ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿಗೆ ಬೇಸತ್ತ ಬಿಜೆಪಿ..: ಮೇ 5ರಂದು ದೇಶಾದ್ಯಂತ ಧರಣಿ ನಡೆಸಲು ನಿರ್ಧಾರ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಆದರೆ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋತಿದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದು, ಟಿಎಂಸಿ ಸ್ಪಷ್ಟ ಬಹುಮತದಿಂದ ಮುನ್ನಡೆ ಸಾಧಿಸಿದ ಬಳಿಕ ಅನೇಕ ಕಡೆ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಚೇರಿ, ಪಕ್ಷದ ಕಾರ್ಯಕರ್ತರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಿನ್ನೆ ಆರೋಪ ಮಾಡಿದ್ದಾರೆ. ಟಿಎಂಸಿ ಕಾರ್ಯಕರ್ತರು ಹೀಗೆ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರ ನಡೆಸಿದ್ದನ್ನು ವಿರೋಧಿಸಿ ಇದೀಗ ಬಿಜೆಪಿ ಮೇ 5ರಂದು ರಾಷ್ಟ್ರಾದ್ಯಂತ ಧರಣಿ ನಡೆಸಲು ನಿರ್ಧರಿಸಿದೆ.
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಧರಣಿ ನಡೆಸಲಾಗುವುದು. ಆದರೆ ನಾವು ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಎಲ್ಲ ನಿಯಮ, ಶಿಷ್ಟಾಚಾರಗಳನ್ನೂ ಪಾಲಿಸಿಯೇ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ತಿಳಿಸಿದೆ. ಅಲ್ಲದೆ, ಮೇ 4 ಮತ್ತು 5ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಹಲ್ಲೆಗೊಳಗಾದ, ಮನೆ ಕಳೆದುಕೊಂಡ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಅವರ ಕುಟುಂಬದವರ ಜತೆ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಬಿಜೆಪಿ ಪಕ್ಷದ ಟ್ವಿಟರ್ನಲ್ಲಿ ತಿಳಿಸಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಆದರೆ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋತಿದ್ದಾರೆ. ಈ ಸಿಟ್ಟಿನಲ್ಲಿ ಟಿಎಂಸಿ ಗೂಂಡಾಗಳು ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ, ಬೇರೆ ಕೆಲವು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಬಿಜೆಪಿಯ ಆರೋಪ.
ಇದನ್ನೂ ಓದಿ: ‘ಮೇ ತಿಂಗಳಲ್ಲಿ ನಿಗದಿಯಾಗಿದ್ದ ಯಾವುದೇ ಆಫ್ಲೈನ್ ಪರೀಕ್ಷೆಗಳನ್ನೂ ನಡೆಸಬೇಡಿ’-ಶಿಕ್ಷಣಸಂಸ್ಥೆಗಳಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ