ತಿರುವನಂತಪುರಂನಲ್ಲಿರುವ ಸಿಪಿಎಂ ಕಚೇರಿ ಮೇಲೆ ಬಾಂಬ್ ದಾಳಿ; ಸ್ಕೂಟರ್ನಲ್ಲಿ ಬಂದು ಬಾಂಬ್ ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜನರನ್ನು ಪ್ರಚೋದಿಸುತ್ತಿದೆ. ಈ ಸಂಚಿಗೆ ಬೀಳಬೇಡಿ. ಕಾರ್ಯಕರ್ತರು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
ತಿರುವನಂತಪುರಂ:ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ(Thiruvananthapuram) ಸಿಪಿಐ(ಎಂ) (CPI(M)) ಪ್ರಧಾನ ಕಚೇರಿ ಎಕೆಜಿ ಸೆಂಟರ್ ಮೇಲೆ ಗುರುವಾರ ರಾತ್ರಿ ದುಷ್ಕರ್ಮಿಯೊಬ್ಬ ಬಾಂಬ್(Bomb) ಎಸೆದಿದ್ದಾನೆ. ಸ್ಕೂಟರ್ನಲ್ಲಿ ಬಂದ ವ್ಯಕ್ತಿ ಎಕೆಜಿ ಸೆಂಟರ್ ಮುಂದೆ ಬಾಂಬ್ ಬಿಸಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿಸೆರೆಯಾಗಿದೆ. ಬಾಂಬ್ ಬಿಸಾಡಿರುವ ಈ ಘಟನೆ ರಾಜ್ಯದಲ್ಲಿ ಆಡಳಿತಾರೂಢ ಸಿಪಿಎಂ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಕಳೆದ ವಾರ ವಯನಾಡ್ನಲ್ಲಿ(Wayanad) ರಾಹುಲ್ ಗಾಂಧಿಯವರ (Rahul Gandhi) ಕಚೇರಿಗೆ ನುಗ್ಗಿ ಎಸ್ಎಫ್ಐ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ರಾಹುಲ್ ಗಾಂಧಿಯವರು ಇಂದು(ಶುಕ್ರವಾರ) ಕೇರಳಕ್ಕೆ ಭೇಟಿ ನೀಡುತ್ತಿದ್ದು ಈ ಹೊತ್ತಲ್ಲೇ ಸಿಪಿಎಂ ಕಚೇರಿ ಮೇಲೆ ದಾಳಿ ನಡೆದಿರುವುದು ಎರಡೂ ಪಕ್ಷಗಳ ನಡುವಿನ ಜಟಾಪಟಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಗುರುವಾರ ರಾತ್ರಿ 11.30ರ ವೇಳೆಗೆ ಈ ಘಟನೆ ನಡೆದಿದೆ.ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿರುವ ಸಿಸಿಟಿವಿ ದೃಶ್ಯದಲ್ಲಿ ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೊಬ್ಬರು ಎಕೆಜಿ ಸೆಂಟರ್ ಬಳಿ ಸ್ಕೂಟರ್ ನಿಲ್ಲಿಸಿ ಬಾಂಬ್ ಎಸೆಯುತ್ತಿರುವುದು ಕಾಣುತ್ತದೆ . ಘಟನಾ ಸ್ಥಳಕ್ಕೆ ಆಗಮಿಸಿದ ಸಿಪಿಎಂ ನಾಯಕರು ಇದು ಬಾಂಬ್ ದಾಳಿ ಎಂದು ಆರೋಪಿಸಿದ್ದಾರೆ. ಎಕೆಜಿ ಸೆಂಟರ್ ನಲ್ಲಿದ್ದ ಕೆಲವು ನಾಯಕರು ರಾತ್ರಿ ಹೊತ್ತು ಭಾರೀ ಸ್ಫೋಟ ಸದ್ದು ಕೇಳಿದೆ ಎಂದು ಹೇಳಿದ್ದಾರೆ. ಆದಾಗ್ಯೂ ಈ ಸ್ಫೋಟಕ ಎಕೆಜಿ ಸೆಂಟರ್ನ ಆವರಣ ಗೋಡೆ ಮೇಲೆ ಬಿದ್ದಿದೆ.
ಪೊಲೀಸರು ತನಿಖೆ ಆರಂಭಿಸಿದ್ದು ಬಾಂಬ್ ಸ್ಕ್ವಾಡ್ ಕೂಡಾ ಸ್ಥಳಕ್ಕೆ ಆಗಮಿಸಿದೆ.
Kerala | A man on a two-wheeler captured on CCTV hurls a bomb at CPI (M) headquarters, AKG Center, Thiruvananthapuram
(Source: AKG Center CCTV) pic.twitter.com/cfP1zbChb0
— ANI (@ANI) June 30, 2022
ಈ ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ ಸಿಪಿಎಂನ ಹಿರಿಯನಾಯಕ ಮತ್ತು ಎಲ್ಡಿಎಫ್ ಕನ್ವೀನರ್ ಇಪಿ ಜಯರಾಜನ್, ಸಿಪಿಎಂ ಕಾರ್ಯಕರ್ತರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ . ಆದಾಗ್ಯೂ ಕಾಂಗ್ರೆಸ್ ಈ ಆರೋಪ ನಿರಾಕರಿಸಿದೆ.
ಸಿಪಿಎಂ ಕಾರ್ಯಕರ್ತರು ತಿರುವನಂತಪುರಂ, ಪತ್ತನಂತಟ್ಟ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಕಾಂಗ್ರೆಸ್ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜನರನ್ನು ಪ್ರಚೋದಿಸುತ್ತಿದೆ. ಈ ಸಂಚಿಗೆ ಬೀಳಬೇಡಿ. ಕಾರ್ಯಕರ್ತರು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
Published On - 2:14 pm, Fri, 1 July 22