Big News: ಮಹಾರಾಷ್ಟ್ರ ಸರ್ಕಾರದ ಶೇ. 75ರಷ್ಟು ಸಚಿವರ ಮೇಲಿದೆ ಕ್ರಿಮಿನಲ್ ಕೇಸ್
Maharashtra Cabinet: ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರ ಸಂಪುಟದಲ್ಲಿರುವ ಎಲ್ಲಾ ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಆಸ್ತಿಯ ಸರಾಸರಿ ಮೌಲ್ಯ 47.45 ಕೋಟಿ ರೂ. ಇದೆ.
ಮುಂಬೈ: ಮಹಾರಾಷ್ಟ್ರದ (Maharashtra) ಶೇ. 75ರಷ್ಟು ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸೇರಿದಂತೆ 20 ಸಚಿವರಿದ್ದು, ಅವರಲ್ಲಿ 15 ಮಂದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿದ್ದಾರೆ.
ಇತ್ತೀಚೆಗಷ್ಟೆ ಸಿಎಂ ಏಕನಾಥ್ ಶಿಂಧೆ ತಮ್ಮ ಸಂಪುಟವನ್ನು ವಿಸ್ತರಿಸಿದ್ದರು. 2019ರ ವಿಧಾನಸಭೆ ಚುನಾವಣೆಗೂ ಮುನ್ನ ಸಚಿವರು ಸಲ್ಲಿಸಿದ್ದ ಚುನಾವಣಾ ಅಫಿಡವಿಟ್‌ಗಳನ್ನು ಎಡಿಆರ್ ಪರಿಶೀಲಿಸಿದೆ. ಮಹಾರಾಷ್ಟ್ರ ಸರ್ಕಾರದ 15 ಸಚಿವರು (ಶೇ. 75)ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. ಅವರಲ್ಲಿ 13 ಸಚಿವರು (ಶೇ. 65) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಗುಜರಾತಿ-ರಾಜಸ್ತಾನಿ ಹೇಳಿಕೆಗೆ ಕ್ಷಮೆ ಕೇಳಿದ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೊಶಿಯಾರಿ
ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರ ಸಂಪುಟದಲ್ಲಿರುವ ಎಲ್ಲಾ ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಆಸ್ತಿಯ ಸರಾಸರಿ ಮೌಲ್ಯ 47.45 ಕೋಟಿ ರೂ. ಇದೆ. ಇವರಲ್ಲಿ ಮಲಬಾರ್ ಹಿಲ್ ಕ್ಷೇತ್ರದ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು 441.65 ಕೋಟಿ ರೂ. ಆಸ್ತಿ ಹೊಂದಿರುವ ಅತ್ಯಧಿಕ ಶ್ರೀಮಂತ ಸಚಿವರಾಗಿದ್ದಾರೆ. ಅತಿ ಕಡಿಮೆ ಘೋಷಿತ ಒಟ್ಟು ಆಸ್ತಿ ಹೊಂದಿರುವ ಸಚಿವರೆಂದರೆ ಪೈಠಾಣ್ ಕ್ಷೇತ್ರದ ಭೂಮಾರೆ ಸಂದೀಪನರಾವ್ ಅಸಾರಾಂ. ಇವರು 2.92 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಮಹಾರಾಷ್ಟ್ರ ಸಂಪುಟದಲ್ಲಿ ಓರ್ವ ಮಹಿಳೆಯೂ ಇಲ್ಲ: ಮಹಾರಾಷ್ಟ್ರದ 8 ಸಚಿವರು ಎಸ್ಎಸ್ಎಲ್ಸಿ- ಪಿಯುಸಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಆದರೆ 11 ಸಚಿವರು (ಶೇ. 55) ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾಗಿ ಘೋಷಿಸಿಕೊಂಡಿದ್ದಾರೆ. ಒಬ್ಬರು ಸಚಿವರು ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ.
ಇದನ್ನೂ ಓದಿ: Maharashtra Cabinet: ಮಹಾರಾಷ್ಟ್ರದ ನೂತನ ಸಚಿವರಾಗಿ ಬಿಜೆಪಿ, ಶಿವಸೇನೆಯ 18 ಶಾಸಕರಿಂದ ಪ್ರಮಾಣವಚನ ಸ್ವೀಕಾರ
ಮಹಾರಾಷ್ಟ್ರ ಸಂಪುಟದ ನಾಲ್ವರು ಸಚಿವರು 41-50 ವರ್ಷ ವಯಸ್ಸಿನವರಾಗಿದ್ದಾರೆ. ಉಳಿದವರು 51-70 ವರ್ಷ ವಯಸ್ಸಿನವರಾಗಿದ್ದಾರೆ. ಕಳೆದ ತಿಂಗಳು ಬಿಜೆಪಿ ಜೊತೆ ಮೈತ್ರಿಗೆ ಆಗ್ರಹಿಸಿ ಶಿವಸೇನೆಯ ಶಾಸಕರು ಬಂಡಾಯ ಎದ್ದ ನಂತರ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ್ದರು. ನಂತರ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಶಿವಸೇನೆ ಪಕ್ಷದ ಅಧಿಕೃತ ಚಿಹ್ನೆಗಾಗಿ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಇನ್ನೂ ಕಾನೂನು ಹೋರಾಟ ನಡೆಸುತ್ತಿದ್ದಾರೆ.