹಕಳಾಗಿದ್ದೇನೆ. ಭವಾನಿಪುರದ ಎಲ್ಲಾ ನಿವಾಸಿಗಳು ಬಿಜೆಪಿಗೆ ಮತ ನೀಡುವಂತೆ ವಿನಂತಿಸಲು ಬಯಸುತ್ತೇನೆ. ಏಕೆಂದರೆ ಮೋದಿಜಿಯವರ ನೇತೃತ್ವದಲ್ಲಿ ನಮ್ಮ ದೇಶವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಏಕಕಾಲದಲ್ಲಿ ಬಂಗಾಳವೂ ಬೆಳಗುತ್ತದೆ ಎಂದು ಅವರು ಹೇಳಿದರು. ಆಕೆಯ ರಾಜಕೀಯ ಜೀವನದುದ್ದಕ್ಕೂ ಮಾರ್ಗದರ್ಶಕ ಶಕ್ತಿಯಾಗಿದ್ದಕ್ಕಾಗಿ ಸುಪ್ರಿಯೋ ಅವರಿಗೆ ಪ್ರಿಯಾಂಕಾ ಧನ್ಯವಾದ ಹೇಳಿದ್ದಾರೆ.
ನಾನು ಚುನಾವಣೋತ್ತರ ಹಿಂಸಾಚಾರದ ವಿರುದ್ಧ ನಿಂತಿದ್ದೆ ಮತ್ತು ಒಂದೆರಡು ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಿದೆ. ನಾನು ನನ್ನ ಬಿಜೆಪಿ ಕಾರ್ಯಕರ್ತರಿಗೆ ಮನೆಗೆ ಮರಳಲು ಸಹಾಯ ಮಾಡಿದೆ. ಟಿಎಂಸಿ ಗೂಂಡಾಗಳ ಭಯದಿಂದ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಅವರು ತಮ್ಮ ಮನೆಯನ್ನು ಖಾಲಿ ಮಾಡಿದರು. ಬಂಗಾಳದಲ್ಲಿ ರಕ್ತಪಾತವನ್ನು ನಿಲ್ಲಿಸುವಂತೆ ನಾನು ಟಿಎಂಸಿಗೆ ಹೇಳಲು ಬಯಸುತ್ತೇನೆ, ‘ಖೂನಿ ಖೇಲ ಬಂಧೋ ಕೊರೊ’. ಭವಾನಿಪುರದ ನಿವಾಸಿಗಳು ಬಿಜೆಪಿ ಅಥವಾ ಮಮತಾ ಬ್ಯಾನರ್ಜಿ ಇವರಲ್ಲಿ ಯಾರನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸಲಿ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಮಾತ್ರ ಸ್ಪರ್ಧಿಸುತ್ತಿದ್ದಾರೆ. ಅವರ ಆಸಕ್ತಿಯು ಅಧಿಕಾರವನ್ನು ಉಳಿಸಿಕೊಳ್ಳುವುದು ಮಾತ್ರ ಆದರೆ ನಮ್ಮ ಹೋರಾಟವು ರಾಜ್ಯ ಸರ್ಕಾರದ ಪ್ರಜಾಪ್ರಭುತ್ವವಿಲ್ಲದ ಕಾರ್ಯದ ವಿರುದ್ಧವಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಾಜ್ಯ ವಿಧಾನಸಭೆಯಲ್ಲಿ ಟಿಎಂಸಿಯ ಉಪ ಮುಖ್ಯ ಸಚೇತಕ ತಪಸ್ ರಾಯ್ “ಇದು ಟಿಎಂಸಿಗೆ ಕಾಳಜಿಯ ವಿಷಯವಲ್ಲ. ನಾನು ಹೇಳುವುದೇನೆಂದರೆ, ಬಿಜೆಪಿ ಅಭ್ಯರ್ಥಿಯು ತನ್ನ ಭದ್ರತಾ ಠೇವಣಿಗಳನ್ನು ಕಳೆದುಕೊಳ್ಳುತ್ತಾರೆ. ಏಕೆಂದರೆ ನಮ್ಮ ನಾಯಕಿ ಮಮತಾ ಬ್ಯಾನರ್ಜಿ ದಾಖಲೆಯ ಅಂತರದಲ್ಲಿ ವಿಜೇತರಾಗಿ ಹೊರಹೊಮ್ಮುತ್ತಾರೆ. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರನ್ನು ಭವಾನಿಪುರ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ನೇಮಿಸಲಾಗಿದೆ.
ಬ್ಯಾನರ್ಜಿ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಅದರ ಮಿತ್ರ ಪಕ್ಷ ಸಿಪಿಐ (ಎಂ) ಭವಾನಿಪುರದ ವಕೀಲ ಶ್ರೀಜೀಬ್ ಬಿಸ್ವಾಸ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಯಲು ಬ್ಯಾನರ್ಜಿಗೆ ಚುನಾವಣೆ ಮಹತ್ವದ್ದಾಗಿದೆ.
ಸಂವಿಧಾನದ ಕಲಂ 164 ರ ಪ್ರಕಾರ, ಆರು ತಿಂಗಳೊಳಗೆ ಶಾಸಕರಲ್ಲದ ಸಚಿವರು ರಾಜೀನಾಮೆ ನೀಡಬೇಕು ಮತ್ತು ಆದ್ದರಿಂದ ಉಪಚುನಾವಣೆಯಲ್ಲಿ ಬ್ಯಾನರ್ಜಿ ಗೆಲ್ಲುವುದು ಬಹಳ ಮುಖ್ಯ.
ಇದನ್ನೂ ಓದಿ: Bhabanipur bypoll ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ; ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಸಭೆ ನಾಳೆ
(Bhabanipur Bypoll BJPs Priyanka Tibrewal to contest against Mamata Banerjee BJP is likely to announce the name)