
ನವದೆಹಲಿ, ಅಕ್ಟೋಬರ್ 20: ಎಸ್ಐಆರ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಯೆಟ್ನಾಮ್‌ಗೆ ಪ್ರವಾಸ ಕೈಗೊಂಡಿರುವುದನ್ನು ಗೇಲಿ ಮಾಡಿ ಬಿಜೆಪಿ ವ್ಯಂಗ್ಯವಾಡಿದೆ. “ದೇಶಾದ್ಯಂತ ಸುಳ್ಳುಗಳನ್ನು ಹರಡಿ ವಿರಾಮ ತೆಗೆದುಕೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಬಿಜೆಪಿ, ರಾಹುಲ್ ಗಾಂಧಿ ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ನಲ್ಲಿ ಕುಳಿತಿರುವುದನ್ನು ತೋರಿಸುವ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿಮಾನದ ಒಳಗೆ ರಾಹುಲ್ ಗಾಂಧಿ ಕುಳಿತಿರುವುದನ್ನು ತೋರಿಸುವ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. “ತುಂಬಾ ಆಯಾಸಗೊಂಡಿದ್ದೀರಾ?” ಎಂಬ ಕ್ಯಾಪ್ಷನ್ ಹಾಕಿರುವ ಬಿಜೆಪಿ, ಭಾರತದಲ್ಲಿ ರಾಜಕೀಯ ಬಿಕ್ಕಟ್ಟುಗಳು ಹಾಗೂ ಪ್ರಮುಖ ಪ್ರತಿಭಟನೆಗಳ ಸಮಯದಲ್ಲೂ ರಾಹುಲ್ ಗಾಂಧಿ ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದು ಟೀಕಿಸಿದೆ.
“ನಾನು ಸುಳ್ಳುಗಳನ್ನು ಹರಡಿ ಆಯಾಸಗೊಂಡಿದ್ದೇನೆ. ಹಾಗಾಗಿ ಕೆಲವು ದಿನಗಳ ಕಾಲ ವಿಯೆಟ್ನಾಮ್‌ನಲ್ಲಿ ಸುತ್ತಾಡಿಕೊಂಡು ಬರುತ್ತೇನೆ. ಇದು ಯಾರಿಗೂ ಕಂಡುಹಿಡಿಯೋಕೆ ಸಾಧ್ಯವೇ ಇಲ್ಲ” ಎಂದು ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಚುನಾವಣೆಗೆ ಸಿದ್ಧತೆ ನಡೆಸಿರುವ ಗೋವಾದಲ್ಲಿ ನಡೆದ ‘ಗೋವಾ ರಕ್ಷಕೋ ಯಾತ್ರೆ’ಯಲ್ಲಿ ಭಾಗವಹಿಸಿ ಪಕ್ಷದ ನಾಯಕರೊಂದಿಗೆ 2 ಕಿಲೋಮೀಟರ್ ನಡೆದ ನಂತರ ರಾಹುಲ್ ಗಾಂಧಿ ಈ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮುಂದಿನ ವರ್ಷ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಚುನಾವಣಾ ದುರ್ನಡತೆ ಆರೋಪ ಮಾಡಿ ಕಾಂಗ್ರೆಸ್ ಮತ್ತು ಇತರ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲೇ ಬಿಜೆಪಿಯ ಈ ವ್ಯಂಗ್ಯ ಹೊರಬಿದ್ದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Tue, 20 October 26