ಚುನಾವಣೆ ಗೆದ್ರೆ ಪ್ರಿಯಾಂಕಾ ಕೆನ್ನೆಯಂತೆ ರಸ್ತೆ ನಿರ್ಮಿಸುವೆ: ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2025 | 8:31 PM

ದೆಹಲಿ ವಿಧಾನಸಭಾ ಚುನಾವಣೆಗೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉಲ್ಲೇಖಿಸಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಬಿಧುರಿ ಅವರು ನಂತರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ಗೆದ್ರೆ ಪ್ರಿಯಾಂಕಾ ಕೆನ್ನೆಯಂತೆ ರಸ್ತೆ ನಿರ್ಮಿಸುವೆ: ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ
ಚುನಾವಣೆ ಗೆದ್ರೆ ಪ್ರಿಯಾಂಕಾ ಕೆನ್ನೆಯಂತೆ ರಸ್ತೆ ನಿರ್ಮಿಸುವೆ: ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ
Follow us on

ನವದೆಹಲಿ, ಜನವರಿ 05: ಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಕೆನ್ನೆಯಂತೆ ನಯವಾದ ರಸ್ತೆಗಳನ್ನು ಮಾಡುತ್ತೇವೆ ಎಂದು ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚೆ ತಮ್ಮ ಪಕ್ಷದ ಚುನಾವಣಾ ಭರವಸೆಗಳ ಬಗ್ಗೆ ಮಾತನಾಡುವಾಗ ರಮೇಶ್ ಬಿಧುರಿ ಈ ರೀತಿ ಹೇಳಿದ್ದು, ವಿಡಿಯೋ ಕೂಡ ವೈರಲ್ ಆಗಿದೆ.

ಓಖ್ಲಾ ಹಾಗೂ ಸಂಗಮ್ ವಿಹಾರ್​ದಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲಿ ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದಿದ್ದಾರೆ. ಸದ್ಯ ರಮೇಶ್ ಬಿಧುರಿ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ: ಸುಪ್ರಿಯಾ ಶ್ರೀನೇಟ್​

ರಮೇಶ್ ಬಿಧುರಿ ಅವರ ಈ ಹೇಳಿಕೆ ಸದ್ಯ ರಾಜಕೀಯ ಚರ್ಚೆ ಹುಟ್ಟುಹಾಕಿದ್ದು, ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ. ಬಿಧುರಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಟ್​, “ನಾಚಿಕೆಗೇಡು” ಮತ್ತು ಬಿಜೆಪಿ “ಮಹಿಳಾ ವಿರೋಧಿ” ಮನಸ್ಥಿತಿಯನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ದೆಹಲಿ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ಆಪ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ನಾಚಿಕೆಗೇಡು ಮಾತ್ರವಲ್ಲ, ಮಹಿಳೆಯರ ಬಗೆಗಿನ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಆದರೆ ಸದನದಲ್ಲಿ ತನ್ನ ಸಹ ಸಂಸದರ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಿದ ಮತ್ತು ಯಾವುದೇ ಶಿಕ್ಷೆಯನ್ನು ಪಡೆಯದ ವ್ಯಕ್ತಿಯಿಂದ ಬೇರೆ ಏನನ್ನು ನಿರೀಕ್ಷಿಸಬಹುದು? ಇದು ಬಿಜೆಪಿಯ ನಿಜವಾದ ಮುಖ ಎಂದು ವಾಗ್ದಾಳಿ ಮಾಡಿದ್ದಾರೆ.

ಆಪ್​ ಸಂಸದ ಸಂಜಯ್ ಸಿಂಗ್ ಕೂಡ ರಮೇಶ್ ಬಿಧುರಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಎಕ್ಸ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಯ ನಾಯಕತ್ವದಲ್ಲಿ ದೆಹಲಿಯ ಮಹಿಳೆಯರು ಸುರಕ್ಷಿತವಾಗಿರಬಹುದೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 4ನೇ ಹಂತದ ಮೆಟ್ರೋ ಮಾರ್ಗ, ದೇಶದಲ್ಲಿ 1000 ಕಿಮೀ ಮೆಟ್ರೋ ಸಂಚಾರ, ದಾಖಲೆ

ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರ ಭಾಷೆಯನ್ನು ಕೇಳಿ, ಇದು ಮಹಿಳೆಯರಿಗೆ ಬಿಜೆಪಿ ನೀಡುವ ಗೌರವ. ಅಂತಹ ನಾಯಕರ ಕೈಯಲ್ಲಿ ದೆಹಲಿಯ ಮಹಿಳೆಯರ ಗೌರವ ಸುರಕ್ಷಿತವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ರಮೇಶ್ ಬಿಧುರಿ ಟ್ವೀಟ್​

ಇನ್ನು ಈ ವಿಚಾರವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಮೇಶ್ ಬಿಧುರಿ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲವರು ನಾನು ನೀಡಿದ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯ ಲಾಭಕ್ಕಾಗಿ ಮುಂದಾಗಿದ್ದಾರೆ. ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೂ, ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.