Bharat Jodo Yatra: 3,000 ಕಿ.ಮೀ. ಕ್ರಮಿಸಿ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ
ಸೆ. 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣವನ್ನು ದಾಟಿ ಈಗ ಉತ್ತರ ಪ್ರದೇಶಕ್ಕೆ ಬಂದಿದೆ.
ನವದೆಹಲಿ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ (Bharat Jodo Yatra) ಇದೀಗ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. 9 ದಿನಗಳ ವಿರಾಮದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ಇಂದು ಉತ್ತರ ಪ್ರದೇಶದಿಂದ ಪುನರಾರಂಭಗೊಳ್ಳಲಿದೆ. ಈ ಯಾತ್ರೆಯು ಆರಂಭವಾಗಿ 110 ದಿನಗಳು ಕಳೆದಿದ್ದು, ಇದುವರೆಗೆ 3,000 ಕಿ.ಮೀ. ಸಂಚರಿಸಿದೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣವನ್ನು ದಾಟಿ ಈಗ ಉತ್ತರ ಪ್ರದೇಶಕ್ಕೆ ಬಂದಿದೆ. ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ
ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿ ನಡೆಸಿದ ಅತಿ ಉದ್ದದ ಪಾದಯಾತ್ರೆಯಾಗಿದೆ. ಜನವರಿ 26ರಂದು ಶ್ರೀನಗರದಲ್ಲಿ ಕೊನೆಗೊಳ್ಳುವ ಭಾರತ್ ಜೋಡೋ ಯಾತ್ರೆಯ ನಂತರ ಈ ಯಾತ್ರೆಯ ಸಂದೇಶವನ್ನು ಹರಡುವ ಉದ್ದೇಶದಿಂದ ಕಾಂಗ್ರೆಸ್ ‘ಹಾಥ್ ಸೇ ಹಾಥ್ ಜೋಡೋ’ ಅಭಿಯಾನವನ್ನು ಪ್ರಾರಂಭಿಸುತ್ತದೆ.
ಮೂಲಗಳ ಪ್ರಕಾರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದೇಶಾದ್ಯಂತ ‘ಹಾಥ್ ಸೇ ಹಾಥ್ ಜೋಡೋ’ ಅಭಿಯಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದ್ದಾರೆ. ಅಲ್ಲದೆ, ಈ ಬಾರಿ ಮಹಿಳೆಯರ ಮೇಲೆ ವಿಶೇಷ ಗಮನ ಹರಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ‘ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ 2 ತಿಂಗಳ ‘ಹಾಥ್ ಸೇ ಹಾಥ್ ಜೋಡೋ ಅಭಿಯಾನ’ವನ್ನು ಪ್ರಾರಂಭಿಸಲಿದೆ. ಈ ಅಭಿಯಾನದ ಭಾಗವಾಗಿ ‘ಭಾರತ್ ಜೋಡೋ ಯಾತ್ರೆ’ಯ ಸಂದೇಶವನ್ನು ಹರಡಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ರ್ಯಾಲಿಗಳನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.