ಸರ್ಕಾರ ಉರುಳಿಸಲು 7 ಎಎಪಿ ಶಾಸಕರಿಗೆ ಬಿಜೆಪಿ ₹ 25 ಕೋಟಿ ಆಫರ್ ನೀಡಿತ್ತು: ಕೇಜ್ರಿವಾಲ್

ಬಿಜೆಪಿ ವಿರುದ್ಧ ಆರೋಪ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್,ತಮ್ಮ ಸರ್ಕಾರ ದೆಹಲಿಯ ಜನರಿಗಾಗಿ ಎಷ್ಟು ಕೆಲಸ ಮಾಡಿದೆ ಎಂದು "ಈ ಜನರಿಗೆ" ತಿಳಿದಿದೆ. ಅವರು ಸೃಷ್ಟಿಸಿದ ಎಲ್ಲಾ ಅಡೆತಡೆಗಳ ಹೊರತಾಗಿಯೂ, ನಾವು ತುಂಬಾ ಸಾಧಿಸಿದ್ದೇವೆ. ದೆಹಲಿಯ ಜನರು ಎಎಪಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಆದ್ದರಿಂದ, ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸುವುದು ಅವರಿಂದ ಸಾಧ್ಯವಿಲ್ಲ ಎಂದಿದ್ದಾರೆ.

ಸರ್ಕಾರ ಉರುಳಿಸಲು 7 ಎಎಪಿ ಶಾಸಕರಿಗೆ ಬಿಜೆಪಿ ₹ 25 ಕೋಟಿ ಆಫರ್ ನೀಡಿತ್ತು: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 27, 2024 | 1:42 PM

ದೆಹಲಿ ಜನವರಿ 27:  ತಮ್ಮ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಲಾಗಿದೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ (AAP) ಏಳು ಶಾಸಕರಿಗೆ ಬಿಜೆಪಿ (BJP) ಸೇರಲು ₹ 25 ಕೋಟಿ ಆಫರ್ ಮಾಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಇತ್ತೀಚೆಗೆ ಅವರು ದೆಹಲಿಯಲ್ಲಿರುವ ನಮ್ಮ 7 ಶಾಸಕರನ್ನು ಸಂಪರ್ಕಿಸಿ, ‘ಕೆಲವು ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ಆ ಬಳಿಕ ಶಾಸಕರನ್ನು ವಿಭಜನೆ ಮಾಡುತ್ತೇವೆ. 21 ಶಾಸಕರ ಜತೆ ಮಾತುಕತೆ ನಡೆಸಲಾಗಿದೆ. ಇತರರೊಂದಿಗೆ ಸಹ ಮಾತನಾಡುತ್ತೇವೆ. ಆ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವು ಕೂಡ ಬರಬಹುದು. ನಾವು₹ 25 ಕೋಟಿ ನೀಡುತ್ತೇವೆ, ನೀವು ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಬಿಜೆಪಿ ಹೇಳಿರುವುದಾಗಿ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.

21 ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದರೂ, ನಮ್ಮ ಮಾಹಿತಿಯ ಪ್ರಕಾರ, ಅವರು ಇದುವರೆಗೆ ಏಳು ಶಾಸಕರನ್ನು ಮಾತ್ರ ಸಂಪರ್ಕಿಸಿದ್ದಾರೆ. ಅವರೆಲ್ಲರೂ (ಬಿಜೆಪಿ ಸೇರಲು) ನಿರಾಕರಿಸಿದ್ದಾರೆ ಎಂದಿದ್ದಾರೆ ಕೇಜ್ರಿವಾಲ್.

ಇದರರ್ಥ ಯಾವುದೇ ಮದ್ಯ ಹಗರಣದ ತನಿಖೆಗಾಗಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದರೆ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ, ಅವರು ನಮ್ಮ ಸರ್ಕಾರವನ್ನು ಉರುಳಿಸಲು ಅನೇಕ ಪಿತೂರಿಗಳನ್ನು ರೂಪಿಸಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸಿದರು. ನಮ್ಮ ಎಲ್ಲಾ ಶಾಸಕರು ಕೂಡ ಬಲವಾಗಿ ಜೊತೆಯಾಗಿದ್ದಾರೆ. ಈ ಬಾರಿಯೂ ಈ ಜನರು ತಮ್ಮ ಕೆಟ್ಟ ಉದ್ದೇಶಗಳಲ್ಲಿ ವಿಫಲರಾಗುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ತಮ್ಮ ಸರ್ಕಾರ ದೆಹಲಿಯ ಜನರಿಗಾಗಿ ಎಷ್ಟು ಕೆಲಸ ಮಾಡಿದೆ ಎಂದು “ಈ ಜನರಿಗೆ” ತಿಳಿದಿದೆ. ಅವರು ಸೃಷ್ಟಿಸಿದ ಎಲ್ಲಾ ಅಡೆತಡೆಗಳ ಹೊರತಾಗಿಯೂ, ನಾವು ತುಂಬಾ ಸಾಧಿಸಿದ್ದೇವೆ. ದೆಹಲಿಯ ಜನರು ಎಎಪಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಆದ್ದರಿಂದ, ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸುವುದು ಅವರಿಂದ ಸಾಧ್ಯವಿಲ್ಲ. ಹಾಗಾಗಿ ನಕಲಿ ಮದ್ಯದ ಹಗರಣದ ನೆಪದಲ್ಲಿ ಅವರನ್ನು ಬಂಧಿಸುವ ಮೂಲಕ ಸರ್ಕಾರವನ್ನು ಉರುಳಿಸಲು ಅವರು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಚುನಾವಣೆಗೆ ಮುನ್ನವೇ ಸಮನ್ಸ್ ಏಕೆ?: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

ಆದಾಗ್ಯೂ, ದೆಹಲಿ ಬಿಜೆಪಿ ಘಟಕ ಈ ಆರೋಪವನ್ನು ತಳ್ಳಿಹಾಕಿದ್ದು,ಆಫರ್‌ನೊಂದಿಗೆ ತಮ್ಮನ್ನು ಸಂಪರ್ಕಿಸಿದ ಶಾಸಕರು ಮತ್ತು ಜನರನ್ನು ಹೆಸರಿಸುವಂತೆ ಎಎಪಿಗೆ ಸವಾಲು ಹಾಕಿದೆ. ದೆಹಲಿಯಲ್ಲಿ ಬಿಜೆಪಿ ‘ಆಪರೇಷನ್ ಕಮಲ 2.0’ ಆರಂಭಿಸಿದೆ ಎಂದು ದೆಹಲಿ ಸಚಿವ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅವರು ಕಳೆದ ವರ್ಷ ಎಎಪಿ ಶಾಸಕರಿಗೆ ಹಣ ನೀಡುವ ಮೂಲಕ ಬೇಟೆಯಾಡಲು ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದರು. ಆದರೆ ವಿಫಲರಾದರು ಎಂದಿದ್ದಾರೆ ಅತಿಶಿ.

ಆರೋಪವನ್ನು ತಳ್ಳಿಹಾಕಿದ ದೆಹಲಿ ಬಿಜೆಪಿ ಕಾರ್ಯದರ್ಶಿ ಹರೀಶ್ ಖುರಾನಾ, ಅತಿಶಿ ಅವರನ್ನು ಸಂಪರ್ಕಿಸಿದ ಶಾಸಕರನ್ನು ಮತ್ತು ಆಫರ್‌ನೊಂದಿಗೆ ಅವರನ್ನು ತಲುಪಿದವರ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಮದ್ಯ ಹಗರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಸಮನ್ಸ್‌ಗಳನ್ನು ಕೇಜ್ರಿವಾಲ್ ಕಡೆಗಣಿಸುತ್ತಿದ್ದು, ಎಎಪಿ ಗಮನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಖುರಾನಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ