ಸುಸ್ತಾಗಿಲ್ಲ, ನಿವೃತ್ತಿಯೂ ಆಗಿಲ್ಲ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಭೂಪಿಂದರ್ ಸಿಂಗ್ ಹೂಡಾ
ಹರಿಯಾಣದಲ್ಲಿ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಆಯ್ಕೆ ಯಾರಾಗಬಹುದು ಎಂಬ ಜ್ವಲಂತ ಪ್ರಶ್ನೆಗೆ ಹೈಕಮಾಂಡ್ ಅಂತಿಮ ಆಯ್ಕೆ ಮಾಡುವ ಮೊದಲು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ವಿವರಿಸಿದ್ದಾರೆ.
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಸಮೀಪಿಸುತ್ತಿದೆ. ನಾಳೆ ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಹರಿಯಾಣದ ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಇಂದು ದಿಟ್ಟ ಹೇಳಿಕೆಯನ್ನು ನೀಡಿದ್ದು, “ನನಗೆ ಸುಸ್ತಾಗಿಲ್ಲ ಅಥವಾ ನಾನು ನಿವೃತ್ತಿಯೂ ಆಗಿಲ್ಲ” ಎಂದು ಪ್ರತಿಪಾದಿಸಿದ್ದಾರೆ. ಹಾಗೇ, ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಪಕ್ಷದ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಹೂಡಾ ಹೇಳಿದ್ದಾರೆ.
ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರು 2005ರಿಂದ 2014ರವರೆಗಿನ ತಮ್ಮ ಅಧಿಕಾರಾವಧಿಯ ಬಗ್ಗೆ ಪ್ರಸ್ತಾಪಿಸಿದರು. ನನ್ನ ನಾಯಕತ್ವದಲ್ಲಿ ಉತ್ತಮ ಆಡಳಿತವನ್ನು ನಡೆಸಲಾಗಿತ್ತು. 2005ರಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಎದುರಿಸಿದ ಸಮಸ್ಯೆಗಳನ್ನು ಪ್ರತಿಧ್ವನಿಸುತ್ತಾ ಕಾನೂನು ಮತ್ತು ಸುವ್ಯವಸ್ಥೆ ಮತ್ತೊಮ್ಮೆ “ಕುಸಿದಿದೆ” ಎಂದು ಆರೋಪಿಸಿದ ಅವರು ಪ್ರಸ್ತುತ ಬಿಜೆಪಿ ಸರ್ಕಾರದತ್ತ ಬೆರಳು ತೋರಿಸಿದ್ದಾರೆ.
ಇದನ್ನೂ ಓದಿ: ಹರಿಯಾಣದಲ್ಲಿ ಬಿಜೆಪಿಗೆ ದೊಡ್ಡ ಶಾಕ್; ಅಶೋಕ್ ತನ್ವಾರ್ ಕಾಂಗ್ರೆಸ್‌ಗೆ ಮರು ಸೇರ್ಪಡೆ
“ಹರಿಯಾಣದ ಎಲ್ಲಾ 10 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‌ನ ಮತ ಹಂಚಿಕೆ ಹೆಚ್ಚಾಗಿದೆ. ಎಲ್ಲಾ 90 ವಿಧಾನಸಭಾ ಸ್ಥಾನಗಳಲ್ಲಿ ಮತಗಳ ಹಂಚಿಕೆಯೂ ಹೆಚ್ಚಾಗಿದೆ. ಜನರು ಇದನ್ನು ಸ್ಪಷ್ಟವಾಗಿ ಸೂಚಿಸಿದ್ದಾರೆ” ಎಂದು ಭೂಪಿಂದರ್ ಸಿಂಗ್ ಹೇಳಿದ್ದಾರೆ.
We will seek the opinions of the MLAs regarding the choice for the Chief Minister’s candidate, but the final decision will be made by the party’s High Command.
— Bhupinder Singh Hooda 🔥#HaryanaElections2024 pic.twitter.com/22fG7SKrJQ
— Amoxicillin (@Albert_1789) October 7, 2024
ಪಕ್ಷದ ಮುಖ್ಯಮಂತ್ರಿ ಆಯ್ಕೆ ಯಾರಾಗಬಹುದು ಎಂಬ ಜ್ವಲಂತ ಪ್ರಶ್ನೆಗೆ, ಹೈಕಮಾಂಡ್ ಅಂತಿಮ ಆಯ್ಕೆ ಮಾಡುವ ಮೊದಲು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಹೂಡಾ ವಿವರಿಸಿದರು. “ಹೈಕಮಾಂಡ್ ತೆಗೆದುಕೊಂಡ ನಿರ್ಧಾರವನ್ನು ಎಲ್ಲರೂ ಒಪ್ಪುತ್ತೇವೆ. ಕಾಂಗ್ರೆಸ್ ಎಲ್ಲಾ ಸ್ಥಾನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ”. “ನಾನು ಮತ್ತೊಮ್ಮೆ ಹೇಳುತ್ತೇನೆ, ನಾನು ದಣಿದಿಲ್ಲ ಅಥವಾ ನಿವೃತ್ತಿಯಾಗಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Assembly Polls Results: ನಾಳೆ ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ
ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಅವರಂತಹ ಹೆಸರುಗಳು ಸಹ ಹರಿಯಾಣದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ಬಂದಿದೆ.
ಅಕ್ಟೋಬರ್ 3ರಂದು ಪ್ರಚಾರ ಮುಕ್ತಾಯಗೊಂಡು ಅಕ್ಟೋಬರ್ 5ರಂದು ಮತದಾನ ಪೂರ್ಣಗೊಂಡಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ 55ರಿಂದ 60 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಅಂಕಿಅಂಶಗಳು ಚುನಾವಣಾ ಫಲಿತಾಂಶಗಳಾಗಿ ಮಾರ್ಪಟ್ಟರೆ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ