Breaking News ಪಂಜಾಬ್ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಭಗವಂತ್ ಮಾನ್ ಸರ್ಕಾರ
ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಇಂದು ಪಂಜಾಬ್ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದೆ.
ದೆಹಲಿ: ಪಂಜಾಬ್‌ನಲ್ಲಿ (Punjab) ಆಮ್ ಆದ್ಮಿ ಪಕ್ಷದ (AAP) ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದೆ. ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಪಂಜಾಬ್ ಅಸೆಂಬ್ಲಿ ಅವರು ಮಂಡಿಸಿದ ವಿಶ್ವಾಸ ನಿರ್ಣಯವನ್ನು “ಅವಿರೋಧವಾಗಿ” ಅಂಗೀಕರಿಸಿದ ನಂತರ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಪಂಜಾಬ್‌ನಲ್ಲಿ ಆಪರೇಷನ್ ಕಮಲವನ್ನು ನಾವು ಸೋಲಿಸಿದ್ದೇವೆ ಎಂದಿದ್ದಾರೆ. ತಮ್ಮ ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಉರುಳಿಸುವ ಪ್ರಯತ್ನ ಎಂದು ಆಪಾದಿಸಲಾದ “ಆಪರೇಷನ್ ಕಮಲ” ಕುರಿತು ಎಎಪಿ ಶಾಸಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದರೊಂದಿಗೆ ವಿಧಾನಸಭೆಯು ಈ ಪ್ರಸ್ತಾಪದ ಮೇಲೆ ಚರ್ಚೆಯನ್ನು ಕೈಗೆತ್ತಿಕೊಂಡಿತು. ಆಪಾದಿತ ಕಾರ್ಯಾಚರಣೆಯ ಅಡಿಯಲ್ಲಿ ಮಾನ್ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ತನ್ನ ಕನಿಷ್ಠ 10 ಶಾಸಕರನ್ನು ಸಂಪರ್ಕಿಸಿದ್ದು, ಪ್ರತಿಯೊಬ್ಬರಿಗೂ ₹ 25 ಕೋಟಿ ನೀಡುವುದಾಗಿ ಹೇಳಿತ್ತು ಎಂದು ಆಪ್ ಆರೋಪಿಸಿದೆ.
Bhagwant Mann govt wins confidence vote in Punjab Assembly; Congress members walk out
— Press Trust of India (@PTI_News) October 3, 2022
ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ನಂತರ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅದನ್ನು ಮತಕ್ಕೆ ಹಾಕಿದರು. ಬೆಂಬಲಕ್ಕೆ ನಿಂತ ಶಾಸಕರಿಗೆ ಕೈ ಎತ್ತುವಂತೆ ಅವರು ಹೇಳಿದ್ದಾರೆ. ಶೂನ್ಯವೇಳೆಯಲ್ಲಿ ಮಾತನಾಡಲು ಮತ್ತು ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಭಾಧ್ಯಕ್ಷರು ಸಮಯ ನೀಡಬೇಕು ಎಂಬ ತಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಚರ್ಚೆ ಆರಂಭವಾದ ಕೂಡಲೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
91 ಎಎಪಿ ಶಾಸಕರು ಈ ನಿರ್ಣಯವನ್ನು ಬೆಂಬಲಿಸಿದರೆ, ಸದನದಲ್ಲಿದ್ದ ಮೂವರು ಎಸ್‌ಎಡಿ ಶಾಸಕರಲ್ಲಿ ಒಬ್ಬರು ಮತ್ತು ಬಿಎಸ್‌ಪಿಯ ಏಕೈಕ ಶಾಸಕರು ಮಸೂದೆಯನ್ನು ವಿರೋಧಿಸಲಿಲ್ಲ. ಹಾಗಾಗಿ 93 ಶಾಸಕರು ಈ ಮಸೂದೆಯನ್ನು ಬೆಂಬಲಿಸಿದ್ದು, ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ ಈ ಪ್ರಸ್ತಾವವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.
117 ಸದಸ್ಯರ ಪಂಜಾಬ್ ಅಸೆಂಬ್ಲಿಯಲ್ಲಿ, ಎಎಪಿ 92 ಸದಸ್ಯರು (ಸ್ಪೀಕರ್ ಸೇರಿದಂತೆ), ಕಾಂಗ್ರೆಸ್ 18, ಎಸ್‌ಎಡಿ 3, ಬಿಜೆಪಿ 2, ಬಿಎಸ್‌ಪಿ 1 ಮತ್ತು ಒಬ್ಬ ಪಕ್ಷೇತರ ಶಾಸಕ ಇದ್ದಾರೆ.
ಎಎಪಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಅಧಿವೇಶನವನ್ನು ಬಹಿಷ್ಕರಿಸಿದ್ದಾರೆ.
Published On - 5:31 pm, Mon, 3 October 22