
ಮುಜಫರ್‌ಪುರ, ಜೂನ್ 4: ಬಿಹಾರದ ಪ್ರಸಾದ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಇಂದು ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಮೂರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯೊಳಗೆ ದಟ್ಟ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ 20 ಕ್ಕೂ ಹೆಚ್ಚು ರೋಗಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಹಲವು ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಸ್ಥಿತಿ ಮತ್ತು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ಅಧಿಕಾರಿ ಆರ್.ಎನ್. ಪಾಂಡೆ ನೇತೃತ್ವದ ತಂಡ ಕಾರ್ಯಪ್ರವೃತ್ತವಾಯಿತು. ಸ್ಥಳಕ್ಕೆ ಧಾವಿಸಿದ 12 ಅಗ್ನಿಶಾಮಕ ವಾಹನಗಳು ದಟ್ಟ ಮತ್ತು ವಿಷಕಾರಿ ಹೊಗೆಯನ್ನು ಸೀಳಿಕೊಂಡು ಅತ್ಯಂತ ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ರಕ್ಷಣಾ ಮತ್ತು ಪರಿಹಾರ ತಂಡಗಳು ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದವು.
ಅವಘಡದ ತೀವ್ರತೆಯನ್ನು ಅರಿತು ಜಿಲ್ಲಾಧಿಕಾರಿ (DM) ಸುಬ್ರತ್ ಕುಮಾರ್ ಸೇನ್ ಹಾಗೂ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ತಕ್ಷಣವೇ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯ ನೇರ ಮೇಲ್ವಿಚಾರಣೆ ವಹಿಸಿಕೊಂಡಿತು.
ಮತ್ತಷ್ಟು ಓದಿ: ದೆಹಲಿಯ ಹೋಟೆಲ್ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ
ಸಿವಿಲ್ ಸರ್ಜನ್ ಅವರು ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿ, ರಕ್ಷಿಸಲಾದ ರೋಗಿಗಳಿಗೆ ತಕ್ಷಣದ ತುರ್ತು ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಸುಸಜ್ಜಿತ ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ಪ್ರಮುಖ ಆಸ್ಪತ್ರೆಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಉತ್ತಮ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿದ್ದ ಪ್ರತಿಯೊಬ್ಬ ರೋಗಿಯ ಪ್ರಸ್ತುತ ಸ್ಥಿತಿ ಮತ್ತು ಅವರ ಸುರಕ್ಷಿತ ಸ್ಥಳದ ಮಾಹಿತಿಯನ್ನು ಅವರ ಸಂಬಂಧಿಕರಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ವಿಶೇಷ ತಂಡವನ್ನು ನಿಯೋಜಿಸಿದ್ದಾರೆ.
ಈ ದುರದೃಷ್ಟಕರ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ ಐಸಿಯುನಲ್ಲಿದ್ದ ಮೂವರು ರೋಗಿಗಳು ಸೇರಿದಂತೆ ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ತೀವ್ರ ಕಳವಳಕಾರಿಯಾಗಿದ್ದರೂ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ರಕ್ಷಣಾ ತಂಡಗಳು ತೋರಿದ ಸಮಯಪ್ರಜ್ಞೆಯಿಂದಾಗಿ 20 ಕ್ಕೂ ಹೆಚ್ಚು ಅಮೂಲ್ಯ ಜೀವಗಳು ಪಾರಾಗಿವೆ.
ಆಸ್ಪತ್ರೆ ಸಿಬ್ಬಂದಿಗಳ ಗೈರು ನಡುವೆಯೂ ಅಧಿಕಾರಿಗಳು ರೋಗಿಗಳ ಕುಟುಂಬಗಳಿಗೆ ಧೈರ್ಯ ತುಂಬಿದ್ದು, ಸಂಪೂರ್ಣ ಪಾರದರ್ಶಕ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಆಸ್ಪತ್ರೆ ಆವರಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸಂಪೂರ್ಣ ಹತೋಟಿಯಲ್ಲಿದೆ. ಜೂನ್ 3ರಂದು ದೆಹಲಿಯ ಮಾಳವೀಯ ನಗರದ ಹೋಟೆಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು, 20 ಮಂದಿ ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ