ಇಟಲಿ ಮಹಿಳೆ ಕೂಡ ಭಾರತದಲ್ಲಿ ಮತ ಚಲಾಯಿಸಿದ್ದರು, ನಿಮಗೆ ನೆನಪಿಲ್ಲವೇ?; ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಲೇವಡಿ

ಹರಿಯಾಣದಲ್ಲಿ 'ಮತ ಚೋರಿ' ನಡೆದಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ಆರೋಪಕ್ಕೆ ಇದೀಗ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ರೀತಿ ಪದೇಪದೆ ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡುವುದು ರಾಜಕೀಯ ನಾಟಕ ಎಂದು ಹೇಳಿದ ಕಿರಣ್ ರಿಜಿಜು, ಬಿಹಾರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಟಲಿ ಮಹಿಳೆ ಕೂಡ ಭಾರತದಲ್ಲಿ ಮತ ಚಲಾಯಿಸಿದ್ದರು, ನಿಮಗೆ ನೆನಪಿಲ್ಲವೇ?; ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಲೇವಡಿ
Rahul Gandhi

Updated on: Nov 05, 2025 | 5:26 PM

ನವದೆಹಲಿ, ನವೆಂಬರ್ 5: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ಸುದ್ದಿಗೋಷ್ಠಿ ನಡೆಸಿ “ಮತ ಚೋರಿ”ಯ ಆರೋಪ ಮಾಡಿದ್ದಾರೆ. ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿಯವರ ‘ಬ್ರೆಜಿಲಿಯನ್ ಮಾಡೆಲ್ ಮತದಾನ ಮಾಡಿದ್ದಾರೆ’ ಎಂಬ ಆರೋಪಕ್ಕೆ ಬಿಜೆಪಿಯ ರಾಧಿಕಾ ಖೇರಾ  ಪ್ರತಿಕ್ರಿಯಿಸಿದ್ದು, “ಇಟಾಲಿಯನ್ ಮಹಿಳೆ” ಕೂಡ ನಮ್ಮ ದೇಶದಲ್ಲಿ ಮತ ಚಲಾವಣೆ ಮಾಡಿದ್ದರು. ಆ ಮಹಿಳೆಯ ಬಗ್ಗೆ ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಸೋನಿಯಾ ಗಾಂಧಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.

“ಹಿಂದೂಸ್ತಾನದಲ್ಲಿ ಇಟಾಲಿಯನ್ ಮಹಿಳೆಯೊಬ್ಬರು ಮತ ಚಲಾಯಿಸಿದ್ದರು. ನಿಮಗೆ ಅವರ ಹೆಸರು ತಿಳಿದಿದೆಯೇ?” ಎಂದು ರಾಧಿಕಾ ಖೇರಾ ಎಕ್ಸ್​ನಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.


ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಪ್ರತಿಕ್ರಿಯಿಸಿದ್ದು, “ರಾಹುಲ್ ಗಾಂಧಿ ಪ್ರತಿ ಬಾರಿ ತಾವು ಸಿಡಿಸುವ ಪರಮಾಣು ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಅವರ ಪರಮಾಣು ಬಾಂಬ್ ಎಂದಿಗೂ ಸ್ಫೋಟಗೊಳ್ಳುವುದೇ ಇಲ್ಲ ಏಕೆ? ಅವರು ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್ ಮಾಡೆಲ್​ ಫೋಟೊ ಬಳಸಿ ಹರ್ಯಾಣದಲ್ಲಿ 22 ಹೆಸರುಗಳಲ್ಲಿ ನಡೆದಿತ್ತು ಮತದಾನ: ರಾಹುಲ್ ಗಾಂಧಿ

“ಬಿಹಾರದ ಚುನಾವಣೆ ಸಮೀಪದಲ್ಲಿದೆ. ಬಿಹಾರದಲ್ಲಿ ಕಾಂಗ್ರೆಸ್ ಗಮನಸೆಳೆಯಲು ಏನೂ ಉಳಿದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಹೀಗಾಗಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ಈಗ ಹರಿಯಾಣದ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಅವರು ಹೇಳಿದ್ದೆಲ್ಲ ಸುಳ್ಳು ಆರೋಪವಾದ್ದರಿಂದ ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದಿದ್ದಾರೆ.


“ರಾಹುಲ್ ಗಾಂಧಿ ಬ್ರೆಜಿಲ್ ಮಾಡೆಲ್​ನದ್ದು ಎಂಬ ವಿದೇಶಿ ಮಹಿಳೆಯ ಉಲ್ಲೇಖವನ್ನೂ ಮಾಡಿದ್ದಾರೆ. ಚುನಾವಣೆಗಳ ಸಮಯದಲ್ಲಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ. ಸಂಸತ್ತಿನ ಅಧಿವೇಶನಗಳ ಸಮಯದಲ್ಲಿ ಅವರು ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ಸ್ಥಳಗಳಿಗೆ ರಹಸ್ಯವಾಗಿ ಭೇಟಿ ನೀಡಿದ್ದರು. ಈಗ, ಬಿಹಾರ ಚುನಾವಣೆಯ ಸಮಯದಲ್ಲಿ ಅವರು ಕೊಲಂಬಿಯಾಕ್ಕೆ ಹೋಗಿದ್ದರು. ಆದ್ದರಿಂದ, ಅವರು ವಿದೇಶಕ್ಕೆ ಹೋದಾಗ ಅಲ್ಲಿಂದ ಕೆಲವು ವಿಚಾರಗಳನ್ನು ಇಲ್ಲಿಗೆ ತೆಗೆದುಕೊಂಡು ಬರುತ್ತಾರೆ. ಅವುಗಳನ್ನು ತಮ್ಮ ತಂಡಕ್ಕೆ ನೀಡುತ್ತಾರೆ. ಅವರು ಈ ಆಧಾರರಹಿತ ನಿರೂಪಣೆಗಳನ್ನು ಸಿದ್ಧಪಡಿಸುತ್ತಾರೆ. ಈ ಮೂಲಕ ಅವರು ಎಲ್ಲರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ರಾಜಕಾರಣಿಗಳು ಗಂಭೀರ ವಿಷಯಗಳ ಬಗ್ಗೆ ಮಾತನಾಡಬೇಕೇ ವಿನಃ ಇಂತಹ ವ್ಯರ್ಥ ವಿಷಯಗಳಲ್ಲಿ ತೊಡಗಬಾರದು. ಇದು ರಾಹುಲ್ ಗಾಂಧಿಯವರಿಗೆ ನನ್ನ ಮೊದಲ ಸಲಹೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.


ಇದನ್ನೂ ಓದಿ: ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ; ರಾಹುಲ್ ಗಾಂಧಿ ಹೊಸ ಬಾಂಬ್

ಹಾಗೇ, “ರಾಹುಲ್ ಗಾಂಧಿ ಭಾರತ ವಿರೋಧಿ ಶಕ್ತಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಅವರು ಆಡುತ್ತಿರುವ ಆಟಗಳು ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. “ರಾಹುಲ್ ಗಾಂಧಿ ಯುವಪೀಳಿಗೆಯನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ದೇಶದ ಯುವಕರು ಬುದ್ಧಿವಂತರು. ಅವರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ನಿಲ್ಲುತ್ತಾರೆ” ಎಂದು ಕಿರಣ್ ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ