Nitish Kumar: ಸತ್ತರೂ ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ; ನಿತೀಶ್ ಕುಮಾರ್
ಬಿಜೆಪಿಯ ಬಗ್ಗೆ ನಿತೀಶ್ ಕುಮಾರ್ ಸ್ಪಷ್ಟನೆ ಕೊಡುವಾಗ ತೇಜಸ್ವಿ ಯಾದವ್ ಅವರ ಪಕ್ಕದಲ್ಲಿಯೇ ಇದ್ದರು.
ಪಾಟ್ನಾ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತಲೂ ಸಾಯುವುದು ಒಳ್ಳೆಯದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಕಟುವಾಗಿ ಹೇಳಿದರು. ‘ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ವಿಶ್ವಾಸದ್ರೋಹ ಮಾಡಿದರು’ ಎನ್ನುವ ಬಿಜೆಪಿ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಕುರಿತ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಯಾವುದೇ ಆಧಾರವಿಲ್ಲದೆ, ಉದ್ದೇಶಪೂರ್ವಕವಾಗಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ಸರ್ಕಾರದ ಏಜೆನ್ಸಿಗಳು ಕ್ರಮಜರುಗಿಸುತ್ತಿವೆ ಎಂದು ದೂರಿದರು.
‘ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿವುದಿಲ್ಲ. ನಾನು ಸತ್ತರೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ನಿತೀಶ್ ಕುಮಾರ್ ಮಾತನಾಡುವಾಗ ತೇಜಸ್ವಿ ಯಾದವ್ ಅವರ ಪಕ್ಕದಲ್ಲಿಯೇ ಇದ್ದರು. ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೈತ್ರಿ ಕುರಿತು ತಾವು ಪ್ರಸ್ತಾಪಿಸಿದ್ದು “ತಪ್ಪು” ಎಂದು ಅವರು ಒಪ್ಪಿಕೊಂಡರು.
‘ಸರಿಯಾಗಿ ಕೇಳಿಸಿಕೊಳ್ಳಿ. ಅವರು (ಬಿಜೆಪಿ) ಎಷ್ಟು ಕಷ್ಟಪಟ್ಟಿದ್ದಾರೆ. ತೇಜಸ್ವಿ ಮತ್ತು ಅವರ ತಂದೆಯ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಮತ್ತೆ ನನ್ನೊಡನೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಹಿಂದೆಯೂ ಅವರು ಹೀಗೆಯೇ ಮಾಡಿದ್ದರು. ಮತ್ತೆ ಹಳೆಯ ತಂತ್ರಗಳನ್ನೇ ಅನುಸರಿಸುತ್ತಿದ್ದಾರೆ’ ಎಂದು ನಿತೀಶ್ ಕುಮಾರ್ ದೂರಿದರು.
ಮತ್ತಷ್ಟು ಓದಿ: ನಿತೀಶ್ ಕುಮಾರ್ ಜತೆ ಮೈತ್ರಿ ಇಲ್ಲ, ಅವರನ್ನು ಮತ್ತೊಮ್ಮೆ ನಂಬಿ ಮೋಸ ಹೋಗುವುದಿಲ್ಲ: ಬಿಹಾರದ ಬಿಜೆಪಿ ನಾಯಕ
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 36ರಲ್ಲಿ ಜಯಗಳಿಸಲಿದೆ ಎಂಬ ಹೇಳಿಕೆಗಳನ್ನು ಅವರು ಅಲ್ಲಗಳೆದರು. ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದಾಗ ಅವರು ಮುಸ್ಲಿಮರೂ ಸೇರಿದಂತೆ ನನ್ನ ಎಲ್ಲ ಬೆಂಬಲಿಗರ ಮತ ಸೆಳೆಯಲು ಯತ್ನಿಸಿದರು. ಮುಸ್ಲಿಮರಿಗೆ ಬಿಜೆಪಿಯ ಬಗ್ಗೆ ಮೊದಲಿನಿಂದಲೂ ಅನುಮಾನ ಇತ್ತು ಎಂದು ಹೇಳಿದರು.
ಜನಪ್ರಿಯತೆ ಕಳೆದುಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮೈತ್ರಿ ಸಾಧ್ಯತೆ ಇಲ್ಲವೇ ಇಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ ನಂತರ ನಿತೀಶ್ ಅವರಿಂದ ಇಂಥದ್ದೊಂದು ಪ್ರತಿಕ್ರಿಯೆ ಬಂದಿದೆ. ‘ನಮ್ಮ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಉಂಟಾಗುವುದು ಬೇಡ ಎನ್ನುವ ಕಾರಣಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇವೆ. ಮುಖ್ಯಮಂತ್ರಿಯು ಗಡಿಯಾರದ ಗೋಲಕದಂತೆ ಅತ್ತಿತ್ತ ಓಲಾಡುತ್ತಲೇ ಇರುತ್ತಾರೆ. ನಾವು ಮತ್ತೊಮ್ಮೆ ಅವರಿಂದ ಮೋಸ ಹೋಗುವುದಿಲ್ಲ’ ಎಂದು ಬಿಜೆಪಿ ಬಿಹಾರ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದರು.
‘ನಿತೀಶ್ ಕುಮಾರ್ ಇತ್ತೀಚೆಗೆ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಹೀಗಾಗಿಯೇ 2020ರ ಚುನಾವಣೆಯಲ್ಲಿ ಜೆಡಿಯು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿಲ್ಲ. ಆದರೆ ಬಿಜೆಪಿಯ ಅಭ್ಯರ್ಥಿಗಳು ಸಾಕಷ್ಟು ಸ್ಥಾನಗಳಲ್ಲಿ ಜಯಗಳಿಸಿದರು. ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮೊದಲು ನಿತೀಶ್‌ಗೆ ನೀಡಿದ್ದ ಭರವಸೆಗೆ ಮೋದಿ ಅವರು ಅಂಟಿಕೊಂಡರು. ಆದರೆ ನಿತೀಶ್ ತಮ್ಮ ಸ್ವಭಾವದಂತೆ ಮತ್ತೆ ಮೋಸ ಮಾಡಿದರು’ ಎಂದು ಸಂಜಯ್ ಹೇಳಿದ್ದರು.