ಭ್ರಷ್ಟ ಡಿಎಂಕೆ ಸರ್ಕಾರದ ಸೇಡಿನ ಕ್ರಮ ಜಾರಿಗೊಳಿಸುವುದಷ್ಟೇ ತಮಿಳುನಾಡು ಪೊಲೀಸರ ಕೆಲಸವೇ; ಬಿಜೆಪಿ ನಾಯಕ ಅಣ್ಣಾಮಲೈ ಪ್ರಶ್ನೆ
ಹಿರಿಯ ರಾಜಕೀಯ ವಿಶ್ಲೇಷಕ, ಯೂಟ್ಯೂಬರ್, ಪ್ರಸಿದ್ಧ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬದರಿ ಶೇಷಾದ್ರಿ ಅವರನ್ನು ಬಂಧಿಸಿರುವ ವಿಚಾರವಾಗಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈ: ಭ್ರಷ್ಟ ಡಿಎಂಕೆ ಸರ್ಕಾರದ ಸೇಡಿನ ಕ್ರಮ ಜಾರಿಗೊಳಿಸುವುದಷ್ಟೇ ತಮಿಳುನಾಡು ಪೊಲೀಸರ ಕೆಲಸವೇ ಎಂದು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಪ್ರಶ್ನಿಸಿದ್ದಾರೆ. ಅವರ ನೇತೃತ್ವದಲ್ಲಿ ಆರಂಭವಾಗಿರುವ ‘ಎನ್ ಮಣ್ಣ್ ಎನ್ ಮಕ್ಕಳ್’ (En Mann En Makkal) ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾಮೇಶ್ವರಂನಲ್ಲಿ ಚಾಲನೆ ನೀಡಿದ್ದರು. ಯಾತ್ರೆ ಪ್ರಗತಿಯಲ್ಲಿದ್ದು, ಇದೇ ವೇಳೆ, ತಮಿಳುನಾಡು ಸರ್ಕಾರದ ರಾಜಕೀಯ ಕ್ರಮಗಳ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ರಾಜಕೀಯ ವಿಶ್ಲೇಷಕ, ಯೂಟ್ಯೂಬರ್, ಪ್ರಸಿದ್ಧ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬದರಿ ಶೇಷಾದ್ರಿ ಅವರನ್ನು ಬಂಧಿಸಿರುವ ವಿಚಾರವಾಗಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಣ್ಣಾಮಲೈ, ಶೇಷಾದ್ರಿ ಅವರನ್ನು ಇಂದು ಬೆಳಗ್ಗೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಇದನ್ನು ತಮಿಳುನಾಡು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಈ ಭ್ರಷ್ಟ ಡಿಎಂಕೆ ಸರ್ಕಾರವು ಸಾಮಾನ್ಯ ಜನರ ಅಭಿಪ್ರಾಯಗಳನ್ನು ಹತ್ತಿಕ್ಕಲು ಬಂಧನಕ್ಕೆ ಆದೇಶ ನೀಡುತ್ತಿದೆ. ಭ್ರಷ್ಟ ಡಿಎಂಕೆ ಸರ್ಕಾರದ ಸೇಡಿನ ಕ್ರಮಗಳನ್ನು ಜಾರಿಗೊಳಿಸುವುದು ಮಾತ್ರ ತಮಿಳುನಾಡು ಪೊಲೀಸರ ಕೆಲಸವೇ ಎಂದು ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಬಗ್ಗೆ ನೀಡಿದ್ದ ಹೇಳಿಕೆಗಾಗಿ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Tamil Nadu: ರಾಮೇಶ್ವರಂನಲ್ಲಿ ಅಣ್ಣಾಮಲೈ ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ ಪಾದಯಾತ್ರೆಗೆ ಅಮಿತ್ ಶಾ ಚಾಲನೆ
ಮಣಿಪುರ ಹಿಂಸಾಚಾರದ ವಿಷಯದಲ್ಲಿ ನ್ಯಾಯಾಲಯ ವಿನಾ ಕಾರಣ ಮಧ್ಯಪ್ರವೇಶ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸಿಜೆಐ ಅವರು ಮಣಿಪುರದಲ್ಲಿ ಬಂದೂಕು ಹಿಡಿದು ನಿಲ್ಲುವ ಧೈರ್ಯ ಮಾಡುತ್ತಾರಾ ಎಂದೂ ಅವರು ಪ್ರಶ್ನಿಸಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸುಪ್ರೀಂ ಕೋರ್ಟ್ ಆಗಲೀ ನ್ಯಾಯಾಂಗವಾಗಲೀ ಯಾವುದೇ ಸೂಚನೆ ನೀಡದೆ ತಮಿಳುನಾಡು ಸರ್ಕಾರವು ರಾಜಕೀಯ ಪ್ರೇರಿತವಾಗಿ ಶೇಷಾದ್ರಿ ಅವರನ್ನು ಬಂಧಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ