ದೆಹಲಿ: ನಾವು ಕೊರೊನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡಿದ್ದು ಹೇಗೆ? ಭಾರತದಲ್ಲಿ ಕೊರೊನಾದಿಂದ ಕನಿಷ್ಠ ನಷ್ಟ ಸಂಭವಿಸಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಭಾಷಣ. ಪ್ರಧಾನಿ ಮೋದಿ, 35 ಬಾರಿ ದೇಶವನ್ನುದ್ದೇಶಿಸಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಒಗ್ಗೂಡಿ ಹೋರಾಡಲು ವಾತಾವರಣ ನಿರ್ಮಾಣವಾಗಿದೆ ಎಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದಾರೆ.
2014 ರಿಂದ ಸಂಸದರು ಪ್ರಾದೇಶಿಕ ಭಾಷೆಗಳಲ್ಲಿ ಮಾತಾಡ್ತಿದ್ದಾರೆ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳು ಹಿಂದಿಗೆ ಪೂರಕವಾಗಿವೆ. ಹಿಂದಿ ಭಾಷೆ ಭಾರತದ ಯಾವುದೇ ಭಾಷೆ ಜತೆ ಸ್ಪರ್ಧೆ ಮಾಡ್ತಿಲ್ಲ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಸ್ನೇಹಿತ ಇದ್ದಂತೆ. ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಪೋತ್ಸಾಹಿಸಬೇಕು ಎಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರದ ಏಕತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯಾಗಿ ಹಿಂದಿ ಭಾಷೆ ಬಳಕೆಯ ಮಹತ್ವ ಮತ್ತು ಅಗತ್ಯದ್ದು ಎಂದು ಅಮಿತ್ ಶಾ ಹೇಳಿದ್ದಾರೆ. ಆತ್ಮನಿರ್ಭರ್ ಭಾರತ ವಿಚಾರವನ್ನು ಇದೇ ವೇಳೆ ಶಾ ಪ್ರಸ್ತಾಪಿಸಿದ್ದಾರೆ. ಆತ್ಮನಿರ್ಭರ್ ಭಾರತ್ ಎಂದರೆ ಭಾಷೆಯ ವಿಚಾರದಲ್ಲೂ ಆತ್ಮನಿರ್ಭರ ಆಗಿರುವುದು. ಹಾಗಾಗಿ ಮಾತೃಭಾಷೆ ಹಾಗೂ ಅಧಿಕೃತ ಭಾಷೆಯ ಹೊಂದಾಣಿಕೆಯಿಂದ ಆತ್ಮನಿರ್ಭರತೆ ಸಾಧ್ಯವಾಗಬೇಕು. ದೇಶದ ಜನರು, ಅಧಿಕೃತ ಭಾಷೆ ಆಗಿರುವ ಹಿಂದಿ ಭಾಷೆಯನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.
ಆತ್ಮನಿರ್ಭರ್ ಎಂದರೆ ಇಲ್ಲಿನ ಉತ್ಪಾದನೆ ಮಾತ್ರವಲ್ಲ, ಬದಲಾಗಿ ಭಾಷೆಯ ಆತ್ಮನಿರ್ಭರ್ ಕೂಡ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿ ಭಾಷೆ ಪ್ರಾಚೀನ ನಾಗರಿಕತೆ ಹಾಗೂ ಆಧುನಿಕತೆಯ ನಡುವಿನ ಸೇತುವೆ ಇದ್ದಂತೆ ಎಂದೂ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂತಾರಾಷ್ಟ್ರೀಯವಾಗಿ ಹಿಂದಿ ಮಾತನಾಡಬಹುದು ಅಂತಾದರೆ ನಾವು ಯಾಕೆ ನಾಚಿಗೆ ಪಟ್ಟುಕೊಳ್ಳಬೇಕು? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. ಸರ್ಕಾರವು ಹಿಂದಿ ಹಾಗೂ ದೇಶದ ಇತರ ಭಾಷೆಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಹಿಂದಿ ದಿವಸ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜನಾಥ್ ಸಿಂಗ್ ಕೂಡ ಇವತ್ತು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ; ಸೆ.14 ಕನ್ನಡ ದಿನವನ್ನಾಗಿ ಘೋಷಿಸುವಂತೆ ಕರವೇ ಕಾರ್ಯಕರ್ತರ ಆಗ್ರಹ
ಇದನ್ನೂ ಓದಿ: Stop Hindi Imposiotion; ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ, ಕನ್ನಡಿಗರು ಕೈ ಜೋಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ