ಕೋಲ್ಕತ್ತಾ ಅತ್ಯಾಚಾರ-ಕೊಲೆ ಅಪರಾಧದ ಸ್ಥಳ ಬಳಿ ನವೀಕರಣಕ್ಕೆ ಸಂದೀಪ್ ಘೋಷ್ ಆದೇಶ?; ಪತ್ರ ಟ್ವೀಟ್ ಮಾಡಿದ ಬಿಜೆಪಿ
ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ನಿರ್ದೇಶಕ ಸಂದೀಪ್ ಘೋಷ್ ಅವರು ಸಹಿ ಮಾಡಿದ ಆದೇಶದಲ್ಲಿರುವ ದಿನಾಂಕ ಆಗಸ್ಟ್ 10 ಆಗಿದೆ. ಅಂದರೆ ವೈದ್ಯೆಯ ಕೊಲೆ ನಡೆದ ಮರುದಿನ ಸಹೋದ್ಯೋಗಿಗಳು ಮತ್ತು ಪ್ರತಿಭಟನಾಕಾರರು ಅಪರಾಧದ ಸ್ಥಳವನ್ನು ಹಾಳುಮಾಡುವ ಬಗ್ಗೆ ಆರೋಪಿಸಿದರೂ, ಪೊಲೀಸ್ ಕಮಿಷನರ್ ಅದನ್ನು ನಿರಾಕರಿಸಿದರು ಎಂದು ಮಜುಂದಾರ್ ಎಕ್ಸ್ನಲ್ಲಿ ಬರೆದಿದ್ದಾರೆ
ದೆಹಲಿ ಸೆಪ್ಟೆಂಬರ್ 05: ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ (Kolkata’s RG Kar Medical College and Hospital) ವೈದ್ಯೆಯ ಅತ್ಯಾಚಾರ-ಕೊಲೆಯಾದ ನಂತರ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಅವರು ಸೆಮಿನಾರ್ ಹಾಲ್ ಬಳಿ ನವೀಕರಣಕ್ಕೆ ಆದೇಶ ನೀಡಿದ್ದರು ಎಂದು ಬಂಗಾಳ ಬಿಜೆಪಿ (BJP) ಮುಖ್ಯಸ್ಥ ಸುಕಾಂತ ಮಜುಂದಾರ್ ಗುರುವಾರ ಆರೋಪಿಸಿದ್ದಾರೆ. ನವೀಕರಣಕ್ಕೆ ಆದೇಶಿಸಿರುವ ಸಂದೀಪ್ ಘೋಷ್ ಅವರು ಸಹಿ ಮಾಡಿದ ಪತ್ರವನ್ನು ಮಜುಂದಾರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
“ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ನಿರ್ದೇಶಕ ಸಂದೀಪ್ ಘೋಷ್ ಅವರು ಸಹಿ ಮಾಡಿದ ಆದೇಶದಲ್ಲಿರುವ ದಿನಾಂಕ ಆಗಸ್ಟ್ 10 ಆಗಿದೆ. ಅಂದರೆ ವೈದ್ಯೆಯ ಕೊಲೆ ನಡೆದ ಮರುದಿನ ಸಹೋದ್ಯೋಗಿಗಳು ಮತ್ತು ಪ್ರತಿಭಟನಾಕಾರರು ಅಪರಾಧದ ಸ್ಥಳವನ್ನು ಹಾಳುಮಾಡುವ ಬಗ್ಗೆ ಆರೋಪಿಸಿದರೂ, ಪೊಲೀಸ್ ಕಮಿಷನರ್ ಅದನ್ನು ನಿರಾಕರಿಸಿದರು ಎಂದು ಮಜುಂದಾರ್ ಎಕ್ಸ್ನಲ್ಲಿ ಬರೆದಿದ್ದಾರೆ. ಸಂದೀಪ್ ಘೋಷ್ ಅವರು ಕೋಲ್ಕತ್ತಾದ PWD ಯ ಹಲವಾರು ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಬರೆದ ಮೆಮೊದಲ್ಲಿ ಶೌಚಾಲಯಗಳನ್ನು ಸರಿಪಡಿಸಲು ಬಯಸಿದ್ದಾರೆ.
ಸುಕಾಂತ ಮಜುಂದಾರ್ ಟ್ವೀಟ್
The order, signed by Sandip Ghosh, former director of RG Kar Medical College, is dated August 10, just one day after the victim’s death. Despite allegations from colleagues and protesters about tampering with the crime scene, the Police Commissioner denied it. @CBIHeadquarters pic.twitter.com/FEOirTn0ho
— Dr. Sukanta Majumdar (@DrSukantaBJP) September 5, 2024
ಕೋಲ್ಕತ್ತಾದ ಆರ್‌ಜಿಕೆಎಂಸಿ ಮತ್ತು ಎಚ್‌ನ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರತ ವೈದ್ಯರ ಕೊಠಡಿಗಳು ಮತ್ತು ಶೌಚಾಲಯಗಳ ಕೊರತೆಗಳಿವೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಇಂದು ಪಶ್ಚಿಮ ಬಂಗಾಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಪತ್ರದಲ್ಲಿದೆ.
ನವೀಕರಣ ಕಾರ್ಯವು ಬೆಳಕಿಗೆ ಬಂದ ನಂತರ, ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯವನ್ನು ಹಾಳುಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದವು.
ವೈದ್ಯೆಯ ಹತ್ಯೆಯ ನಂತರ ಘೋಷ್ ಅವರ ಪಾತ್ರವನ್ನು ಪ್ರಶ್ನಿಸಲಾಗಿದೆ. ವೈದ್ಯೆಯ ಕೊಲೆಯಾದ ನಂತರ ಸಂತ್ರಸ್ತೆಯ ಕುಟುಂಬಕ್ಕೆ ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದರು. ಮಗಳ ಶವವನ್ನು ನೋಡಲು ಮೂರು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಇದನ್ನೂ ಓದಿ: Arvind Kejriwal bail: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿರುವ ಬಗ್ಗೆಯೂ ಸುಪ್ರೀಂಕೋರ್ಟ್ ಬಂಗಾಳ ಸರ್ಕಾರವನ್ನು ಪ್ರಶ್ನಿಸಿತ್ತು. ಸಂದೀಪ್ ಘೋಷ್ ಅವರನ್ನು ಸಿಬಿಐ ಈ ವಾರದ ಆರಂಭದಲ್ಲಿ ಶವಗಳನ್ನು ಮಾರಾಟ ಮಾಡುವುದು ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ಮೇಲೆ ಬಂಧಿಸಿತ್ತು.
ಸೆಮಿನಾರ್ ಹಾಲ್‌ನಲ್ಲಿ ತನ್ನ 36 ಗಂಟೆಗಳ ಸುದೀರ್ಘ ಶಿಫ್ಟ್ ನಡುವೆ ಮಲಗಿದ್ದಾಗ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ.ಅಪರಾಧಕ್ಕಾಗಿ ಸಂಜಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ