Ram Gopal Varma: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಬಗ್ಗೆ ವಿವಾದಾತ್ಮಕ ಟ್ವೀಟ್; ರಾಮ್​ಗೋಪಾಲ್ ವರ್ಮ ವಿರುದ್ಧ ದೂರು ದಾಖಲು

| Updated By: ಸುಷ್ಮಾ ಚಕ್ರೆ

Updated on: Jun 25, 2022 | 7:43 AM

Draupadi Murmu: "ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಎಲ್ಲದಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದು ರಾಮ್​ಗೋಪಾಲ್ ವರ್ಮ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

Ram Gopal Varma: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಬಗ್ಗೆ ವಿವಾದಾತ್ಮಕ ಟ್ವೀಟ್; ರಾಮ್​ಗೋಪಾಲ್ ವರ್ಮ ವಿರುದ್ಧ ದೂರು ದಾಖಲು
ರಾಮ್​ ಗೋಪಾಲ್ ವರ್ಮ
Follow us on

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಿನಿಮಾ ನಿರ್ದೇಶಕ ರಾಮ್​ಗೋಪಾಲ್ ವರ್ಮ (Ram Gopal Varma) ಇದೀಗ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಅವರ ವಿರುದ್ಧ ವಿವಾದಾತ್ಮಕ ಟ್ವೀಟ್‌ ಮಾಡುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ರಾಮ್​ಗೋಪಾಲ್ ವರ್ಮ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ. ನಂದೇಶ್ವರ್ ಗೌಡ್ ಅವರು ರಾಮ್​ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್‌ನ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ತಾವು ಮಾಡಿದ ಟ್ವೀಟ್​​ನಲ್ಲಿ ತಪ್ಪೇನಿದೆ? ಯಾರನ್ನೂ ನೋಯಿಸಲು ಆ ರೀತಿ ಟ್ವೀಟ್ ಮಾಡಲಿಲ್ಲ ಎಂದು ರಾಮ್​ಗೋಪಾಲ್ ವರ್ಮ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಮೈತ್ರಿಕೂಟಗಳ (ಎನ್‌ಡಿಎ) ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ವಿರುದ್ಧ ರಾಮ್​ಗೋಪಾಲ್ ವರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಜೂನ್ 22ರಂದು ಈ ಬಗ್ಗೆ ಟ್ವೀಟ್ ಮಾಡಿದ್ದ ರಾಮ್​ಗೋಪಾಲ್ ವರ್ಮ, “ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಎಲ್ಲದಕ್ಕಿಂತ ಮುಖ್ಯವಾಗಿ ಕೌರವರು ಯಾರು?” ಎಂದಿದ್ದರು.

ಇದನ್ನೂ ಓದಿ: Draupadi Murmu: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ

ಈ ಟ್ವೀಟ್ ಭಾರೀ ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ದೂರಿನ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು, ಈ ಬಗ್ಗೆ ನಿನ್ನೆ ಮತ್ತೆ ಸ್ಪಷ್ಟನೆ ನೀಡಿರುವ ರಾಮ್​ಗೋಪಾಲ್ ವರ್ಮ, ‘ಇದನ್ನು ನಾನು ವ್ಯಂಗ್ಯವಾಗಿ ಹೇಳಿಲ್ಲ. ಮಹಾಭಾರತದಲ್ಲಿರುವ ದ್ರೌಪದಿ ನನಗೆ ಬಹಳ ಇಷ್ಟವಾದ ಪಾತ್ರ. ಆದರೆ, ಆ ಹೆಸರನ್ನು ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಿದೆ. ಹೀಗಾಗಿ, ದ್ರೌಪದಿ ಎಂಬ ಹೆಸರು ಕೇಳಿದೊಡನೆ ನಾನು ಮಹಾಭಾರತದ ಪಾತ್ರವನ್ನು ನೆನಪಪಿಸಿಕೊಂಡೆ. ಅದರಲ್ಲಿ ಬೇರೆ ಯಾವುದೇ ರೀತಿಯ ಉದ್ದೇಶವಿಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರಲು ನಾನು ಆ ರೀತಿ ಹೇಳಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.