
ಮುಂಬೈ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಗಿಂತ ಅದರಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಕಚ್ಚಾಟವೇ ಹೆಚ್ಚು ಸುದ್ದಿ ಮಾಡುತ್ತಿದೆ. ಇದೀಗ, ಸುಶಾಂತ್ ಆತ್ಮಹತ್ಯೆಯ ತನಿಖೆ ನಡೆಸಲು ಬಿಹಾರದ ಪಾಟ್ನಾದಿಂದ ಆಗಮಿಸಿದ್ದ IPS ಅಧಿಕಾರಿಯನ್ನ ಮುಂಬೈ ಆರೋಗ್ಯಾಧಿಕಾರಿಗಳು ‘ಬಲವಂತವಾಗಿ’ ಕ್ವಾರಂಟೈನ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವನ್ನ ಖುದ್ದು ಬಿಹಾರದ DGP ಗುಪ್ತೇಶ್ವರ ಪಾಂಡೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.
ನಟ ಸುಶಾಂತ್ನ ತಂದೆ ಪಾಟ್ನಾ ಪೊಲೀಸರಿಗೆ ನೀಡಿದ ದೂರಿನನ್ವಯ IPS ಅಧಿಕಾರಿ ವಿನಯ್ ತಿವಾರಿ ಹೆಚ್ಚಿನ ತನಿಖೆ ನಡೆಸಲು ತಮ್ಮ ತಂಡದೊಂದಿಗೆ ಮುಂಬೈಗೆ ನಿನ್ನೆ ಆಗಮಿಸಿದ್ದರು. ತಿವಾರಿ ಮುಂಬೈಗೆ ಬಂದ ಕೂಡಲೇ ಇಡೀ ತಂಡವನ್ನ ಮುಂಬೈ ಆರೋಗ್ಯಾಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ ಎಂದು ಗುಪ್ತೇಶ್ವರ ಪಾಂಡೆ ಆರೋಪಿಸಿದ್ದಾರೆ.
ಜೊತೆಗೆ, ತಿವಾರಿ ಎಷ್ಟೇ ಕೇಳಿಕೊಂಡರೂ IPS ಅಧಿಕಾರಿಗಳ ಗೆಸ್ಟ್ ಹೌಸ್ನಲ್ಲಿ ವಿನಯ್ರನ್ನ ಇರಿಸಿಲ್ಲ ಎಂದು ತಿಳಿದುಬಂದಿದೆ. ಸುಶಾಂತ್ನ ಸ್ನೇಹಿತೆ ರಿಯಾ ಚಕ್ರವರ್ತಿಯ ವಿರುದ್ಧ ನಟನ ತಂದೆ ಪಾಟ್ನಾದಲ್ಲಿ ದೂರು ದಾಖಲಿಸಿದ್ದಾರೆ.

Published On - 11:50 am, Mon, 3 August 20