BJP Foundation Day 2024: 17 ರಾಜ್ಯಗಳಲ್ಲಿ ಸರ್ಕಾರ, 303 ಸಂಸದರು: ಬಿಜೆಪಿಯ 44 ವರ್ಷಗಳ ಪಯಣದ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ

|

Updated on: Apr 06, 2024 | 12:11 PM

ಬಿಜೆಪಿ ಸಂಸ್ಥಾಪನಾ ದಿನ: 1980 ರ ಏಪ್ರಿಲ್ 6 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಒಟ್ಟಿಗೆ ಬಿಜೆಪಿಗೆ ಅಡಿಪಾಯ ಹಾಕಿದರು. ಅಟಲ್ ಬಿಹಾರಿ ವಾಜಪೇಯಿ ಸ್ಥಾಪಕ ಅಧ್ಯಕ್ಷರಾಗಿದ್ದರು. ಅದರ ನಂತರ 1984 ರ ಚುನಾವಣೆಯಲ್ಲಿ ಕೇವಲ 2 ಮಂದಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅಲ್ಲಿಂದ ನಂತರ ಈವರೆಗೆ ಬಿಜೆಪಿ ಬೆಳೆದು ಬಂದ ಹಾದಿಯ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ.

BJP Foundation Day 2024: 17 ರಾಜ್ಯಗಳಲ್ಲಿ ಸರ್ಕಾರ, 303 ಸಂಸದರು: ಬಿಜೆಪಿಯ 44 ವರ್ಷಗಳ ಪಯಣದ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ
ಬಿಜೆಪಿಯ 44 ವರ್ಷಗಳ ಪಯಣದ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ
Follow us on

ಭಾರತೀಯ ಜನತಾ ಪಕ್ಷ (BJP) ಇಂದು, ಅಂದರೆ ಏಪ್ರಿಲ್ 6 ರಂದು ಸಂಸ್ಥಾಪನಾ ದಿನ ಆಚರಿಸುತ್ತಿದೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಡ್ಡಾ ಜನಸಂಘದ ಮುಖಂಡರಾದ ದೀನದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ 1980 ರ ಏಪ್ರಿಲ್ 6 ರಂದು ಬಿಜೆಪಿಯನ್ನು ಸ್ಥಾಪಿಸಿದರು. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಸಂಸ್ಥಾಪನಾ ದಿನದಂದು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಘೋಷಣೆಯೊಂದಿಗೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ.

ಭಾರತೀಯ ಜನತಾ ಪಕ್ಷದ ಆರಂಭದಿಂದ ಇಂದಿನವರೆಗೆ 44 ವರ್ಷಗಳ ಪಯಣ ಹೇಗಿತ್ತು ಎಂಬ ಸಂಕ್ಷಿಪ್ತ ನೋಟ ಇಲ್ಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ 1980 ರ ಏಪ್ರಿಲ್ 6 ರಂದು ಒಟ್ಟಿಗೆ ಬಿಜೆಪಿಗೆ ಅಡಿಪಾಯವನ್ನು ಹಾಕಿದರು. ಅಟಲ್ ಬಿಹಾರಿ ವಾಜಪೇಯಿ ಸ್ಥಾಪಕ ಅಧ್ಯಕ್ಷರಾಗಿದ್ದರು. 1984ರ ಚುನಾವಣೆಯಲ್ಲಿ ಕೇವಲ 2 ಮಂದಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಇದಾದ ಬಳಿಕವೂ ಪಕ್ಷ ಬಲವರ್ಧನೆಗಾಗಿ ಹೋರಾಟ ಮುಂದುವರಿಸಿತ್ತು. 1989ರ ಚುನಾವಣೆ ಬಿಜೆಪಿ ಪಾಲಿಗೆ ಸ್ಮರಣೀಯ. ಈ ಚುನಾವಣೆಯಲ್ಲಿ ಅದು 85 ಸ್ಥಾನಗಳನ್ನು ಗೆದ್ದಿತ್ತು.

ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿ

1991 ರಲ್ಲಿ ಬಿಜೆಪಿ 120 ಸ್ಥಾನಗಳನ್ನು ಗೆದ್ದಿತ್ತು, ನಂತರ 1996 ಬಿಜೆಪಿಗೆ ಐತಿಹಾಸಿಕ ವರ್ಷವಾಗಿತ್ತು. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾದರು. ನಂತರ 1998ರ ಚುನಾವಣೆಯಲ್ಲಿ ಬಿಜೆಪಿಯ 182 ಅಭ್ಯರ್ಥಿಗಳು ಆಯ್ಕೆಯಾದರು. ಅದರ ನಂತರ, 1999 ರಲ್ಲಿ, ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿತು ಮತ್ತು ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು. ಇದಾದ ನಂತರ 2004ರವರೆಗೆ ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿತ್ತು.

2014ರಲ್ಲಿ ಮೋದಿ ಮ್ಯಾಜಿಕ್

ಭಾರತೀಯ ಜನತಾ ಪಕ್ಷವು 2004 ರ ನಂತರ ಸತತ 10 ವರ್ಷಗಳ ಕಾಲ ಅಧಿಕಾರವನ್ನು ಮರಳಿ ಪಡೆಯಲು ಹೆಣಗಾಡಿತು. ಆದರೆ 2014 ರಲ್ಲಿ ಅದು ಬಂಪರ್ ಗೆಲುವು ಸಾಧಿಸಿತು. 2019 ರ ಚುನಾವಣೆಯಲ್ಲಿ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿತು. ಮೋದಿ ಮ್ಯಾಜಿಕ್‌ನಿಂದಾಗಿ ಬಿಜೆಪಿ 2014, 2019ರಲ್ಲಿ ಭರ್ಜರಿ ಗೆಲುವು ಸಾಧಿಸಿತು.

2019ರಲ್ಲೂ ಭಾರಿ ಬಹುಮತ

2014ರ ನಂತರ 2019 ರಲ್ಲಿಯೂ ಮನೆ ಮನೆಗಳಲ್ಲೂ ಮೋದಿ, ಮೋದಿ ಅಲೆ ಕೇಳಿ ಬರಲಾರಂಭಿಸಿತ್ತು. ಇದರಿಂದಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತು, ಪಕ್ಷವು ಭಾರಿ ಬಹುಮತವನ್ನು ಪಡೆದುಕೊಂಡಿತು. 303 ಸ್ಥಾನಗಳನ್ನು ಗೆದ್ದು, ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿತು.

ಇದನ್ನೂ ಓದಿ: ‘ದೇಶ ಮೊದಲು’ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ: ಪ್ರಧಾನಿ ಮೋದಿ

ಪ್ರಸ್ತುತ ಬಿಜೆಪಿಯು 12 ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಗೋವಾ, ಅಸ್ಸಾಂ, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ರಾಜ್ಯ ಸರ್ಕಾರವನ್ನು ಹೊಂದಿದೆ. ಅಲ್ಲದೆ, ಇನ್ನು 5 ರಾಜ್ಯಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸರ್ಕಾರವಿದೆ. ಇದರಲ್ಲಿ ಮಹಾರಾಷ್ಟ್ರ, ಬಿಹಾರ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ ಸೇರಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:05 am, Sat, 6 April 24